Asianet Suvarna News Asianet Suvarna News

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಪಡಿತರ?

  • ನವೆಂಬರ್‌ ತಿಂಗಳಲ್ಲೇ ಮನೆ-ಮನೆಗೆ ಪಡಿತರ ಹೊಸ ವ್ಯವಸ್ಥೆ
  •  ಬೆಂಗಳೂರಲ್ಲಿ ಪ್ರಾಯೋಗಿಕವಾಗಿ ಮೊದಲು ಆರಂಭ ಸಾಧ್ಯತೆ
  •  ಇಂದು ಅಥವಾ ನಾಳೆ ಈ ಬಗ್ಗೆ ಸಿಎಂ ನಿರ್ಣಯ ನಿರೀಕ್ಷೆ
Ration will distribute to Door step under pds snr
Author
Bengaluru, First Published Oct 28, 2021, 6:10 AM IST
  • Facebook
  • Twitter
  • Whatsapp

ಬೆಂಗಳೂರು (ಅ.28): ರಾಜ್ಯದಲ್ಲಿ (Karnataka) ಮನೆ-ಮನೆಗೆ ಪಡಿತರ ತಲುಪಿಸುವ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ (Bengaluru) ಪ್ರಾಯೋಗಿಕವಾಗಿ ನವೆಂಬರ್‌ ತಿಂಗಳಿಂದಲೇ ಜಾರಿಯಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ನೇತೃತ್ವದಲ್ಲಿ ಅ.28 ಅಥವಾ 29 ರಂದು ಸಭೆಯೊಂದು ನಡೆಯಲಿದ್ದು, ಅದರಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ಪಡಿತರ ಹಂಚಿಕೆ ಹೇಗೆ?:

ಪಡಿತರ ಹಂಚಿಕೆಗೆ ಸರಕು ಸಾಗಣೆ ಆಟೋ (Auto) ಬಳಸಲು ಚಿಂತಿಸಲಾಗಿದೆ. ಬೆಂಗಳೂರು ವ್ಯಾಪ್ತಿಗೆ 700 ಹಾಗೂ ಇಡೀ ರಾಜ್ಯಾದ್ಯಂತ ಪಡಿತರ ವಿತರಣೆಗೆ 10 ಸಾವಿರ ಸರಕು ಸಾಗಣೆ ವಾಹನಗಳ ಅಗತ್ಯವಿರುವ ಬಗ್ಗೆಯೂ ಚರ್ಚಿಸಲಾಗಿದೆ.

ಇಲಾಖೆಯೇ ವಾಹನ (Vehicle) ಖರೀದಿಸುವ ಬದಲಿಗೆ ಪ್ರೋತ್ಸಾಹ ಧನ, ಸಾಲ ವ್ಯವಸ್ಥೆ ಒದಗಿಸಿ ನಿರುದ್ಯೋಗಿಗಳು ಸ್ವಾವಲಂಬಿಗಳಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವ ಬಗ್ಗೆ ಸಮಾಲೋಚನೆಯಾಗಿದೆ. ಸಾಗಣೆ ಆಟೋ ವೆಚ್ಚದಲ್ಲಿ ಶೇ.30 ರಷ್ಟನ್ನು ಸಬ್ಸಿಡಿ, ಜಿಎಸ್‌ಟಿ ರೂಪದಲ್ಲಿ ಸರಕಾರ ಭರಿಸಲಿದೆ. ಶೇ.10ರಷ್ಟನ್ನು ಆಸಕ್ತ ಫಲಾನುಭವಿ ಭರಿಸಬೇಕು. ಉಳಿಕೆ ಶೇ.60 ರಷ್ಟುಮೊತ್ತವನ್ನು ಶೇ.4ರಷ್ಟುವಾರ್ಷಿಕ ಬಡ್ಡಿ ದರದಲ್ಲಿ ಸಾಲ ಪಡೆಯಲು ಇಲಾಖೆ ನೆರವು ನೀಡಲಿದೆ. ಆರು ವರ್ಷಗಳಲ್ಲಿ ಸಾಲ (Loan) ಮರುಪಾವತಿಸಿದರೆ ವಾಹನ ಫಲಾನುಭವಿಯ ಸ್ವಂತವಾಗಲಿದೆ.

ಹಲವು ಸಮಸ್ಯೆಗಳೂ ಇವೆ:

ಇದೇ ವೇಳೆ ಒಂದು ವಾಹನ ಎಷ್ಟುಪಡಿತರದಾರರಿಗೆ ಪಡಿತರ ವಿತರಿಸಬೇಕು. ಪಡಿತರ ವಿತರಣೆ ವೇಳೆ ಮನೆಗಳಲ್ಲಿ ಇಲ್ಲದವರಿಗೆ ಪಡಿತರ ಹೇಗೆ ವಿತರಣೆ ಮಾಡಬೇಕು. ಪಡಿತರ ವಿತರಣೆಯಲ್ಲಿ ಉಂಟಾಗುವ ಲೋಪಗಳಿಗೆ ಪಡಿತರ ನ್ಯಾಯಬೆಲೆ ಅಂಗಡಿಗಳು ಹೊಣೆಯಾಗಬೇಕೆ ಅಥವಾ ವಾಹನದಲ್ಲಿ ಪೂರೈಕೆ ಮಾಡುವಾತ ಹೊಣೆಯಾಗಬೇಕೆ? ಎಂಬ ವಿಷಯಗಳ ಬಗ್ಗೆ ಚರ್ಚೆಯಾಗಿ ಪರಿಹಾರ ಕಂಡುಕೊಂಡ ಬಳಿಕ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ವ್ಯವಸ್ಥೆಯ ನಡುವೆ ಸಮನ್ವಯತೆ ಹೇಗೆ ಸಾಧಿಸಬೇಕು ಎಂಬ ಕುರಿತು ಇನ್ನೂ ಗೊಂದಲಗಳಿವೆ. ಇವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಎಲ್ಲವೂ ಬಗೆಹರಿದ ನಂತರವೇ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗುವುದು. ಯೋಜನೆ ಜಾರಿಗೆ ತರಾತುರಿ ಇಲ್ಲ ಎಂದು ಸಚಿವರ ಆಪ್ತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಬಡವರ ಅನ್ನಕ್ಕೆ ಕನ್ನ ಹಾಕಿದ ಖದೀಮರು

ವಿಧಾನಸೌಧದಲ್ಲಿ ಮಂಗಳವಾರ ಆಹಾರ ಮತ್ತು ನಾಗರೀಕ ಸಬರಾಜು ಇಲಾಖೆ ಸಚಿವ ಉಮೇಶ್‌ ಕತ್ತಿ ನೇತೃತ್ವದಲ್ಲಿ ಸುದೀರ್ಘ ಸಭೆ ನಡೆಸಿದ್ದು, ಮನೆ-ಮನೆಗೆ ಪಡಿತರ ಹಂಚಿಕೆ ಕುರಿತು ಚರ್ಚೆ ನಡೆಸಲಾಗಿದೆ. ಪ್ರಸ್ತುತ ಹಾನಗಲ್‌ ಹಾಗೂ ಸಿಂದಗಿ ಉಪ ಚುನಾವಣೆಗಳ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಪ್ರಕಟಿಸಲಾಗುವುದಿಲ್ಲ. ಹೀಗಾಗಿ ಅ.28 ಅಥವಾ 29 ರಂದು ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸಭೆ ನಡೆಸಿ ಬಳಿಕ ಅಂತಿಮ ಘೋಷಣೆ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಆದರೆ, ಬೆಂಗಳೂರಿಗೆ ಸೀಮಿತವಾಗಿ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಗೊಳಿಸುವುದರಿಂದ ಯೋಜನೆ ಬಗ್ಗೆ ಘೋಷಿಸಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಆದಾಗ್ಯೂ ಯೋಜನೆ ಘೋಷಣೆಯ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿಗಳಿಗೆ ಬಿಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios