*  ಭಾರಿ ಮಳೆ ಇರುವುದರಿಂದ ಎತ್ತರದ ಅಲೆಗಳು ಸೃಷ್ಟಿಯಾಗುವ ಸಾಧ್ಯತೆ*  ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂಬ ಮುನ್ಸೂಚನೆ*  ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಬೆಂಗಳೂರು(ಜು.10): ಈಗಾಗಲೇ ಭಾರಿ ಮಳೆಗೆ ತತ್ತರಿಸಿರುವ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳವಾರದ ತನಕ ‘ಅತ್ಯಂತ ಭಾರಿ’ ಮಳೆಯ ‘ರೆಡ್‌ ಅಲರ್ಟ್‌’ (20 ಸೆಂ.ಮೀ ಗಿಂತ ಹೆಚ್ಚು ಮಳೆಯ ಸಂಭವ) ಘೋಷಿಸಲಾಗಿದೆ. 

ಈ ಅವಧಿಯಲ್ಲಿ ಮಲೆನಾಡಿನ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೆ ಭಾರಿ ಮಳೆಯ ‘ಆರೆಂಜ್‌ ಅಲರ್ಟ್‌’ ನೀಡಲಾಗಿದೆ. ಭಾನುವಾರ ಹಾಸನ, ಹಾವೇರಿ, ಧಾರವಾಡ, ಬೆಳಗಾವಿ, ವಿಜಯಪುರ, ಯಾದಗಿರಿ, ಕಲಬುರಗಿ ಮತ್ತು ಬೀದರ್‌ ಜಿಲ್ಲೆಗೆ ಸಾಧಾರಣದಿಂದ ಭಾರಿ ಮಳೆಯ ‘ಯೆಲ್ಲೋ ಅಲರ್ಟ್‌’ ಪ್ರಕಟಿಸಲಾಗಿದೆ. ಈ ಜಿಲ್ಲೆಗಳಲ್ಲಿ ಬೀದರ್‌ ಮತ್ತು ಕಲಬುರಗಿ ಹೊರತು ಪಡಿಸಿ ಉಳಿದೆಡೆ ಯೆಲ್ಲೋ ಅಲರ್ಚ್‌ ಮುಂದುವರಿಯಲಿದೆ.

ಇಂದೂ ಕೂಡ ಕರ್ನಾಟಕದಲ್ಲಿ ಭಾರೀ ಮಳೆ: 7 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

ಕರಾವಳಿಯಲ್ಲಿ ಬಿರುಗಾಳಿ ಮತ್ತು ಭಾರಿ ಮಳೆ ಇರುವುದರಿಂದ ಎತ್ತರದ ಅಲೆಗಳು ಸೃಷ್ಟಿಯಾಗುವ ಸಾಧ್ಯತೆ ಇದ್ದು ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಮುನ್ಸೂಚನೆ ನೀಡಲಾಗಿದೆ.

ಶನಿವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಉಡುಪಿಯ ಕುಚ್ಚೂರು 22 ಸೆಂ.ಮೀ, ಕುರ್ಕಾಲು 19.1 ಸೆಂ.ಮೀ, ದಕ್ಷಿಣ ಕನ್ನಡದ ಮುಲ್ಕಿ 19, ಕೊಡಗಿನ ಭಾಗಮಂಡಲ 18 ಮತ್ತು ಉಡುಪಿಯ ಕಾರ್ಕಳದಲ್ಲಿ 15 ಸೆಂ.ಮೀ ಮಳೆಯಾಗಿದೆ. ಕೋಲಾರ ಮತ್ತು ಬೆಂಗಳೂರು ನಗರ ಹೊರತು ಪಡಿಸಿ ಉಳಿದೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.