ಮುಂಬೈ: ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗಿಂತ ‘ನೋಟಾ’ಗೇ ಅಧಿಕ ಮತಗಳು ಚಲಾವಣೆಯಾದರೆ, ಅಂತಹ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸುವಂತಹ ಕ್ರಾಂತಿಕಾರಕ ನಿರ್ಧಾರವೊಂದನ್ನು ದೇಶದಲ್ಲೇ ಮೊದಲ ಬಾರಿಗೆ ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಕೈಗೊಂಡಿದೆ.

ಮಹಾರಾಷ್ಟ್ರದಲ್ಲಿ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಣೆ ಹೊತ್ತಿರುವ ಆಯೋಗದ ಈ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬಂದಿದೆ. ಡಿ.9ರಂದು ಅಹಮದ್‌ನಗರ ಹಾಗೂ ಧುಲೆಯಲ್ಲಿ ನಗರಪಾಲಿಕೆ ಚುನಾವಣೆಗಳು ನಡೆಯಲಿದ್ದು, ನೂತನ ‘ನೋಟಾ’ ನಿಯಮ ಅನ್ವಯವಾಗಲಿದೆ ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಶೇಖರ್‌ ಚನ್ನೆ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿರುವ ಯಾವುದೇ ಅಭ್ಯರ್ಥಿಗೂ ಮತ ಹಾಕಲು ಬಯಸದ ಮತದಾರರಿಗಾಗಿ ‘ಮೇಲಿನವರಲ್ಲಿ ಯಾರೂ ಅಲ್ಲ’ (ನನ್‌ ಆಫ್‌ ದ ಎಬೋವ್‌- ನೋಟಾ) ಎಂಬ ಆಯ್ಕೆಯನ್ನು ಐದು ವರ್ಷಗಳ ಹಿಂದೆ ಸುಪ್ರೀಂಕೋರ್ಟ್‌ ಒದಗಿಸಿತ್ತು. ಎಲ್ಲ ಹಂತದ ಚುನಾವಣೆಗಳಲ್ಲೂ ಈ ಆಯ್ಕೆ ಇದೆಯಾದರೂ, ಸ್ಪರ್ಧೆಯಲ್ಲಿರುವ ಎಲ್ಲ ಅಭ್ಯರ್ಥಿಗಳಿಗಿಂತ ನೋಟಾಗೇ ಹೆಚ್ಚು ಮತ ಬಂದರೆ ಅದು ಪರಿಗಣನೆಯಾಗುವುದಿಲ್ಲ. ಯಾವ ಅಭ್ಯರ್ಥಿ ಹೆಚ್ಚು ಮತ ಪಡೆದಿರುತ್ತಾನೋ ಆತನನ್ನೇ ವಿಜೇತ ಎಂದು ಘೋಷಿಸುವ ಪದ್ಧತಿ ಜಾರಿಯಲ್ಲಿದೆ.

ಒಂದು ವೇಳೆ ನೋಟಾಗೇ ಅಧಿಕ ಮತ ಬಂದರೆ, ಅಂತಹ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸಬೇಕು ಎಂಬ ಕೂಗು ಕೇಳಿಬಂದಿತ್ತಾದರೂ ಕೇಂದ್ರ ಚುನಾವಣಾ ಆಯೋಗವೂ ಅದನ್ನು ಪರಿಗಣಿಸಿರಲಿಲ್ಲ. ಆದರೆ ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಅದನ್ನು ಜಾರಿಗೆ ತರುವ ಮೂಲಕ ಗಮನ ಸೆಳೆದಿದೆ. ಹೀಗಾಗಿ ಇನ್ನು ಮುಂದೆ ಮಹಾರಾಷ್ಟ್ರ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನೋಟಾ ಕೂಡ ಅಭ್ಯರ್ಥಿಗಳ ನಿದ್ರೆಗೆಡಿಸುವುದು ನಿಶ್ಚಿತವಾಗಿದೆ.