ಮಲ್ಲಿಕಾರ್ಜುನ ಹೊಸಮನಿ

ಬಾದಾಮಿ(ಜ.20): ನಾಡಿನ ಶಕ್ತಿಪೀಠಗಳಲ್ಲೊಂದಾದ ಐತಿಹಾಸಿಕ ಬಾದಾಮಿಯ ಬನಶಂಕರಿ ದೇವಿ ರಥೋತ್ಸವಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ನಾಳೆ ಜ.21ರಂದು ಬೃಹತ್ ರಥೋತ್ಸವ ನಡೆಯಲಿದೆ. 

ಲೋಕಕಲ್ಯಾಣಾರ್ಥ ಈ ಬಾರಿ ದೇವಿಗೆ ಪೀತಾಂಬರ ಅರ್ಪಣೆಗೆ ಹಂಪಿಯಿಂದ ಬಾದಾಮಿವರೆಗೆ ಪಾದಯಾತ್ರೆ ನಡೆಸಿದ್ದರೆ, ಇತ್ತ ಈ ಬಾರಿ ಸ್ಥಳೀಯ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿರೋದು ವಿಶೇಷ.

ಉತ್ತರ ಕರ್ನಾಟಕದ ಆರಾಧ್ಯ ದೈವ ಬಾದಾಮಿಯ ಬನಶಂಕರಿ ದೇವಿ ಜಾತ್ರೆ ಮತ್ತೆ ಬಂದಿದೆ. ಪ್ರತಿಬಾರಿ ಲಕ್ಷಾಂತರ ಜನ್ರ ಭಕ್ತ ಸಮೂಹದೊಂದಿಗೆ ವೈಶಿಷ್ಟ್ಯತೆಗೆ ಸಾಕ್ಷಿಯಾಗುತ್ತಿದ್ದ ಬಾದಾಮಿ ಜಾತ್ರೆ ಈ ಬಾರಿ ಮತ್ತಷ್ಟು ರಂಗೇರಲಿದೆ.

"

ದೇವಿಗೆ ಈ ಬಾರಿ ಸೂಳಿಭಾವಿ ಗ್ರಾಮದ ಶಾಖಾಂಬರಿ ನೇಕಾರ ಸೊಸೈಟಿಯಲ್ಲಿ ಗೀತಾ ಎಂಬ ನೇಕಾರ ಮಹಿಳೆ ನಿಯಮಾನುಸಾರ ಮಡಿಯೊಂದಿಗೆ ನೇಯ್ದ ವಿಶೇಷ ಪೀತಾಂಬರವನ್ನ ನೇಕಾರ ಬಂಧುಗಳು ತಯಾರಿಸಿದ್ದು, ಅದನ್ನ ಹಂಪಿ ಹೇಮಕೂಟದ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮಿಜಿಗಳ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯ ಹಂಪಿಯಿಂದ ಬಾದಾಮಿಯವರೆಗೆ ಸಾವಿರಾರು ಭಕ್ತರೊಂದಿಗೆ ಲೋಕಕಲ್ಯಾಣಾರ್ಥ ಪಾದಯಾತ್ರೆ ಮೂಲಕ ತೆಗೆದುಕೊಂಡು ಬರಲಾಗಿದೆ.

ಇನ್ನು ನಾಡಿನಲ್ಲಿ ಮಳೆಬೆಳೆ ಕಡಿಮೆಯಾಗಿ ಜನ್ರಿಗೆ ಎದುರಾಗುವ ಸಂಕಷ್ಟಗಳು ದೂರವಾಗಲಿ ಎಂಬ ಉದ್ದೇಶದಿಂದ ಲೋಕಕಲ್ಯಾಣಾರ್ಥ ಈ ಪಾದಯಾತ್ರೆ ಹಮ್ಮಿಕೊಂಡಿರೋದಾಗಿ ದಯಾನಂದಪುರಿ ಸ್ವಾಮೀಜಿ ಹೇಳಿದ್ರು.

ಈ ಬಾರಿ ಬಾದಾಮಿಯ ಬನಶಂಕರಿ ಜಾತ್ರೆಗೆ ಸ್ಥಳೀಯ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಂಪತಿ ಸಮೇತ ಆಗಮಿಸುತ್ತಿರೋದು ವಿಶೇಷವಾಗಿದ್ದು, ನಾಳೆ ರಥೋತ್ಸವದಲ್ಲಿ ಭಾಗವಹಿಸಲಿದ್ದಾರೆ. 

ಒಂದು ತಿಂಗಳುಗಳ ಕಾಲನ ನಡೆಯುವ  ಬಾದಾಮಿಯ ಜಾತ್ರೆಗಾಗಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮನರಂಜನೆಗಾಗಿ 12 ನಾಟಕಗಳು ಸೇರಿದಂತೆ ದಿನೋಪಯೋಗಿ ಮಾರಾಟ ಮಾಡುವ ಅಂಗಡಿಮುಂಗಟ್ಟುಗಳನ್ನ ತೆರೆಯಲಾಗಿದೆ. ರಾಜ್ಯವಲ್ಲದೆ ಆಂದ್ರಪ್ರದೇಶ, ತಮಿಳುನಾಡು,ಮಹಾರಾಷ್ಟ್ರ ಸೇರಿದಂತೆ ಲಕ್ಷಾಂತರ ಜನ ಭಕ್ತರು ಸಾಕ್ಷಿಯಾಗಲಿದ್ದಾರೆ.

"