ರಾಜ್ಯಸಭೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಮಾದರಿ ಮಾರ್ಗಸೂಚಿ: ಸಚಿವ ಈಶ್ವರಪ್ಪ
ರಾಜ್ಯಸಭೆ ಚುನಾವಣೆಗೆ ಸಾಮಾನ್ಯ ಕಾರ್ಯಕರ್ತರನ್ನು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಬಿಜೆಪಿ ಹೈಕಮಾಂಡ್ ಕ್ರಮ ಮಾದರಿ, ಹೈಕಮಾಂಡ್ ನಿರ್ಧಾರವನ್ನು ಇಡೀ ರಾಜ್ಯದ ಕಾರ್ಯಕರ್ತರು, ನಾಯಕರು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.10): ರಾಜ್ಯಸಭೆ ಎರಡು ಸ್ಥಾನಕ್ಕೆ ರಾಜ್ಯ ಬಿಜೆಪಿ ಕೋರ್‌ಕಮಿಟಿ ಕಳುಹಿಸಿದ ಹೆಸರಿಗೆ ಬದಲಾಗಿ ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಿದ ಬಿಜೆಪಿ ಹೈಕಮಾಂಡ್ ಕ್ರಮ ಮಾದರಿ. ಇದು ಮುಂದಿನ ದಿನಗಳಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕೆಂಬ ಸಂದೇಶವೂ ಹೌದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರದಿಂದ ಒಂದು ಸ್ಪಷ್ಟ ಸೂಚನೆ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ನಮಗೆ ಇದು ಮಾದರಿ ಮಾರ್ಗಸೂಚಿ ಎಂದು ವಿಶ್ಲೇಷಿಸಿದರು.
ಹೈಕಮಾಂಡ್ ಆಯ್ಕೆಗೆ ಇಡೀ ರಾಜ್ಯದ ಕಾರ್ಯಕರ್ತರು, ನಾಯಕರು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲ ಕಡೆಯಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದ ಯಾರೊಬ್ಬರಿಗೂ ಅಸಮಾಧಾನವಾಗುವ ಪ್ರಶ್ನೆಯೇ ಇಲ್ಲ. ಯಾರ ಹೆಸರನ್ನು ರಾಜ್ಯ ಸಮಿತಿ ಕಳುಹಿಸಿತ್ತೋ ಆ ನಾಯಕರೇ ಈ ಆಯ್ಕೆಯನ್ನು ಒಪ್ಪಿ ಸಂತೋಷ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಬೇರೆ ಯಾರಿಗೆ ಅಸಮಾಧಾನ ಆಗಲು ಸಾಧ್ಯ ಎಂದರು.
ಮಾಡಿಯೇ ತೀರುತ್ತೇವೆಂದು ಸರ್ಕಾರದ ವಿರುದ್ಧ ತೊಡೆತಟ್ಟಿ ನಿಂತ ಸಿದ್ದರಾಮಯ್ಯ...!
ರಾಜ್ಯದಿಂದ ಯಾರದೇ ಹೆಸರು ಹೋದರೂ ಪಕ್ಷದ ಹಿರಿಯರು ಕುಳಿತು ಸರಿಯಾದ ತೀರ್ಮಾನ ಕೈಗೊಳ್ಳುತ್ತಾರೆ. ಇದು ಕುಟುಂಬದ ಹಿರಿಯರು ನಿರ್ಧಾರ ಕೈಗೊಳ್ಳುವ ರೀತಿಯಲ್ಲಿ. ಜಿಲ್ಲೆ, ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ ಅತ್ಯುತ್ತಮ ನಿರ್ಧಾರ. ಇದರಿಂದ ಪಕ್ಷದಲ್ಲಿ ಸಂಘಟನಾತ್ಮಕ ಪ್ರಕ್ರಿಯೆ ಹೆಚ್ಚಾಗುತ್ತದೆ. ಪಕ್ಷ ಬಲಿಷ್ಠವಾಗುತ್ತದೆ ಎಂದು ಹೇಳಿದರು.
ಆದರೆ ಈ ಹೆಸರುಗಳನ್ನು ನಾವು ಕಳುಹಿಸಿರಲಿಲ್ಲ. ಕೇಂದ್ರವೇ ಈ ನಿರ್ಧಾರಕ್ಕೆ ಬಂದಿದೆ ಎಂದ ಅವರು ಹೈಕಮಾಂಡ್‌ನ ಈ ನಿಲುವು ತಾನು ಗಟ್ಟಿಎಂದು ತೋರಿಸಿಕೊಳ್ಳುವ ಹೆಜ್ಜೆಯೇ ಎಂಬ ಪ್ರಶ್ನೆಗೆ ಆ ರೀತಿಯಲ್ಲ. ಭವಿಷ್ಯದ ಕಾರ್ಯಸೂಚಿ ಹೇಗಿರಬೇಕು ಎಂಬ ಸೂಚನೆ ಎಂದರು.