ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿಯಾಗಿರುವ ‘ಯುವನಿಧಿ’ಗೆ ನೋಂದಣಿ ಪ್ರಕ್ರಿಯೆ ಇದೇ ತಿಂಗಳು 26ರಂದು ಆರಂಭವಾಗಲಿದ್ದು, ಜ.12ರಂದು ಫಲಾನುಭವಿಗಳ ಖಾತೆಗಳಿಗೆ ಹಣ ಜಮೆ ಮಾಡುವ ಕಾರ್ಯ ಪ್ರಾರಂಭವಾಗಲಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಬೆಂಗಳೂರು (ಡಿ.22): ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿಯಾಗಿರುವ ‘ಯುವನಿಧಿ’ಗೆ ನೋಂದಣಿ ಪ್ರಕ್ರಿಯೆ ಇದೇ ತಿಂಗಳು 26ರಂದು ಆರಂಭವಾಗಲಿದ್ದು, ಜ.12ರಂದು ಫಲಾನುಭವಿಗಳ ಖಾತೆಗಳಿಗೆ ಹಣ ಜಮೆ ಮಾಡುವ ಕಾರ್ಯ ಪ್ರಾರಂಭವಾಗಲಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರು. ಮತ್ತು ಡಿಪ್ಲೋಮಾ ತೇರ್ಗಡೆಯಾದರಿಗೆ ಮಾಸಿಕ 1,500 ರು. ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ.
ಇದೇ ತಿಂಗಳು 26ರಂದು ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯುವನಿಧಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮುಂದಿನ ತಿಂಗಳು 12ರಂದು ಶಿವಮೊಗ್ಗದಲ್ಲಿ ಆಯೋಜಿಸುವ ಸಮಾರಂಭದಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ತಿಳಿಸಿದರು. ಈ ಯುವನಿಧಿಗೆ ಸುಮಾರು 5 ಲಕ್ಷದ 30 ಸಾವಿರ ಫಲಾನುಭವಿಗಳು ಇರುವುದಾಗಿ ಅಂದಾಜಿಸಲಾಗಿದ್ದು, ಇವರಲ್ಲಿ 4 ಲಕ್ಷದ 81 ಸಾವಿರ ಪದವೀಧರರು ಹಾಗೂ 48,153 ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದ ಯುವ ಜನಾಂಗದವರಿದ್ದಾರೆ. ಈ ಸಾಲಿಗೆ ನಿರುದ್ಯೋಗ ಭತ್ಯೆ ನೀಡಲು 250 ಕೋಟಿ ರು. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪದವಿ ಹಾಗೂ ಡಿಪ್ಲೋಮಾ ಮುಗಿದ ಆರು ತಿಂಗಳವರೆಗೆ ಯಾವುದೇ ಕೆಲಸ ಸಿಗದವರು ಈ ಯುವನಿಧಿ ಯೋಜನೆಯ ಲಾಭ ಪಡೆಯುವ ಫಲಾನುಭವಿಗಳಾಗಿರುತ್ತಾರೆ. ಎರಡು ವರ್ಷದೊಳಗೆ ಕೆಲಸ ಸಿಕ್ಕರೆ ಭತ್ಯೆ ಸ್ಥಗಿತ ಮಾಡಲಾಗುವುದು. ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ಕನಿಷ್ಠ ಆರು ವರ್ಷಗಳ ಕಾಲ ರಾಜ್ಯದಲ್ಲಿ ನೆಲೆಸಿ ವ್ಯಾಸಂಗ ಮಾಡಿರಬೇಕು ಎಂದರು.
ಅತಿರೇಕದ ವರ್ತನೆ ಬಿಡಿ ಅಭಿವೃದ್ಧಿ ಕೆಲಸ ಮಾಡಿ: ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ
ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್ ಕೇಂದ್ರಗಳ ಮೂಲಕವೂ ಸೇವಾಸಿಂಧು ಜಾಲ ತಾಣದ ಮೂಲಕ ಅರ್ಜಿ ಸಲ್ಲಿಸಬಹುದು. ಆಧಾರ್ ಸಂಖ್ಯೆ ನಮೂದಿಸಿ ಒಟಿಪಿ ಪಡೆದು ಕೆವೈಸಿ ಪಡೆದುಕೊಳ್ಳಬೇಕು. ಕರ್ನಾಟಕದ ನಿವಾಸಿಯೆಂದು ರೂಪಿಸಲು ಎಸ್‍ಎಸ್‍ಎಲ್‍ಸಿ, ಪಿಯುಸಿ ಪ್ರಮಾಣಪತ್ರ ಒದಗಿಸಬೇಕು. ಅರ್ಜಿ ಸಲ್ಲಿಕೆಯು ಸಮರ್ಪಕವಾಗಿ ಸ್ವೀಕೃತವಾದ ನಂತರ ಮೊಬೈಲ್‍ಗೆ ಸಂದೇಶ ರವಾನೆಯಾಗಲಿದೆ ಎಂದರು.
