Asianet Suvarna News Asianet Suvarna News

ನೇಮಕ ಹಗರಣ ಬಗ್ಗೆ ಜಟಾಪಟಿ, ಕೋಲಾಹಲ: ಸದನದಲ್ಲಿ ಎಸ್‌ಐ ಕದನ

ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರಿಂದ ಬಿಗಿಪಟ್ಟು, ಸಿಐಡಿ ತನಿಖೆಯೇ ಸಾಕು: ಸರ್ಕಾರ

Recruitment Scam Talks in Vidhanasabhe Session grg
Author
First Published Sep 21, 2022, 4:30 AM IST

ವಿಧಾನಸಭೆ(ಸೆ.21):  ಉನ್ನತ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಕೆಲ ಪ್ರಭಾವಿಗಳ ಬಂಧನಕ್ಕೆ ಕಾರಣವಾದ ಪಿಎಸ್‌ಐ ನೇಮಕಾತಿ ಹಗರಣ ಸದನದಲ್ಲಿ ಪ್ರಸ್ತಾಪಗೊಂಡು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ. ಮಂಗಳವಾರ ವಿಧಾನಸಭೆಯಲ್ಲಿ ಈ ಕುರಿತು ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಜಟಾಪಟಿ, ಆರೋಪ-ಪ್ರತ್ಯಾರೋಪ, ಭಿತ್ತಿಪತ್ರ ಪ್ರದರ್ಶನ ನಡೆಯಿತು. ಪ್ರತಿಪಕ್ಷ ಕಾಂಗ್ರೆಸ್‌ ನ್ಯಾಯಾಂಗ ತನಿಖೆಗೆ ಮಾಡಿದ ಆಗ್ರಹವನ್ನು ತಿರಸ್ಕರಿಸಿದ ಸರ್ಕಾರ ಎಲ್ಲರೂ ಎದೆ ಮುಟ್ಟಿನೋಡಿಕೊಳ್ಳುವಂತೆ ಸಿಐಡಿ ತನಿಖೆ ನಡೆಯುತ್ತಿದೆ, ಅದಷ್ಟೇ ಸಾಕು ಎಂಬ ನಿಲುವಿಗೆ ಅಂಟಿಕೊಂಡಿತು. ಇದನ್ನು ಕಾಂಗ್ರೆಸ್‌ ವಿರೋಧಿಸಿ ಸದನದ ಬಾವಿಗೆ ಇಳಿದು ಧರಣಿ ಆರಂಭಿಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ನಂತರ ಕೋಲಾಹಲಕರ ಸನ್ನಿವೇಶ ಸೃಷ್ಟಿಸಿದಾಗ ಸ್ಪೀಕರ್‌ ಸದನವನ್ನು ಬುಧವಾರಕ್ಕೆ ಮುಂದೂಡಿದರು.

ಹಗರಣ ಬಿಚ್ಚಿಟ್ಟ ಸಿದ್ದರಾಮಯ್ಯ:

ನಿಯಮ 69ರಡಿ ಪಿಎಸ್‌ಐ ನೇಮಕಾತಿ ಹಗರಣವನ್ನು ಪ್ರಸ್ತಾಪಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಹಗರಣದ ಬಗ್ಗೆ ಕನ್ನಡಪ್ರಭ ಬರೆದ 25 ದಿನಗಳ ಸರಣಿ ವರದಿಗಳನ್ನು ಪ್ರಸ್ತಾಪಿಸಿ ಅವ್ಯವಹಾರದ ಆಳ-ಅಗಲವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಕಳೆದ ಅಧಿವೇಶನದಲ್ಲಿ ಗೃಹ ಸಚಿವರು ಪಿಎಸ್‌ಐ ನೇಮಕಾತಿಯಲ್ಲಿ ಯಾವುದೇ ಹಗರಣ ಆಗಿಲ್ಲ ಎಂದು ಉತ್ತರ ನೀಡಿದ್ದರು. ಆದರೆ, ತನಿಖೆ ಮುಂದುವರೆದು ದೊಡ್ಡ ದೊಡ್ಡ ಕುಳಗಳ ಹೆಸರೇ ಬಹಿರಂಗಕ್ಕೆ ಬರುತ್ತಿದೆ. ಹೀಗಾಗಿ ಸರ್ಕಾರ ಮೊದಲು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿತ್ತು ಎಂಬ ಅನುಮಾನ ಮೂಡುತ್ತಿದೆ ಎಂದರು.

ಶಿಕ್ಷಕರ ನೇಮಕಾತಿ ಅಕ್ರಮ: ಬಿಜೆಪಿ ಮಾಡಿದ ಆರೋಪ ನಮ್ಮ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದ ಮಾಜಿ ಶಿಕ್ಷಣ ಸಚಿವ

ಆಗ ಕಾಂಗ್ರೆಸ್‌ ಸದಸ್ಯರು ಶೇಮ್‌ ಶೇಮ್‌ ಎಂದು ಕೂಗಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಅವ್ಯವಹಾರದಲ್ಲಿ ಭಾಗಿಯಾದ ಕಾಂಗ್ರೆಸ್ಸಿಗರ ಹೆಸರುಗಳನ್ನು ಪ್ರಸ್ತಾಪಿಸಿದರು. ಜತೆಗೆ, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ಮಾಹಿತಿಯನ್ನು ನೀಡಲು ಮುಂದಾದಾಗ ತೀವ್ರ ಮಾತಿನ ಚಕಮಕಿ ನಡೆಯಿತು.

ತನಿಖೆಗೆ ಸಹಕಾರ ನೀಡಿ-ಆರಗ:

ಗದ್ದಲದ ನಡುವೆಯೇ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸರ್ಕಾರ ಎಲ್ಲೂ ಅಕ್ರಮ ಮುಚ್ಚಿ ಹಾಕುವ ಪ್ರಯತ್ನ ಮಾಡಿಲ್ಲ. ಸಾಕ್ಷಿ ಆಧಾರ ಸಿಗದೆ ಅಕ್ರಮ ನಡೆದಿದೆ ಎಂದು ಹೇಳಲು ಆಗುವುದಿಲ್ಲ. ಸಾಕ್ಷ್ಯ ಸಿಕ್ಕ 2 ಗಂಟೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದೇವೆ. ಈವರೆಗೆ 97 ಮಂದಿಯನ್ನು ಬಂಧಿಸಲಾಗಿದೆ. ತನಿಖೆ ಸಮರ್ಥವಾಗಿ ನಡೆಯುತ್ತಿದೆ ಸಹಕಾರ ನೀಡಿ ಎಂದರು.

ಇದೇ ವೇಳೆ, ಹಗರಣದಲ್ಲಿ ಬಂಧನವಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಹೆಸರು ಪ್ರಸ್ತಾಪಿಸಿ ಉಭಯ ಪಕ್ಷಗಳ ಸದಸ್ಯರು ಕೆಸರೆರೆಚಾಟ ನಡೆಸಿದರು. ಬಿಜೆಪಿಯ ದಿವ್ಯಾ ಹಾಗರಗಿ ಹೆಸರನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಕ್ಕೆ ಬಿಜೆಪಿ ಸದಸ್ಯರು ಕಾಂಗ್ರೆಸ್‌ ಪಕ್ಷದ ಆರೋಪಿಗಳಾದ ಮಹಾಂತೇಶ್‌ ಪಾಟೀಲ್‌, ಅವರ ಸಹೋದರ ಆರ್‌.ಡಿ.ಪಾಟೀಲ್‌ ಹೆಸರನ್ನು ಹೇಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಛೇಡಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್‌.ಡಿ.ಪಾಟೀಲ್‌ ಸ್ವತಃ ಪೊಲೀಸ್‌ ತನಿಖೆಯಲ್ಲಿ ತಾನು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ ಎಂದು ಹೇಳಿಕೆ ನೀಡಿದ್ದಾನೆ ಎಂದರು. ಇದಕ್ಕೆ ಸಿದ್ದರಾಮಯ್ಯ ಎಲ್ಲರ ಹೆಸರನ್ನೂ ಹೇಳೋಣ. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲಿ. ಸರ್ಕಾರ ಚಾಜ್‌ರ್‍ಶೀಟ್‌ ಸಲ್ಲಿಸಲಿ ಎಂದು ಸವಾಲು ಹಾಕಿದರು.

ಬಿಜೆಪಿಗೇ ಶಾಸಕ ಯತ್ನಾಳ್‌ ಪ್ರಶ್ನೆ:

ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌, ಸಚಿವ ಪ್ರಭು ಚವ್ಹಾಣ್‌ ಕೂಡ ಈ ನೇಮಕಾತಿ ಹಗರಣ ಪ್ರಸ್ತಾಪಿಸಿ ತನಿಖೆಗೆ ಒತ್ತಾಯಿಸಿದ್ದರಲ್ಲ ಅವರಿಗೇಕೆ ನೋಟಿಸ್‌ ನೀಡಲಿಲ್ಲ. ಶಾಸಕ ಬಸವರಾಜ ದಡೇಸುಗೂರು ನಿವೃತ್ತ ಪೇದೆ ಪರಸಪ್ಪ ನಡುವೆ 15 ಲಕ್ಷ ಹಣ ಪಡೆದ ಆಡಿಯೋ ಬಿಡುಗಡೆಯಾಗಿದೆ. ಅವರಿಗೆ ನೋಟಿಸ್‌ ನೀಡಿ ತನಿಖೆ ಏಕೆ ನಡೆಸಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸಿದ್ದರಾಮಯ್ಯ ಕಾಲದಲ್ಲಿ ಶಿಕ್ಷಕರ ನೇಮಕಾತಿ ಅಕ್ರಮ: ವಿಚಾರಣೆ ವೇಳೆ ಹೊರಬಿತ್ತು ಸ್ಪೋಟಕ ಮಾಹಿತಿ

ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಧುಸ್ವಾಮಿ ಅವರು ಪ್ರಿಯಾಂಕ ಖರ್ಗೆ ತಮ್ಮ ಬಳಿ ಆಧಾರಗಳಿವೆ ಎಂದು ಹೇಳಿಕೆ ನೀಡಿದ್ದರಿಂದ ನೋಟಿಸ್‌ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು. ಆದರೆ, ಪ್ರಿಯಾಂಕ ಖರ್ಗೆ ನಾನು ಆ ರೀತಿ ಹೇಳಿಲ್ಲ ಎಂದು ನಿರಾಕರಿಸಿದರು.

ನ್ಯಾಯಾಂಗ ತನಿಖೆಗೆ ಪಟ್ಟು:

ಈ ಹಗರಣದಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳೂ ಭಾಗಿಯಾಗಿರುವ ಆರೋಪಗಳಿರುವುದರಿಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಹಾಲಿ ಹೈಕೋರ್ಚ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕೆಂದು ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ಜೆಡಿಎಸ್‌ ಕೂಡ ಸಹಮತ ವ್ಯಕ್ತಪಡಿಸಿತು.

ಆದರೆ, ಹಾಲಿ ನಡೆದಿರುವ ಸಿಐಡಿ ತನಿಖೆಯನ್ನು ಬಲವಾಗಿ ಸಮರ್ಥಿಸಿಕೊಂಡ ಗೃಹ ಸಚಿವ ಅರಗ ಜ್ಞಾನೇಂದ್ರ ಮುಂದೆ ಇಂತಹ ಅಕ್ರಮ ಮಾಡುವ ಮುನ್ನ ಯಾರೇ ಆಗಲಿ ಭಯ ಬೀಳಬೇಕು. ಎಲ್ಲರೂ ಎದೆ ಮುಟ್ಟಿನೋಡಿಕೊಳ್ಳುವಂತೆ ತನಿಖೆ ನಡೆಸುತ್ತಿದ್ದೇವೆ. ಹೀಗಾಗಿ ಬೇರೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದರು. ಇದರಿಂದ ಕೆಂಡವಾದ ಕಾಂಗ್ರೆಸ್ಸಿಗರು ಆಡಳಿತ ಪಕ್ಷದ ಮೇಲೆ ತೀವ್ರ ಆರೋಪ ಮಾಡುತ್ತಾ ಸದನದ ಬಾವಿಗೆ ಇಳಿದು ಧರಣಿ ಮುಂದಾದರು. ಇದರ ನಡುವೆಯೇ ಸ್ಪೀಕರ್‌ ಸದನವನ್ನು ಬುಧವಾರಕ್ಕೆ ಮುಂದೂಡಿದರು.
 

Follow Us:
Download App:
  • android
  • ios