Asianet Suvarna News Asianet Suvarna News

ಸತತ 9ನೇ ದಿನ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ, ಗುಣಮುಖರ ಸಂಖ್ಯೆ ಹೆಚ್ಚಳ!

 9ನೇ ದಿನ ಪಾಸಿಟಿವ್‌ ಕೇಸ್‌ ಇಳಿಕೆ| ಪಾಸಿಟಿವಿಟಿ ದರ ಶೇ.4.92ಕ್ಕೆ ಕುಸಿತ| ಸೋಂಕಿತರ ಸಂಖ್ಯೆ ಇಳಿಮುಖ, ಗುಣಮುಖರ ಸಂಖ್ಯೆ ಹೆಚ್ಚಳ| ನಿನ್ನೆ 8749 ಮಂದಿ ಡಿಸ್‌ಚಾರ್ಜ್| 5356 ಜನರಿಗೆ ಸೋಂಕು| ಮೃತರ ಪ್ರಮಾಣ ಶೇ.1ಕ್ಕಿಂತ ಕಡಿಮೆ

Recovery Rate Is Higher Than The New Cases in Karnataka For The 9th Days pod
Author
Bangalore, First Published Oct 24, 2020, 7:19 AM IST

ಬೆಂಗಳೂರು(ಅ.24): ಸೆಪ್ಟೆಂಬರ್‌ ತಿಂಗಳ ಅಂತ್ಯ ಮತ್ತು ಅಕ್ಟೋಬರ್‌ ತಿಂಗಳ ಆರಂಭದ ದಿನಗಳಲ್ಲಿ ಸತತವಾಗಿ 10,000ದ ಗಡಿಯಲ್ಲಿ ಇರುತ್ತಿದ್ದ ರಾಜ್ಯದ ಹೊಸ ಸೋಂಕಿತರ ಪ್ರಮಾಣ ಅಕ್ಟೋಬರ್‌ 15ರ ಬಳಿಕ ನಿರಂತರವಾಗಿ ಇಳಿಕೆ ಹಾದಿಯಲ್ಲಿ ಸಾಗಿದೆ. ಹಾಗೆಯೇ ಲಕ್ಷದ ಮೇಲೆ ಕೊರೋನಾ ಪರೀಕ್ಷೆಗಳು ನಡೆಯುತ್ತಿದ್ದರೂ ಹೊಸ ಸೋಂಕಿತರಿಗಿಂತ ಗುಣಮುಖರ ಸಂಖ್ಯೆ ನಿರಂತರವಾಗಿ 9 ದಿನಗಳಿಂದ ಹೆಚ್ಚಿದೆ.

ಶುಕ್ರವಾರ ಒಟ್ಟು ಸುಮಾರು 1.08 ಲಕ್ಷ ಟೆಸ್ಟ್‌ಗಳು ನಡೆದಿವೆ. 5356 ಜನರಿಗೆ ಸೋಂಕು ದೃಢಪಟ್ಟಿದೆ. 8749 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 7.93 ಲಕ್ಷಕ್ಕೆ ಏರಿದ್ದರೆ, ಸಕ್ರಿಯ ಸೋಂಕಿತರ ಸಂಖ್ಯೆ 89,483ಕ್ಕೆ ಇಳಿದಿದೆ. ಈವರೆಗೆ, 6.93 ಲಕ್ಷ ಮಂದಿ ಸೋಂಕನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ.

ಸಾವಿನ ಪ್ರಮಾಣವೂ ಇಳಿದಿದೆ. ಶುಕ್ರವಾರ 51 ಮಂದಿ ಅಸುನೀಗಿದ್ದು, ಈವರೆಗೆ ಒಟ್ಟು 10,821 ಮಂದಿ ಮೃತರಾಗಿದ್ದಾರೆ. ಪಾಸಿಟಿವಿಟಿ ದರ ಶೇ. 4.94ರಷ್ಟಿದ್ದರೆ, ಮರಣ ದರ ಶೇ. 0.95 ರಷ್ಟುದಾಖಲಾಗಿದೆ.

ಅ.15ರ ನಂತರ ಸತತ ಇಳಿಕೆ:

ಅಕ್ಟೋಬರ್‌ 9ಕ್ಕೆ ಕೊನೆಯ ಬಾರಿ 10 ಸಾವಿರದ ಗಡಿ ಮೀರಿ ಹೊಸ ಪ್ರಕರಣಗಳು ವರದಿಯಾಗಿದ್ದವು. ಅಂದು ಸಕ್ರಿಯ ಪ್ರಕರಣಗಳು 1.20 ಲಕ್ಷ ಮೀರಿತ್ತು. ಆದರೆ ಅ ಬಳಿಕ ಹೊಸ ಸೋಂಕಿತರಿಗಿಂತ ಗುಣಮುಖರ ಸಂಖ್ಯೆ ಹೆಚ್ಚಾಗಿ ವರದಿಯಾಗಲು ಪ್ರಾರಂಭಿಸಿತ್ತು. ಆದರೆ ಅಕ್ಟೋಬರ್‌ 15ರಿಂದ ಶುರುವಾದ ಗುಣಮುಖರ ಸಂಖ್ಯೆ ಹೆಚ್ಚಳದ ಸರಣಿ ಎಲ್ಲೂ ತುಂಡರಿಯದೇ ಅ.23ರವರೆಗೂ ಮುಂದುವರಿದಿದೆ.

ಶುಕ್ರವಾರದ ಪಾಸಿಟಿವಿಟಿ ದರ ಶೇ.4.92 ರಷ್ಟಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಶೇ.5 ರೊಳಗಿನ ಪಾಸಿಟಿವಿಟಿ ದರವನ್ನು ಕೆಲ ದಿನಗಳ ಕಾಲ ರಾಜ್ಯ ಕಾಯ್ದುಕೊಂಡಿದ್ದೇ ಆದರೆ ಸೋಂಕಿನ ಹಬ್ಬುವಿಕೆ ಕಡಿಮೆ ಆಗುತ್ತಿದೆ ಎಂಬುದರ ಸ್ಪಷ್ಟಸಂಕೇತ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಅಕ್ಟೋಬರ್‌ 15 ರ ಬಳಿಕ ನಿರಂತರವಾಗಿ ಪಾಸಿಟಿವಿಟಿ ದರದಲ್ಲಿ ರಾಜ್ಯ ಕುಸಿತ ದಾಖಲಿಸಿದೆ. ರಾಜ್ಯದ ಒಟ್ಟು ಪಾಸಿಟಿವಿಟಿ ದರ ಶೇ. 11.17 ರಷ್ಟಿದ್ದರೂ ಕಳೆದ 9 ದಿನಗಳ ಅವಧಿಯಲ್ಲಿ ಸರಾಸರಿ ಶೇ. 6.15ರ ಪಾಸಿಟಿವಿಟಿ ದರ ರಾಜ್ಯದಲ್ಲಿತ್ತು. ಆದರೂ ದೇಶದ ಪಾಸಿಟಿವಿಟಿ ದರ ಕ್ಕಿಂತ ತುಸು ಹೆಚ್ಚಿನ ಪಾಸಿಟಿವಿಟಿ ದರ ರಾಜ್ಯ ದಾಖಲಿಸಿದೆ.

ಈ ಒಂಬತ್ತು ದಿನಗಳ ಅವಧಿಯಲ್ಲಿ 73,576 (ದಿನಕ್ಕೆ ಸರಾಸರಿ 8,175) ಮಂದಿ ಕೋವಿಡ್‌ ನಿಂದ ಗುಣಮುಖರಾಗಿದ್ದು 50,059 (ದಿನಕ್ಕೆ ಸರಾಸರಿ 5,562) ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ರಾಜ್ಯದಲ್ಲಿನ ದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 89,483ಕ್ಕೆ ಕುಸಿದಿದೆ. ಈ ಅವಧಿಯಲ್ಲಿ 538 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಧ್ಯೆ ಒಟ್ಟು 8,12,742 ಪರೀಕ್ಷೆಗಳು ನಡೆದಿದ್ದು ದಿನಕ್ಕೆ ಸರಾಸರಿ 90,304 ಪರೀಕ್ಷೆಗಳು ನಡೆದಿವೆ.

Follow Us:
Download App:
  • android
  • ios