ಪಾಸಿಟಿವಿಟಿ, ಮರಣ ಪ್ರಮಾಣ ಇಳಿಸಿ: ಸಿಎಂ ಯಡಿಯೂರಪ್ಪ
* ತುಮಕೂರು ಬಳಿಕ ಬೆಳಗಾವಿ, ಹುಬ್ಬಳ್ಳಿಯಲ್ಲಿ ಸಿಎಂ ಕೊರೋನಾ ಪರಿಶೀಲನೆ
* ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಗೆ ಇಳಿದಾಗ ಮಾತ್ರ ಲಾಕ್‌ಡೌನ್‌ನಲ್ಲಿ ಇನ್ನಷ್ಟು ವಿನಾಯಿತಿ ಸಾಧ್ಯ
* ರಾಜ್ಯಕ್ಕೆ 2 ದಿನದಲ್ಲಿ ಅಗತ್ಯ ಲಸಿಕೆ
ಹುಬ್ಬಳ್ಳಿ/ಬೆಳಗಾವಿ(ಜೂ.05): ಕೊರೋನಾ ನಿಯಂತ್ರಣಕ್ಕೆ ಸ್ವತಃ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2ನೇ ಸುತ್ತಿನಲ್ಲಿ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪರಿಶೀಲನಾ ಸಭೆ ನಡೆಸಿದರು. ಈ ಮೊದಲು ತುಮಕೂರಿನಲ್ಲಿ ಸಭೆ ನಡೆಸಿದ್ದರು.
ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜ್ಯದ ಇತರೆ ಜಿಲ್ಲೆಗಳಿಗಿಂತ ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಮರಣದ ಪ್ರಮಾಣ ಅತ್ಯಧಿಕವಾಗಿದೆ. ಇದನ್ನು ತ್ವರಿತಗತಿಯಲ್ಲಿ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ಇದರೊಂದಿಗೆ ಪಾಸಿಟಿವಿಟಿ ದರ ಶೇ.5ಕ್ಕೆ ಇಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಒಂದು ವಾರದ ಅಂಕಿ ಸಂಖ್ಯೆ ಗಮನಿಸಿದರೆ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಶೇ.1.71 ಇದೆ. ಇದು ಇತರ ಜಿಲ್ಲೆಗಳಿಗಿಂತ ಅಧಿಕವಾಗಿದೆ. ಮರಣ ಪ್ರಮಾಣ ಕಡಿಮೆಯಾಗಬೇಕು. ಹಾಗೆಯೇ ಕೊರೋನಾ ಸೋಂಕಿನ ಪಾಸಿಟಿವಿಟಿ ದರ ಶೇ.11.50ರಷ್ಟಿದೆ. ಇದು 5ಕ್ಕೆ ಇಳಿಕೆಯಾಗಬೇಕು. ಪಾಸಿಟಿವಿಟಿ ದರ ಇಳಿದಾಗ ಮಾತ್ರ ಲಾಕ್‌ಡೌನ್‌ನಲ್ಲಿ ಇನ್ನಷ್ಟು ವಿನಾಯಿತಿ ನೀಡುವ ಕುರಿತು ಚರ್ಚಿಸಬಹುದು ಎಂದರು. ರಾಜ್ಯಕ್ಕೆ 2 ದಿನದಲ್ಲಿ ಅಗತ್ಯ ಕೋವಿಡ್ ವ್ಯಾಕ್ಸಿನ್‌ಗಳು ಬರಲಿವೆ. ವ್ಯಾಕ್ಸಿನ್ ಕೊರತೆ ನೀಗಲಿದೆ. ಸರ್ಕಾರದಿಂದಲೇ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡಲಾಗುವುದು ಎಂದರು.
ರಾಜ್ಯದಲ್ಲಿ 4 ದಿನಗಳ ಬಳಿಕ 400ಕ್ಕಿಂತ ಕಡಿಮೆ ಸಾವು
ಬ್ಲ್ಯಾಕ್ ಫಂಗಸ್
ಹೆಚ್ಚುತ್ತಿರುವ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ ಸೌಲಭ್ಯಕ್ಕೆ ಒಳಪಡಿಸಬೇಕೆಂದು ಸಚಿವ ಜಗದೀಶ ಶೆಟ್ಟರ್ ಸಭೆಯ ಗಮನ ಸೆಳೆದರು. ಆಗ ಸಚಿವ ಡಾ.ಕೆ.ಸುಧಾಕರ ಮಾತನಾಡಿ, ಈಗಾಗಲೇ ಈ ಸೌಲಭ್ಯ ಇದೆ ಎಂದರು. ನನಗಿರುವ ಮಾಹಿತಿ ಪ್ರಕಾರ ಇಲ್ಲ ಎಂದು ಶೆಟ್ಟರ್ ಹೇಳಿದರು. ಡಿಎಚ್‌ಒ ಏನು ಹೇಳ್ತಾರೆ ಇದಕ್ಕೆ ಎಂದು ಡಾ. ಮದೀನಕರ್ ಅವರನ್ನು ಸುಧಾಕರ ಕೇಳಿದರು. ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಆಯುಷ್ಮಾನ ಅಡಿಯಲ್ಲಿ ಒಳಪಟ್ಟಿಲ್ಲ ಎಂದು ಡಿಎಚ್‌ಒ ಸ್ಪಷ್ಟಪಡಿಸಿದರು. ಆಗ ಸುಧಾಕರ್, ಸರಿ ಹಾಗಾದರೆ ಅದನ್ನು ಸೇರಿಸುತ್ತೇವೆ ಎಂದರು.
ಇನ್ನು ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕೋವಿಡ್ ಸಮರ್ಪಕ ನಿರ್ವಹಣೆ, ಆಕ್ಸಿಜನ್, ಲಸಿಕೆ ಪೂರೈಕೆಗೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಬಲವರ್ಧನೆಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಪರೀಕ್ಷೆ ಇನ್ನಷ್ಟು ಹೆಚ್ಚಿಸಿ:
ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು. ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯಗೊಳಿಸಬೇಕು. ಎಲ್ಲ ಹೊಸ ತಾಲೂಕುಗಳಿಗೆ ನೂರು ಹಾಸಿಗೆ ಆಸ್ಪತ್ರೆ ಮಂಜೂರು ಮಾಡಬೇಕು. ಆಯುಷ್ಮಾನ್-ಆರೋಗ್ಯ ಭಾರತ ಯೋಜನೆ ಅಡಿ ಸೇವೆ ಒದಗಿಸಿದ ಖಾಸಗಿ ಆಸ್ಪತ್ರೆಗಳ ಬಿಲ್ ಪಾವತಿಸಬೇಕು. ಆರ್‌ಎಂಪಿ ವೈದ್ಯರಿಗೂ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.