ಹೊಸ ಬಡಾವಣೆ ಅಭಿವೃದ್ಧಿಗೆ ಇ-ಖಾತಾ ಹೊಡೆತ, ಸೈಟ್‌ ನೋಂದಣಿ ಆಗ್ತಿಲ್ಲ: ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಪೆಟ್ಟು

ಯಾವುದೇ ಅನುಮೋದಿತ ಬಡಾವಣೆಗಳಲ್ಲಿ ನಕ್ಷೆ ಮಂಜೂರಾತಿ ಪ್ರಕಾರ ಅಭಿವೃದ್ಧಿಪಡಿಸಿದ ಉದ್ಯಾನ, ರಸ್ತೆ ಹಾಗೂ ನಾಗರಿಕ ಸೌಲಭ್ಯಗಳ ನಿವೇಶನಗಳನ್ನು ಮೊದಲು ಸ್ಥಳೀಯ ಸಂಸ್ಥೆಗಳಿಗೆ ಪರಿತ್ಯಜನಾ ಕ್ರಯದ (ರಿಲಿಂಕ್ವಿಶ್ ಡೀಡ್) ಮೂಲಕ ನೋಂದಣಿ ಮಾಡಿ ಮಾಲೀಕತ್ವ ಹಕ್ಕು ವರ್ಗಾವಣೆ ಮಾಡಿಕೊಡುವುದು ಕಡ್ಡಾಯ. ಒಂದೊಮ್ಮೆ ರಿಲಿಂಕ್ವಿಶ್‌ ಡೀಡ್‌ ಮಾಡದಿದ್ದರೆ ಸಂಬಂಧಪಟ್ಟ ಬಡಾವಣೆಗಳಲ್ಲಿನ ನಿವೇಶನಗಳ ಮಾರಾಟಕ್ಕೆ ಅವಕಾಶವಿಲ್ಲ.

Real Estate Business Faces Problems for E Khata  in Karnataka grg

ಶ್ರೀಕಾಂತ್ ಎನ್‌.ಗೌಡಸಂದ್ರ

ಸುವರ್ಣ ವಿಧಾನಸೌಧ(ಡಿ.17):  ರಾಜ್ಯಾದ್ಯಂತ ಎಲ್ಲಾ ರೀತಿಯ ಆಸ್ತಿ ದಸ್ತಾವೇಜು ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರ ಇ-ಆಸ್ತಿ ಹಾಗೂ ಕಾವೇರಿ-2 ವ್ಯವಸ್ಥೆಯಲ್ಲಿ ಪರಿತ್ಯಜನಾ ಪತ್ರಗಳ (ರಿಲಿಂಕ್ವಿಶ್‌) ನೋಂದಣಿಗೆ ಆಯ್ಕೆಯನ್ನೇ ಕಲ್ಪಿಸಿಲ್ಲ. ಅಗತ್ಯ ಸಿದ್ಧತೆಯಿಲ್ಲದೆ ಈ ರೀತಿ ಇ-ಖಾತಾ ಕಡ್ಡಾಯಗೊಳಿಸಿದ ಪರಿಣಾಮ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಭಾರೀ ಪೆಟ್ಟು ಬಿದ್ದಿದೆ.

ಯಾವುದೇ ಅನುಮೋದಿತ ಬಡಾವಣೆಗಳಲ್ಲಿ ನಕ್ಷೆ ಮಂಜೂರಾತಿ ಪ್ರಕಾರ ಅಭಿವೃದ್ಧಿಪಡಿಸಿದ ಉದ್ಯಾನ, ರಸ್ತೆ ಹಾಗೂ ನಾಗರಿಕ ಸೌಲಭ್ಯಗಳ ನಿವೇಶನಗಳನ್ನು ಮೊದಲು ಸ್ಥಳೀಯ ಸಂಸ್ಥೆಗಳಿಗೆ ಪರಿತ್ಯಜನಾ ಕ್ರಯದ (ರಿಲಿಂಕ್ವಿಶ್ ಡೀಡ್) ಮೂಲಕ ನೋಂದಣಿ ಮಾಡಿ ಮಾಲೀಕತ್ವ ಹಕ್ಕು ವರ್ಗಾವಣೆ ಮಾಡಿಕೊಡುವುದು ಕಡ್ಡಾಯ. ಒಂದೊಮ್ಮೆ ರಿಲಿಂಕ್ವಿಶ್‌ ಡೀಡ್‌ ಮಾಡದಿದ್ದರೆ ಸಂಬಂಧಪಟ್ಟ ಬಡಾವಣೆಗಳಲ್ಲಿನ ನಿವೇಶನಗಳ ಮಾರಾಟಕ್ಕೆ ಅವಕಾಶವಿಲ್ಲ.

ಬಿಬಿಎಂಪಿ ಅಂತಿಮ ಇ-ಖಾತಾ ಪಡೆಯಲು ಬಹು ವಿಧ ಆಯ್ಕೆ; ಆಧಾರ್ ಕಾರ್ಡ್ ಕಡ್ಡಾಯವಲ್ಲ!

ಹೀಗಿರುವಾಗ ರಿಲಿಂಕ್ವಿಶ್‌ ಡೀಡ್‌ಗೆ ಕಾವೇರಿ-2 ತಂತ್ರಾಂಶದಲ್ಲಿ ಅವಕಾಶವನ್ನೇ ಕಲ್ಪಿಸಿಲ್ಲ. ರಸ್ತೆ, ಉದ್ಯಾನ, ನಾಗರಿಕ ಸೌಲಭ್ಯಗಳ ನಿವೇಶನಗಳಿಗೆ ಇ-ಖಾತಾ ನೀಡುತ್ತಿಲ್ಲ. ಜತೆಗೆ, ಕಾವೇರಿ-2 ತಂತ್ರಾಂಶದಲ್ಲೂ ನೋಂದಣಿ ಆಯ್ಕೆ ಇಲ್ಲ. ಇ-ಖಾತಾ ಕಡ್ಡಾಯಗೊಳಿಸಿ ಎರಡೂವರೆ ತಿಂಗಳು ಕಳೆಯುತ್ತಾ ಬಂದಿದೆ. ಈವರೆಗೂ ಈ ಆಯ್ಕೆ ನೀಡದಿರುವುದರಿಂದ ಹೊಸ ಬಡಾವಣೆಗಳ ಅಭಿವೃದ್ಧಿ, ಅಭಿವೃದ್ಧಿಗೊಳಿಸಿದ ಬಡಾವಣೆಗಳ ನಿವೇಶನಗಳ ಖರೀದಿ-ಮಾರಾಟಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಬಿಬಿಎಂಪಿ ಸೇರಿ ರಾಜ್ಯಾದ್ಯಂತ ಖರೀದಿ-ಮಾರಾಟ ವ್ಯವಹಾರಕ್ಕೆ ಪೆಟ್ಟು ಬೀಳುವ ಜತೆಗೆ ಹೊಸ ಬಡಾವಣೆಗಳ ಅಭಿವೃದ್ಧಿಗೂ ಅಭಿವೃದ್ಧಿದಾರರು ಹಿಂದಡಿ ಇಡುವಂತಾಗಿದೆ. ಹೀಗಾಗಿ ರಾಜ್ಯಾದ್ಯಂತ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಚಟುವಟಿಕೆಗೇ ಮಸಕು ಕವಿದಂತಾಗಿದ್ದು, ಸರ್ಕಾರದ ಆದಾಯಕ್ಕೂ ಕೊಕ್ಕೆ ಬಿದ್ದಿದೆ.

ಏನಿದು ರಿಲಿಂಕ್ವಿಶ್‌ ಆಯ್ಕೆ?:

ಯಾವುದೇ ಬಡಾವಣೆ ಅಭಿವೃದ್ಧಿಗೊಳ್ಳಬೇಕಾದರೆ ಭೂ ಬಳಕೆ ಪರಿವರ್ತನೆ ಬಳಿಕ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಬಡಾವಣೆ ನಕ್ಷೆ ಅನುಮೋದನೆ ಪಡೆಯಬೇಕು. ನಕ್ಷೆ ಮಂಜೂರಾತಿ ಪ್ರಕಾರ ಲೇಔಟ್‌ ಅಭಿವೃದ್ಧಿಪಡಿಸಿದ ನಂತರ ಅಭಿವೃದ್ಧಿಪಡಿಸಿದ ರಸ್ತೆ, ಉದ್ಯಾನ, ನಾಗರಿಕ ಸೌಲಭ್ಯದ ನಿವೇಶನ, ನೀರು ಸರಬರಾಜು ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಗಳಿಗೆ ಉಪ ನೋಂದಣಿ ಕಚೇರಿ ಮೂಲಕ ಪರಿತ್ಯಾಜ್ಯ (ರಿಲಿಂಕ್ವಿಶ್‌) ನೋಂದಣಿ ಮಾಡಿಕೊಡಬೇಕು. ಈ ರೀತಿ ರಿಲಿಂಕ್ವಿಶ್‌ ಮಾಡದ ಹೊರತು ಸಂಬಂಧಪಟ್ಟ ಬಡಾವಣೆಯಲ್ಲಿ ನಿವೇಶನಗಳ ಮಾರಾಟಕ್ಕೆ ಸ್ಥಳೀಯ ಸಂಸ್ಥೆಗಳು ಅಗತ್ಯ ಅನುಮತಿ ನೀಡುವುದಿಲ್ಲ.

ಸಿದ್ಧತೆಯೇ ಇಲ್ಲದೆ ಇ-ಖಾತಾ ಕಡ್ಡಾಯ:

ಇ-ಖಾತಾ ಕಡ್ಡಾಯ ಎಂಬುದು ನೋಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವಲ್ಲಿ ಕ್ರಾಂತಿಕಾರಕ ಹೆಜ್ಜೆ. ಆದರೆ, ಕಂದಾಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳದೆ ಇ-ಖಾತಾ ಕಡ್ಡಾಯ ಮಾಡಿದೆ. ಇದರಿಂದ ರಿಯಲ್‌ ಎಸ್ಟೇಟ್‌ ಚಟುವಟಿಕೆಗೆ ಸಮಸ್ಯೆಯಾಗಿರುವುದು ಸತ್ಯ. ಈ ಸಮಸ್ಯೆ ಬಗೆಹರಿಸಲು ಪೌರಾಡಳಿತ ನಿರ್ದೇಶನಾಲಯ ನ.8 ರಂದು ಆದೇಶ ಹೊರಡಿಸಿದ್ದು, ಪೌರಾಡಳಿತ ನಿರ್ದೇಶನಾಲಯ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಇ-ಆಸ್ತಿ ತಂತ್ರಾಂಶದಲ್ಲಿ ಆಯ್ಕೆ ಕಲ್ಪಿಸಲು ಆದೇಶಿಸಲಾಗಿದೆ.

ಆದರೆ, ಬಿಬಿಎಂಪಿ ಹಾಗೂ ಗ್ರಾಪಂಗಳ ವ್ಯಾಪ್ತಿಯಲ್ಲಿ ಪರಿಹಾರ ಕಲ್ಪಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಬಗ್ಗೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದು, ಸದ್ಯದಲ್ಲೇ ಆಯ್ಕೆ ನೀಡಲಾಗುವುದು ಎಂದು ಕಂದಾಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಇನ್ನು ಭೂ ಬಳಕೆ ಪರಿವರ್ತನೆ ಆಗಿ ನಕ್ಷೆ ಮಂಜೂರಾತಿ ಪ್ರಕಾರ ಅಭಿವೃದ್ಧಿಗೊಳ್ಳದ ಜಮೀನನ್ನು ಒಟ್ಟಾಗಿ ಮಾರಾಟ ಮಾಡಲು ಸಹ ಅವಕಾಶವಿಲ್ಲದಂತಾಗಿದೆ. ಹೀಗಾಗಿ ಬಡಾವಣೆ ಅಭಿವೃದ್ಧಿದಾರರು ಬಡಾವಣೆ ನಿರ್ಮಿಸಲು ಅಗತ್ಯ ಜಮೀನು ಖರೀದಿಸಲು ಸಹ ಸಮಸ್ಯೆಯಾಗಿದೆ ಎಂದು ತಿಳಿದುಬಂದಿದೆ.

ಏನಿದು ರಿಲಿಂಕ್ವಿಶ್‌ ಡೀಡ್‌?

ನಕ್ಷೆ ಪ್ರಕಾರ ಬಡಾವಣೆಯನ್ನು ಅಭಿವೃದ್ಧಿಪಡಿಸಿದ ಬಳಿಕ ಹಾಗೂ ನಿವೇಶನ ಮಾರಾಟಕ್ಕೂ ಮುನ್ನ ರಸ್ತೆ, ಉದ್ಯಾನ, ನಾಗರಿಕ ಸೌಲಭ್ಯದ ನಿವೇಶನ, ನೀರು ಸರಬರಾಜು ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಗಳಿಗೆ ಡೆವಲಪರ್‌ಗಳು ಕಡ್ಡಾಯವಾಗಿ ಹಸ್ತಾಂತರಿಸಬೇಕಾಗುತ್ತದೆ. ಇದಕ್ಕಾಗಿ ಉಪ ನೋಂದಣಿ ಕಚೇರಿಯಲ್ಲಿ ಮಾಡುವ ನೋಂದಣಿ ಮಾಡುವ ಪ್ರಕ್ರಿಯೆಯೇ ಪರಿತ್ಯಜನಾ ಪತ್ರ 

ಇ-ಆಸ್ತಿ ತಂತ್ರಾಂಶ: ಬಿಬಿಎಂಪಿ ವಿಳಂಬದಿಂದ ಎಡವಟ್ಟು?

ಸಮಸ್ಯೆ ಏನು?

- ಎಲ್ಲ ರೀತಿಯ ಆಸ್ತಿ ದಸ್ತಾವೇಜು ನೋಂದಣಿಗೆ ಸರ್ಕಾರ ಇ- ಖಾತಾ ಕಡ್ಡಾಯಗೊಳಿಸಿದೆ
- ಕಾವೇರಿ- 2 ತಂತ್ರಾಂಶದಲ್ಲಿ ರಿಲಿಂಕ್ವಿಶ್‌ ಡೀಡ್ ಮಾಡಿಕೊಳ್ಳಲು ಅವಕಾಶವನ್ನೇ ಕಲ್ಪಿಸಿಲ್ಲ
- ಹೀಗಾಗಿ ಆ ಡೀಡ್‌ಗಳು ನೋಂದಣಿಯಾಗುತ್ತಿಲ್ಲ. ಇದರಿಂದಾಗಿ ನಿವೇಶನ ಮಾರಲಾಗುತ್ತಿಲ್ಲ
- ಹೊಸ ಬಡಾವಣೆ ಅಭಿವೃದ್ಧಿ, ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ನಿವೇಶನ ನೋಂದಣಿ ಆಗುತ್ತಿಲ್ಲ
- ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಖರೀದಿ- ಮಾರಾಟಕ್ಕೆ ಪೆಟ್ಟು. ಹೊಸ ಲೇಔಟ್‌ಗಳ ರಚನೆಗೆ ತೊಡಕು
- ರಾಜ್ಯಾದ್ಯಂತ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಚಟುವಟಿಕೆಗೇ ಮಸುಕು. ಸರ್ಕಾರಕ್ಕೆ ಆದಾಯವೂ ಖೋತಾ

ಈಗಷ್ಟೇ ಸರಿಪಡಿಸಿದ್ದೇವೆ ಎನ್ನುತ್ತಿದೆ ಸರ್ಕಾರ, ಇಲ್ಲ ಅಂತಿದ್ದಾರೆ ನಾಗರಿಕರು!

ಈ ಬಗ್ಗೆ ಕನ್ನಡಪ್ರಭ ಜತೆ ಮಾತನಾಡಿರುವ ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಾದ ದಯಾನಂದ್‌, ಈವರೆಗೆ ಪರಿತ್ಯಜನಾ ದಸ್ತಾವೇಜು ನೋಂದಣಿಗೆ ಅವಕಾಶ ಇಲ್ಲದೆ ಸಮಸ್ಯೆಯಾಗಿದ್ದು ನಿಜ. ಇದೀಗ ಅವಕಾಶ ಕಲ್ಪಿಸಲಾಗಿದ್ದು, 3 ದಿನಗಳ ಹಿಂದೆ ಮೈಸೂರಿನಲ್ಲಿ ಉದ್ಯಾನವೊಂದನ್ನು ನೋಂದಣಿ ಮಾಡಲಾಗಿದೆ ಎನ್ನುತ್ತಾರೆ. ಆದರೆ ಇದು ಅಧಿಕಾರಿಗಳ ಸಮರ್ಥನೆ ಮಾತ್ರ. ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ನಿವೇಶನ ಖರೀದಿಸಿ ನೋಂದಣಿಗೆ ಕಾಯುತ್ತಿರುವ ಸಾರ್ವಜನಿಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios