Asianet Suvarna News Asianet Suvarna News

ರಾಜ್ಯದಲ್ಲಿ ಕೋವಿಡ್‌ ಅಲೆ ಸ್ಫೋಟ: ಈ ವರ್ಷದ ಗರಿಷ್ಠ ಕೇಸ್, ಸಾವು ದಾಖಲು!

ರಾಜ್ಯದಲ್ಲಿ 4225 ಕೊರೋನಾ ಕೇಸ್‌, 26 ಸಾವು| ಕೊರೋನಾಡು ಸ್ಫೋಟ| ದೇಶದಲ್ಲಿ ನಿನ್ನೆ ಮಹಾರಾಷ್ಟ್ರ ಬಳಿಕ ಹೆಚ್ಚು ಸೋಂಕು ಪತ್ತೆಯಾದ ನಂ.2 ರಾಜ್ಯ ಕರ್ನಾಟಕ| 5 ತಿಂಗಳ ಬಳಿಕ ದಾಖಲೆ ಮಂದಿಗೆ ಕೋವಿಡ್‌ ಸೋಂಕು| 2ನೇ ಅಲೆ ಸ್ಪಷ್ಟಸೂಚನೆ: ತಜ್ಞರು

Record high of 4225 cases reported in Karnataka as state tally inches towards 10 lakh pod
Author
Bangalore, First Published Apr 1, 2021, 7:09 AM IST

ಬೆಂಗಳೂರು(ಏ.01): ರಾಜ್ಯದಲ್ಲಿ ಕೊರೋನಾ ಸೋಂಕಿನ ಹೊಸ ಪ್ರಕರಣಗಳಲ್ಲಿ ಭಾರಿ ಏರಿಕೆ ದಾಖಲಾಗಿದ್ದು, 4,225 ಪ್ರಕರಣಗಳೊಂದಿಗೆ ಬುಧವಾರ ಅತಿ ಹೆಚ್ಚು ಸೋಂಕು ಪ್ರಕರಣಗಳು ದಾಖಲಾದ ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಇದೇ ವೇಳೆ 26 ಮಂದಿ ಮೃತಪಟ್ಟಿದ್ದಾರೆ. 1,492 ಮಂದಿ ಗುಣಮುಖರಾಗಿದ್ದಾರೆ.

ಎಂದಿನಂತೆ ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು (39,544) ವರದಿಯಾಗಿದ್ದು ಆ ರಾಜ್ಯ ಅಗ್ರ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನಕ್ಕೆ ಬಂದು ತಲುಪಿದೆ. ರಾಜ್ಯದಲ್ಲಿ ಅಕ್ಟೋಬರ್‌ 25ರಂದು 4,439 ಪ್ರಕರಣ ವರದಿಯಾಗಿತ್ತು. ಇದಾದ ಬಳಿಕ ಈ ಪ್ರಮಾಣದ ಹೆಚ್ಚಳ ಬುಧವಾರವೇ ದಾಖಲಾಗಿರುವುದು. ಸೋಂಕಿನಲ್ಲಿ ಈ ಪ್ರಮಾಣದಲ್ಲಿನ ಏರಿಕೆಯು ಎರಡನೇ ಅಲೆಯು ಮೊದಲ ಅಲೆಯನ್ನು ಮೀರಿಸುವ ಲಕ್ಷಣ ಎಂದೇ ತಜ್ಞರು ಸ್ಪಷ್ಟವಾಗಿ ಹೇಳುತ್ತಾರೆ.

ಇನ್ನು ಮೃತರ ಸಂಖ್ಯೆಯೂ ಏರಿಕೆ ಗತಿಯಲ್ಲಿ ಸಾಗಿರುವುದು ಆತಂಕ ಮೂಡಿಸಿದೆ. ನವೆಂಬರ್‌ 6ರಂದು 35 ಮಂದಿ ಮೃತರಾಗಿದ್ದರು. ಆ ಬಳಿಕದ ಗರಿಷ್ಠ ಸಾವು (26) ಬುಧವಾರ ಸಂಭವಿಸಿದೆ. ಬೆಂಗಳೂರು ನಗರದಲ್ಲಿ 25ರ ಹರೆಯದ ಯುವಕನೊಬ್ಬ ಸೇರಿದಂತೆ 18 ಮಂದಿ ಮರಣವನ್ನಪ್ಪಿದ್ದು, ಕಲಬುರಗಿ, ಶಿವಮೊಗ್ಗದಲ್ಲಿ ತಲಾ 2, ಉತ್ತರ ಕನ್ನಡ, ಉಡುಪಿ, ಕೋಲಾರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕಿನ ಪ್ರಮಾಣ ಏರುತ್ತಿದ್ದಂತೆ ಬಹುತೇಕ ಹೆಚ್ಚಿನ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣವೂ ವರದಿಯಾಗುತ್ತಿದೆ.

28,248 ಸಕ್ರಿಯ ಪ್ರಕರಣಗಳಿದ್ದು ಈ ಪೈಕಿ 266 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1.08 ಲಕ್ಷ ಕೊರೋನಾ ಪರೀಕ್ಷೆ ನಡೆದಿದ್ದು ಶೇ. 3.89ರಷ್ಟರ ಪಾಸಿಟಿವಿಟಿ ದರ ದಾಖಲಾಗಿದೆ.

ಈವರೆಗೆ ಒಟ್ಟು 9.97 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 10 ಲಕ್ಷದ ಅಂಚಿಗೆ ಬಂದಿದೆ. 9.56 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಒಟ್ಟು 12,567 ಮಂದಿ ಮರಣವನ್ನಪ್ಪಿದ್ದಾರೆ.

ಬೆಂಗಳೂರು ನಗರದಲ್ಲಿ 2,928, ಬೀದರ್‌ 159, ಮೈಸೂರು 142, ತುಮಕೂರು 138, ಕಲಬುರಗಿ 137, ಬೆಂಗಳೂರು ಗ್ರಾಮಾಂತರ 80, ಹಾಸನ 74, ಬಳ್ಳಾರಿ 68, ಧಾರವಾಡ 62, ಉಡುಪಿ 56 ಪ್ರಕರಣ ವರದಿಯಾಗಿದೆ. ಹಾವೇರಿ, ಚಾಮರಾಜನಗರ, ರಾಮನಗರ ಮತ್ತು ಬಾಗಲಕೋಟೆಯಲ್ಲಿ ಮಾತ್ರ ಏಕಂಕಿಯಲ್ಲಿ ಹೊಸ ಪ್ರಕರಣ ವರದಿಯಾಗಿದೆ.

ಕೋವಿಡ್‌ನ ಹೊಸ ಪ್ರಕರಣಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಸರ್ಕಾರ ಸುಮ್ಮನಿರಬಾರದು. ಇನ್ನು ಎರಡು ವಾರದಲ್ಲಿ ಸಾವಿನ ಪ್ರಮಾಣ ಏರಿಕೆ ಆಗಬಹುದು. ಸರ್ಕಾರ ತಕ್ಷಣವೇ ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್‌, ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಬೇಕು.

- ಸಿ.ಎನ್‌. ಮಂಜುನಾಥ್‌, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ

 

Follow Us:
Download App:
  • android
  • ios