ಬೆಳಗಾವಿ[ಡಿ.28]: ಸಚಿವ ಸಂಪುಟದಿಂದ ಕೈಬಿಟ್ಟಬಳಿಕ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಮುಂದಿನ ರಾಜಕೀಯ ನಡೆ ಇನ್ನೂ ನಿಗೂಢವಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಈಗಾಗಲೇ ಘೋಷಿಸಿರುವ ಅವರು ನಾಲ್ಕು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಇದೀಗ ರಮೇಶ್‌ ಜಾರಕಿಹೊಳಿ ಅವರು ಮಹಾರಾಷ್ಟ್ರದಲ್ಲಿ ಇದ್ದಾರೆ, ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಸೇರಿ ಹಲವು ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ.

ಏತನ್ಮಧ್ಯೆ, ರಮೇಶ್‌ ಜಾರಕಿಹೊಳಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅವರ ಕಟ್ಟಾಬೆಂಬಲಿಗ ಶಾಸಕರಾದ ಅಥಣಿಯ ಮಹೇಶ ಕುಮಟಳ್ಳಿ ಮತ್ತು ಕಾಗವಾಡದ ಶ್ರೀಮಂತ ಪಾಟೀಲರ ಮನವೊಲಿಸುವ ಪ್ರಯತ್ನವನ್ನು ರಮೇಶ್‌ ಸಹೋದರ ಸತೀಶ್‌ ಜಾರಕಿಹೊಳಿ ಮಾಡುತ್ತಿದ್ದಾರೆ. ಅಥಣಿಯಲ್ಲಿ ಈ ಇಬ್ಬರೂ ಶಾಸಕರೊಂದಿಗೆ ಮಾತುಕತೆ ನಡೆಸಿ, ಪಕ್ಷ ತೊರೆಯದಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಆದರೆ, ರಮೇಶ್‌ ಜಾರಕಿಹೊಳಿ ಅವರೇ ಸಂಪರ್ಕಕ್ಕೆ ಸಿಗದಿರುವುದು ಸತೀಶ್‌ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್‌ ಹೈಕಮಾಂಡ್‌ ಜೊತೆಗೆ ಮುನಿಸಿಕೊಂಡಿರುವ ರಮೇಶ ಜಾರಕಿಹೊಳಿ ಮನವೊಲಿಸುವ ಹೊಣೆಯನ್ನು ಸದ್ಯ ಸತೀಶ್‌ ಹೆಗಲಿಗೆ ಹಾಕಲಾಗಿದೆ.

ಎಲ್ಲಿರಬಹುದು ರಮೇಶ್‌?:

ಸದ್ಯದ ರಾಜಕೀಯ ಬೆಳವಣಿಗೆಯಿಂದ ಮನನೊಂದಿರುವ ರಮೇಶ್‌ ಜಾರಕಿಹೊಳಿ ಅವರು ಎಲ್ಲಿದ್ದಾರೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅವರ ಆಪ್ತರಿಗೂ ಅವರು ಎಲ್ಲಿದ್ದಾರೆಂಬ ಸುಳಿವು ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಕುರಿತು ನಾಲ್ಕು ದಿನಗಳ ಕಾಲ ಕಾದು ನೋಡಿ ಎಂದು ಅವರು ನೀಡಿದ್ದ ಗಡುವು ಕೂಡ ಈಗ ಮುಗಿದಿದೆ. ಹೀಗಾಗಿ ಅವರ ರಾಜಕೀಯ ನಡೆ ಈಗ ತೀವ್ರ ಕುತೂಹಲ ಕೆರಳಿಸಿದೆ.

ಮಹಾರಾಷ್ಟ್ರಕ್ಕೆ ಹೋದರೆ?:

ರಮೇಶ್‌ ಜಾರಕಿಹೊಳಿ ಅವರು ಏಕಾಂಕಿಯಾಗಿಯೇ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ ಎನ್ನುವ ಮಾತು ಕೂಡ ಹರಿದಾಡುತ್ತಿದೆ. ಬಿಜೆಪಿ ಸೇರ್ಪಡೆ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಕಾಂತ ಪಾಟೀಲ ಅವರ ಜೊತೆಗೆ ರಮೇಶ ನಿಕಟ ಸಂಬಂಧ ಹೊಂದಿದ್ದು, ಈ ಸಂಬಂಧ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.