* ಜಾರಕಿಹೊಳಿ ಸೀಡಿ ಕೇಸ್‌: ಎಸ್‌ಐಟಿ ತನಿಖೆ ಅಂತ್ಯ* ಅಂತಿಮ ವರದಿ ಸಿದ್ಧ: ಹೈಕೋರ್ಟ್‌ಗೆ ಸರ್ಕಾರ ಮಾಹಿತಿ* ಜು.14ರವರೆಗೆ ವರದಿ ಸಲ್ಲಿಸಬೇಡಿ: ಕೋರ್‌್ಟಸೂಚನೆ

ಬೆಂಗಳೂರು(ಜು.06): ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆ ಮುಕ್ತಾಯಗೊಂಡಿದ್ದು, ಅಂತಿಮ ವರದಿ ಸಿದ್ಧವಾಗಿದೆ.

ಸೋಮವಾರ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಆದರೆ, ಮುಂದಿನ ವಿಚಾರಣೆವರೆಗೆ (ಜು.14ರವರೆಗೆ) ತನಿಖಾ ವರದಿಯನ್ನು ಸಲ್ಲಿಸದಂತೆ ಎಸ್‌ಐಟಿ ಮತ್ತು ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

ಸಿ.ಡಿ. ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿ ನಗರ ಪೊಲೀಸ್‌ ಆಯುಕ್ತರು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ನಗರದ ವಕೀಲೆ ಗೀತಾ ಮಿಶ್ರಾ ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ವಕೀಲ ಉಮೇಶ್‌ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾ| ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು.

ರಾಜ್ಯ ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಮೊಮೊ ಸಲ್ಲಿಸಿ, ಪ್ರಕರಣದ ತನಿಖೆ ಮುಕ್ತಾಯಗೊಂಡಿದೆ ಹಾಗೂ ಅಂತಿಮ ತನಿಖಾ ವರದಿ ಸಿದ್ಧವಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಇಂದಿರಾ ಜೈಸಿಂಗ್‌ ಆಕ್ಷೇಪ:

ಅದಕ್ಕೆ ಆಕ್ಷೇಪಿಸಿದ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್‌, ‘ಹೈಕೋರ್ಟ್‌ ಅನುಮತಿ ಇಲ್ಲದೆ ಎಸ್‌ಐಟಿಯು ತನಿಖಾ ವರದಿ ಸಲ್ಲಿಸುವಂತಿಲ್ಲ. ಅರ್ಜಿ ಕುರಿತು ನಮ್ಮ ವಾದ ಮಂಡನೆ ಬಾಕಿಯಿದೆ’ ಎಂದು ತಿಳಿಸಿದರು.

ಅರ್ಜಿದಾರೆ ಗೀತಾ ಮಿಶ್ರಾ ಪರ ವಕೀಲ ಜಿ.ಆರ್‌. ಮೋಹನ್‌, ‘ಸಿ.ಡಿ. ಬಹಿರಂಗ ವಿಚಾರ ಕುರಿತು ಸಚಿವರಾದ ಮಾಧುಸ್ವಾಮಿ ಮತ್ತು ಡಾ.ಕೆ.ಸುಧಾಕರ್‌ ಅವರು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ. ಇದು ಲೈಂಗಿಕ ದೌರ್ಜನ್ಯ ಪ್ರಕರಣವಲ್ಲ ಎಂದು ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಇದು ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಈ ವಿಚಾರವನ್ನು ನ್ಯಾಯಾಲಯವು ಗಮನಿಸಬೇಕು’ ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪ್ರಕರಣವನ್ನು ಹೈಕೋರ್ಟ್‌ ವಿಚಾರಣೆ ನಡೆಸುತ್ತಿದೆ. ತನಿಖೆ ಕುರಿತಂತೆ ಉತ್ತರಿಸಲು ಸರ್ಕಾರವಿದೆ’ ಎಂದು ನುಡಿಯಿತು.

ವರದಿ ಸಲ್ಲಿಸದಂತೆ ಸೂಚನೆ:

ಯುವತಿಯ ಮಧ್ಯಂತರ ಅರ್ಜಿಗೆ ಸಂಬಂಧಿಸಿದ ದಾಖಲೆಗಳು ಕನ್ನಡದಲ್ಲಿವೆ. ಅವುಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಸಲ್ಲಿಸುವಂತೆ ಯುವತಿ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜು.14ಕ್ಕೆ ಮುಂದೂಡಿತು. ಅಲ್ಲದೆ, ಅರ್ಜಿಯ ಮುಂದಿನ ವಿಚಾರಣೆವರೆಗೆ ತನಿಖಾ ವರದಿಯನ್ನು ಸಲ್ಲಿಸದಂತೆ ಎಸ್‌ಐಟಿ ಮತ್ತು ಸರ್ಕಾರಕ್ಕೆ ಇದೇ ವೇಳೆ ಸೂಚಿಸಿತು.