ಕೆಇಎ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಇದುವರೆಗೂ 41 ಆರೋಪಿಗಳನ್ನು ಬಂಧಿಸಲಾಗಿದೆ. ಕಲಬುರಗಿ ಕಮೀಷನರೇಟ್‌ ವ್ಯಾಪ್ತಿಯಲ್ಲಿನ 2, ಅಫಜಲ್ಪುರ 1 ಹಾಗೂ ಯಾದಗಿರಿಯಲ್ಲಿನ 5 ಪ್ರಕರಣ ಸೇರಿದಂತೆ 8 ಪ್ರಕರಣಗಳಲ್ಲಿ 41 ಆರೋಪಿಗಳ ಬಂಧನವಾಗಿದೆ. ಸಿಐಡಿ ತನಿಖೆ ವೇಗ ಪಡೆಯುತ್ತಿದ್ದು ಈ ಹಗರಣದಲ್ಲಿ ಇನ್ನಷ್ಟು ಬಂಧನದ ಸಾಧ್ಯತೆಗಳಿವೆ.

ಶೇಷಮೂರ್ತಿ ಅವಧಾನಿ

ಕಲಬುರಗಿ(ನ.17):  ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಪತ್ತೆಯಾಗಿರುವ ಕೆಇಎ ಪರೀಕ್ಷಾ ಅಕ್ರಮದ ಹಗರಣ ಬಗೆದಷ್ಟು ಹೊಸ ಹೊಸ ಸಂಗತಿಗಳು ಬಯಲಾಗುತ್ತಲೇ ನಡೆದಿವೆ. ಇತ್ತ ಸಿಐಡಿ ಪೊಲೀಸರು ಹಗರಣದ ತನಿಖೆ ಚುುಕುಗೊಳಿಸುತ್ತಿದ್ದಂತೆಯೇ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲನ ಒಂದೊಂದೇ ಕರಾಮತ್ತು ಬಯಲಿಗೆ ಬರುತ್ತಿವೆ. ಸದ್ಯ ಸಿಐಡಿ ತಂಡದ ವಶದಲ್ಲಿರುವ ಆರ್‌ಡಿ ಪಾಟೀಲನ ವಿಚಾರಣೆ ತೀವ್ರಗೊಂಡಿದೆ. ಈತ ಕೆಇಎ ಪರೀಕ್ಷೆಗೆ ಡೀಲ್‌ ಮಾಡಿಕೊಂಡ ಎಲ್ಲಾ ಅಭ್ಯರ್ಥಿಗಳೊಂದಿಗೆ ಪರೀಕ್ಷಾ ಅರ್ಜಿ ಹಾಕೋ ದಿನದಿಂದಲೂ ಪರೀಕ್ಷೆ ನಡೆಯೋವರೆಗೂ ನಿರಂತರ ಸಂಪರ್ಕದಲ್ಲಿರೋ ಸಂಗತಿ ಬಯಲಾಗಿದೆ. ಇದರಿಂದಾಗಿ ಅರ್ಜಿ ಹಾಕಿದ ದಿನದಿಂದಲೇ ಆರ್‌ಡಿಪಿ ಕೆಇಎ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸ್ಕೆಚ್‌ ಹಾಕಿದ್ದನೆಂಬ ಗುಮಾನಿ ಹುಟ್ಟಿಕೊಂಡಿದೆ.

ಬೆಳಗಿನ ಜಾವ ವಾಟ್ಸಅಪ್‌ ಕರೆ!

ಕೆಇಎ ಪರೀಕ್ಷೆ ನಡೆದ ಕಳೆದ ಅ.28ರಂದು ನಸುಕಿನಲ್ಲೇ ಆರ್‌ಡಿಪಿ ತನ್ನ ಊರಿನ ಅಭ್ಯರ್ಥಿ ತ್ರಿಮೂರ್ತಿ ಸೇರಿದಂತೆ ಹಲವರಿಗೆ ಕಾಲ್‌ ಮಾಡಿ ಪರೀಕ್ಷೆಯಲ್ಲಿ ಹೇಗೆಲ್ಲಾ ಮಾಡಬೇಕು, ಸರಿ ಉತ್ತರ ಹೇಗೆ ಬರುತ್ತವೆಂಬ ಮಾಹಿತಿಗಳನ್ನೆಲ್ಲ ನೀಡಿದ್ದನೆಂದು ವಿಚಾರಣೆಯಿಂದ ಗೊತ್ತಾಗಿದೆ.

ಕೆಇಎ ಪರೀಕ್ಷಾ ಅಕ್ರಮ: ಚಾಪೆ ತಿರಸ್ಕರಿಸಿ ಠಾಣೆಯ ನೆಲದ ಮೇಲೆಯೇ ಮಲಗಿದ ಪಾಟೀಲ್‌

ಎಲ್ಲಾ ಅಭ್ಯರ್ಥಿಗಳು ಮತ್ತು ಇತರರಿಗೆ ಕರೆ ಮಾಡಿ ಮಾತನಾಡಿರುವ ಆರ್.ಡಿ ಪಾಟೀಲ್ ಪರೀಕ್ಷೆ ದಿನವಷ್ಟೇ ಅಲ್ಲದೆ, ಕೆಇಎ ಅರ್ಜಿ ಹಾಕುವ ದಿನದಿಂದಲೂ ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಇದ್ದು ತನ್ನ ಲಕ್ಷಾಂತರ ರುಪಾಯಿ ಅಕ್ರಮದ ಡೀಲ್‌ ಕುದುರಿಸಿಕೊಂಡಿದ್ದಾನೆಂಬ ಗುಟ್ಟು ಸದ್ಯ ರಟ್ಟಾಗಿದೆ.

ತನ್ನ ಆಪ್ತರ ತಂಡಗಳ ಮೂಲಕ ಸಂಪರ್ಕಕ್ಕೆ ಬರುತ್ತಿದ್ದವರನ್ನೆಲ್ಲ ತಾನೇ ಸಂಪರ್ಕಿಸುತ್ತಿದ್ದ ಆರ್‌ಡಿಪಿ ವಾಟ್ಸಾಪ್‌ನಲ್ಲೇ ಅವರೊಂದಿಗೆ ಮಾತನಾಡುತ್ತ ಅಪ್ಲಿಕೇಶನ್ ಹಾಕುವಂತೆ ಸೂಚಿಸಿರೋ ಸಂಗತಿ ಸಾಕ್ಷಿ ಸಮೇತ ಸಿಐಡಿ ತಂಡದ ಕೈಗೆ ಸಿಕ್ಕಿದೆ. ಆರ್‌ಡಿಪಿಯ ವಾಟ್ಸಪ್‌ ಚಾಟ್‌ಗಳನ್ನೆಲ್ಲ ಸಂಗ್ರಹಿಸಿರುವ ಸಿಐಡಿ ಅಧಿಕಾರಿಗಳು ತನಿಖೆಯನ್ನ ಅದರ ಮೇಲೆಯೇ ಕೇಂದ್ರೀಕರಿಸಿದ್ದಾರೆ.

ತನ್ನ ಸುಳಿವು ಸಿಗದಂತೆ ಗೌಪ್ಯತೆ:

ಯಾರಿಗೂ ತನ್ನ ಕರಾಮತ್ತಿನ ಸುಳಿವು ಸಿಗಲೇಬಾರದು ಎಂದು ಬರೀ ವಾಟ್ಸಪ್ ಕಾಲ್ ಮಾಡುತ್ತಿದ್ದ ಆರ್.ಡಿ ಪಾಟೀಲ್ ತುಂಬ ಸಂಚುಗಳನ್ನು ಮಾಡಿಯೇ ಅಕ್ರಮ ಎಸಗಿರೋ ಸಂಗತಿ ಬಯಲಾಗುತ್ತಿದೆ. ಅನೇಕ ಅಭ್ಯರ್ಥಿಗಳು ತಮ್ಮ ಮನೆಯಲ್ಲಿ ಹಿರಿಯರು, ಪೋಷಕರು ಕರೆ ಮಾಡುತ್ತಿದ್ದಾರೆ, ತಾವು ಕರೆ ಸ್ವೀಕರಿಸಿ ಮಾತನಾಡಿರಿ ಎಂದು ಆರ್‌ಡಿ ಪಾಟೀಲನಿಗೆ ಸೂಚಿಸಿರುವ ಸಂಭಾಷಣೆ, ಚಾಟ್‌ಗಳೂ ಸಹ ಲಭ್ಯವಾಗಿವೆ. ಹೆಚ್ಚು ಸಂದರ್ಭದಲ್ಲಿ ಅಭ್ಯರ್ಥಿಗಳ ಜೊತೆಗೆ ನಸುಕಿನ ಜಾವದಲ್ಲೇ ಆರ್‌ಡಿಪಿ ಕರೆ ಮಾಡಿ ಮಾತನಾಡಿದ್ದಿದೆ. ಹೀಗೆ ಡೀಲ್‌ ಆದ ಅಭ್ಯರ್ಥಿಗಳೊಂದಿಗೆ ಆರ್‌ಡಿಪಿ ಬ್ಲೂಟೂತ್‌ ಪೂರೈಕೆ, ಇತ್ಯಾದಿ ವಿಚಾರಗಳನ್ನು ಚರ್ಚಿಸಿದ್ದಾನೆ. ಇವುಗಳ ಸಾಕ್ಷಿ ಪುರಾವೆಗಳೂ ಸಿಐಡಿ ತಂಡ ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ.

'ಸುಮ್ಮನೆ ಬೊಗಳಬೇಡ್ರೋ, ದಾಖಲೆ ಇಟ್ಟು ಸುದ್ದಿ ಮಾಡ್ರೋ..' ಮಾಧ್ಯಮಗಳ ವಿರುದ್ಧ ನಾಲಗೆ ಹರಿಬಿಟ್ಟ ಆರ್‌ಡಿ ಪಾಟೀಲ!

ಉಪನ್ಯಾಸಕರಿಗೆ ಮತ್ತೆ ಸಿಐಡಿ ಬುಲಾವ್‌

ಈಗಾಗಲೇ ಅಫಜಲ್ಪುರ ರಾಯಲ್‌ ಪರೀಕ್ಷಾ ಕೇಂದ್ರದಲ್ಲಿ ಕೆಇಎ ಪರೀಕ್ಷೆಯ ಕಸ್ಟೋಡಿಯನ್‌, ಪ್ರಶ್ನೆ ಪತ್ರಿಕೆ ಇನ್‌ಚಾರ್ಜ್‌ ಆಗಿದ್ದ ಇಬ್ಬರು ಪಿಯು ಉಪನ್ಯಾಸಕರನ್ನ ಮತ್ತೆ ಸಿಐಡಿ ತಂಡ ಗುರುವಾರವೂ ವಿಚಾರಣೆಗೆ ಕರೆದಿತ್ತು.
ಸಿಐಡಿ ಬುಲಾವ್ ಮೇರೆಗೆ ಕರಜಗಿ ಗ್ರಾಮದ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಚಂದ್ರಕಾಂತ ಬುರಕಲ್, ಹಾಗೂ ಬಸಣ್ಣ ಪೂಜಾರಿ ಸಿಐಡಿ ಕಚೇರಿಗೆ ಆಗಮಿಸಿದ್ದರು. ಇವರಿಬ್ಬರು ಕೆಇಎ ಪರೀಕ್ಷೆಯಲ್ಲಿ ಅಫಜಲ್ಪೂರ ರಾಯಲ್‌ ಪರೀಕ್ಷಾ ಕೇಂದ್ರದಲ್ಲಿ ಮುಖ್ಯಸ್ಥ ಹಾಗೂ ಪ್ರಶ್ನೆಪತ್ರಿಕೆ ಕಸ್ಟೋಡಿಯನ್‌ ಆಗಿ ಕೆಲಸ ನಿರ್ವಹಿಸಿದ್ದರು. ನಿನ್ನೆ ಸಂಜೆ ಇಬ್ಬರು ಉಪನ್ಯಾಸಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ವಾಪಾಸು ಕಳಿಸಿದ್ದ ಸಿಐಡಿ ಅಧಿಕಾರಿಗಳು
ಕೆಇಎ ಪರೀಕ್ಷೆ ಅಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇವರಿಬ್ಬರನ್ನು ಗುರುವಾರವೂ ಕರೆದು ವಿಚಾರಣೆ ನಡೆಸಿದೆ.

41 ಆರೋಪಿಗಳ ಬಂಧನ:

ಕೆಇಎ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಇದುವರೆಗೂ 41 ಆರೋಪಿಗಳನ್ನು ಬಂಧಿಸಲಾಗಿದೆ. ಕಲಬುರಗಿ ಕಮೀಷನರೇಟ್‌ ವ್ಯಾಪ್ತಿಯಲ್ಲಿನ 2, ಅಫಜಲ್ಪುರ 1 ಹಾಗೂ ಯಾದಗಿರಿಯಲ್ಲಿನ 5 ಪ್ರಕರಣ ಸೇರಿದಂತೆ 8 ಪ್ರಕರಣಗಳಲ್ಲಿ 41 ಆರೋಪಿಗಳ ಬಂಧನವಾಗಿದೆ. ಸಿಐಡಿ ತನಿಖೆ ವೇಗ ಪಡೆಯುತ್ತಿದ್ದು ಈ ಹಗರಣದಲ್ಲಿ ಇನ್ನಷ್ಟು ಬಂಧನದ ಸಾಧ್ಯತೆಗಳಿವೆ.