ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಪಂದ್ಯ ನಡೆಸುವುದು ಕಷ್ಟವಾಗಲಿದೆ. ಆರ್‌ಸಿಬಿ ಕಾಲ್ತುಳಿತ ಪ್ರಕರಣದಿಂದ ಇದೀಗ ಕ್ರೀಡಾಂಗಣಕ್ಕೀ ಶಾಕ್ ಎದುರಾಗಿದೆ. ಅಗ್ನಿಶಾಮಕ ದಳ ಸೂಚನೆಯಂತೆ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಬೆಂಗಳೂರು (ಜೂ. 30 ) ಆರ್‌ಸಿಬಿ ಕಾಲ್ತುಳಿತ ಪ್ರಕರಣ ಬಳಿಕ ಕೆಎಸ್‌ಸಿಎ ಪದಾಧಿಕಾರಿಗಳಿಗೆ ಮಾತ್ರವಲ್ಲ ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ತಲೆನೋವು ಹೆಚ್ಚಾಗಿದೆ. ಅವಘಡದ ಬೆನ್ನಲ್ಲೇ ತೀವ್ರ ತಪಾಸಣೆಗಳು ನಡೆಯುತ್ತಿದೆ. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವುದು ಕಷ್ಟವಾಗಿದೆ. ಕಾರಣ ಕ್ರೀಡಾಂಗಣದ ವಿದ್ಯುತ್ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ. ಅಗ್ನಿಶಾಮಕ ದಳ ಸೂಚನೆ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಅಗ್ನಿ ಸುರಕ್ಷತೆ ಪಾಲಿಸಿಲ್ಲ ಎಂದು ಅಧಿಕಾರಿಗಳು
ಕಾಲ್ತುಳಿತ ಪ್ರಕರಣದ ತನಿಖೆ ಹಲವು ಹಂತದಲ್ಲಿ ನಡೆಯುತ್ತಿದೆ. ಇತ್ತ ಅಗ್ನಿಶಾಮಕ ದಳ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. ಸಾವಿರಾರು ಜನ ಸೇರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಗ್ನಿ ಸುರಕ್ಷತಾ ಸರ್ಟಿಫಿಕೇಟ್ ತೆಗೆದುಕೊಂಡಿಲ್ಲ ಅನ್ನೋದು ಪತ್ತೆಯಾಗಿದೆ. ಸುರಕ್ಷತಾ ನಿಯಮ ಪಾಲನೆಯಲ್ಲಿ ಕೆಎಸ್‌ಸಿಎ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಪತ್ತೆಯಾಗಿದೆ.
ರಾಜ್ಯ ಅಗ್ನಿಶಾಮಕದಳ ಮಹಾ ನಿರ್ದೇಶಕರ ಪತ್ರ
ಅಗ್ನಿ ಸುರಕ್ಷತೆಯಲ್ಲಿ ಲೋಪ ಎಸಗಿದ ಕಾರಣಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ರಾಜ್ಯ ಅಗ್ನಿಶಾಮಕದಳ ಮಹಾ ನಿರ್ದೇಶಕರು ಬೆಸ್ಕಾಂಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಕೆಎಸ್‌ಸಿಎ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘನೆ ಕುರಿತು ಉಲ್ಲೇಖಿಸಿದ್ದರು. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಪತ್ರದಲ್ಲಿ ಸೂಚಿಸಿದ್ದರು.
ಅಗ್ನಿಶಾಮಕದಳ ಪತ್ರದಂಕೆ ವಿದ್ಯುತ್ ಕಡಿತಗೊಳಿಸಿದ ಬೆಸ್ಕಾಂ
ಅಗ್ನಿಶಾಮಕದಳ ಮಹಾ ನಿರ್ದೇಶಕರ ಸೂಚನೆಯಂತೆ ಬೆಸ್ಕಾಂ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬೇಟಿ ನೀಡಿದ್ದಾರೆ. ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಆರ್‌ಸಿಬಿ ಕಾಲ್ತುಳಿತ ಪ್ರಕರಣ
ಐಪಿಎಲ್ ಟೂರ್ನಿಯಲ್ಲಿ 18 ವರ್ಷದ ಬಳಿಕ ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ರಾಜ್ಯ ಸರ್ಕಾರ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು. ಇತ್ತ ಆರ್‌ಸಿಬಿ ಟೀಂ ಮ್ಯಾನೇಜ್ಮೆಂಟ್ ಕೂಡ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು. ವಿಧಾನಸೌಧ ಮೆಟ್ಟಿಲುಗಳ ಮೇಲೆ ಸನ್ಮಾನ ನಡೆದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎರಡೂ ಕಡೆ ನಿಯಂತ್ರಣಕ್ಕೂ ಸಿಗದ ರೀತಿಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಉಚಿತ ಪ್ರವೇಶ ಘೋಷಿಸಲಾಗಿತ್ತು. ಕ್ರೀಡಾಂಗಣ ಭರ್ತಿಯಾಗುತ್ತಿದ್ದಂತೆ ಕ್ರೀಡಾಂಗಣದ ಗೇಟುಗಳನ್ನು ಮುಚ್ಚಲಾಗಿತ್ತು. ಆದರೆ ಸಾವಿರಾರು ಮಂದಿ ಕ್ರೀಡಾಂಗಣ ಪ್ರವೇಶಿಸಲು ಮುಂದಾಗಿದ್ದರು. ಈ ವೇಳೆ ನೂಕು ನುಗ್ಗಲು ಸಂಭವಿಸಿದೆ. ಇದರ ಪರಿಣಾಮ 11 ಅಭಿಮಾನಿಗಳು ಮತಪಟ್ಟಿದ್ದರು.
ಪೊಲೀಸರ ಅಮಾನತು ಮಾಡಿದ ಸರ್ಕಾರ
ಆರ್‌ಸಿಬಿ ಕಾಲ್ತುಳಿತ ಪ್ರಕರಣದಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿತ್ತು. ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಅಮಾಯಕರ ಸಾವಿಗೆ ಕಾರಣವಾಗಿದೆ ಅನ್ನೋ ಆರೋಪ ಗಂಭೀರವಾಗಿ ಕೇಳಿಬಂದಿತ್ತು. ಟೀಕೆ, ಆರೋಪಗಳು ತೀವ್ರಗೊಳ್ಳುತ್ತಿದ್ದಂತೆ ಪೊಲೀಸ್ ಮಹಾ ನಿರ್ದೇಶಕರು ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಕರ್ತವ್ಯ ಲೋಪದಡಿ ಅಮಾನತು ಮಾಡಿತ್ತು. ಇದೀಗ ಕಾಲ್ತುಳಿತ ಪ್ರಕರಣದ ತನಿಖೆ ನಡೆಯುತ್ತಿದೆ.
