ಗೋಪಾಲ್‌ ಯಡಗೆರೆ

ಶಿವಮೊಗ್ಗ(ಮಾ.20): ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಮೂರು ತಿಂಗಳಿಂದ ಸದ್ದು ಮಾಡುತ್ತಿರುವ ರೈತ ಚಳವಳಿ ಇದೀಗ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದೆ. ಸಮಾಜವಾದಿ ಹೋರಾಟದ ನೆಲವಾದ ಶಿವಮೊಗ್ಗದಲ್ಲಿ ಶನಿವಾರ ‘ರೈತ ಮಹಾಪಂಚಾಯತ್‌ ಸಮಾವೇಶ’ ನಡೆಯಲಿದೆ. ದೆಹಲಿ ರೈತ ಹೋರಾಟದ ನಾಯಕ, ಭಾರತೀಯ ಕಿಸಾನ್‌ ಯೂನಿಯನ್‌ನ ರಾಕೇಶ್‌ ಟಿಕಾಯತ್‌ ಸೇರಿ ಹಲವು ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ತವರು ನೆಲದಲ್ಲಿ ನಡೆಯುತ್ತಿರುವ ಈ ಸಮಾವೇಶಕ್ಕೆ ಈಗಾಗಲೇ ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ. ನಗರದ ಸೈನ್ಸ್‌ ಮೈದಾನದಲ್ಲಿ ಮಧ್ಯಾಹ್ನ 3ಕ್ಕೆ ಸಮಾವೇಶ ಆರಂಭವಾಗಲಿದೆ. ಕೋವಿಡ್‌ 2ನೇ ಆತಂಕದ ನಡುವೆಯೂ ಈ ಸಮಾವೇಶದಲ್ಲಿ 30 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಸ್ಥಳೀಯ ಸಮಸ್ಯೆಗೂ ಒತ್ತು:

ಕೇಂದ್ರದ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸುವುದು ಮಾತ್ರವಲ್ಲದೆ, ಸ್ಥಳೀಯವಾದ ಕಸ್ತೂರಿರಂಗನ್‌ ವರದಿ ಸಮಸ್ಯೆ, ಹುಲಿ ಅಭಿಯಾರಣ್ಯ, ಬಗರ್‌ ಹುಕುಂ ಸಮಸ್ಯೆ, ಅಕೇಶಿಯಾ ನೆಡುತೋಪು ಮುಂತಾದ ಸಮಸ್ಯೆಗಳ ಬಗ್ಗೆಯೂ ಈ ಸಮಾವೇಶದಲ್ಲಿ ಪ್ರಸ್ತಾಪವಾಗಲಿದೆ. ರೈತ ಸಂಘ ಮತ್ತು ಹಸಿರು ಸೇನೆ, ಐಕ್ಯ ಹೋರಾಟ ಸಮಿತಿ ಕರ್ನಾಟಕ, ಸಂಯುಕ್ತ ಕಿಸಾನ್‌ ಮೋರ್ಚಾ ಸಂಘಟನೆಗಳು ಈ ರೈತ ಮಹಾಪಂಚಾಯತ್‌ ಸಮಾವೇಶ ಆಯೋಜಿಸಿವೆ. ದಲಿತ ಸಂಘರ್ಷ ಸಮಿತಿ, ಜನಪರ ಸಂಘಟನೆಗಳ ಮುಖಂಡರು, ಹೋರಾಟಗಾರರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್‌, ಆಮ್‌ಆದ್ಮಿ ಮತ್ತು ಜೆಡಿಎಸ್‌ ಪಕ್ಷಗಳೂ ಬೆಂಬಲಿಸಿವೆ.

ಮುಂದಿನ ಹೋರಾಟ:

ಶಿವಮೊಗ್ಗದ ಬಳಿಕ ಹಾವೇರಿಯಲ್ಲಿ ಮಾ.21ರಂದು ಸಮಾವೇಶ ನಡೆಯಲಿದೆ. ಮಾ.22ರಂದು ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2ನೇ ಹಂತದಲ್ಲಿ ಮಾ.31ರಂದು ಬೆಳಗಾವಿಯಲ್ಲಿ ಸಮಾವೇಶ ನಡೆಯಲಿದೆ. ಮುಂದಿನ ಹಂತದ ಚಳವಳಿ ರೂಪಿಸುವ ಸಂಬಂಧ ದಕ್ಷಿಣ ಭಾರತದ ಇತರೆ ರಾಜ್ಯಗಳ ನಾಯಕರನ್ನು ಸೇರಿಸಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎನ್ನುತ್ತಾರೆ ಸಂಘಟನೆಯ ಪ್ರಮುಖರಲ್ಲಿ ಒಬ್ಬರಾದ ಕೆ.ಎಲ್‌. ಅಶೋಕ್‌.

ಯಾರಾರ‍ಯರು ಭಾಗಿ?:

ದೆಹಲಿ ರೈತ ಹೋರಾಟದಲ್ಲಿ ಹೆಸರು ಮಾಡಿರುವ ರಾಕೇಶ್‌ ಟಿಕಾಯತ್‌, ಡಾ. ದರ್ಶನ್‌ ಪಾಲ್‌, ಯುದ್ಧವೀರ ಸಿಂಗ್‌, ಕರ್ನಾಟಕದ ರೈತ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್‌, ಕುರುಬೂರು ಶಾಂತಕುಮಾರ್‌, ಚುಕ್ಕಿ ನಂಜುಂಡಸ್ವಾಮಿ, ಜನಶಕ್ತಿ ಸಂಘಟನೆಯ ನೂರ್‌ ಶ್ರೀಧರ್‌, ಕಲ್ಕುಳ್ಳಿ ವಿಠ್ಠಲ ಹೆಗ್ಡೆ, ಕಡಿದಾಳ್‌ ಶಾಮಣ್ಣ, ಕೆ.ಟಿ. ಗಂಗಾಧರ್‌ ಇತರರು ಪಾಲ್ಗೊಳ್ಳಲಿದ್ದಾರೆ.

ವ್ಯವಸ್ಥೆ ಹೇಗಿದೆ?: ಸಮಾವೇಶಕ್ಕಾಗಿ ಸುಮಾರು 100 ಮಂದಿ ಕೂರುವಷ್ಟುದೊಡ್ಡ ವೇದಿಕೆ ವ್ಯವಸ್ಥೆ ಮಾಡಲಾಗಿದೆ. ಆಗಮಿಸುವ ಪ್ರತಿಯೊಬ್ಬರಿಗೂ ಮಾಸ್ಕ್‌ ವಿತರಿಸಲಾಗುತ್ತದೆ. ಹೆಬ್ಬಾಗಿಲಿನಲ್ಲಿ ಸ್ಯಾನಿಟೈಸ್‌ ಮಾಡುವ ದೊಡ್ಡ ಯಂತ್ರವೊಂದನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಕಲ್ಲಂಗಡಿ ಹಣ್ಣು, ಹತ್ತು ಸಾವಿರ ನೀರಿನ ಬಾಟಲ್‌, ಮಜ್ಜಿಗೆ, ಮಂಡಕ್ಕಿ ವ್ಯವಸ್ಥೆಯನ್ನು ಸಂಘಟಕರು ಮಾಡಿದ್ದಾರೆ. 300 ಜನ ಸ್ವಯಂ ಸೇವಕರು ಕಾರ್ಯ ನಿರ್ವಹಿಸಲಿದ್ದಾರೆ.