Asianet Suvarna News Asianet Suvarna News

ಪಂ.ರಾಜೀವ್‌ ತಾರಾನಾಥ್‌ ಅಸ್ತಂಗತ: ರಾಗದಿಂದ ಸರೋದ್‌ ವಾದನದೆಡೆಗೆ ಸಾಗಿದ ಹಾದಿಯೇ ಅಚ್ಚರಿ..!

ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಮೊದಲ ಸಂಗೀತ ಕಛೇರಿ ನೀಡಿದ ಅವರು, ಕೊಲ್ಕತಾದ ಪಂಡಿತ್‌ ಅಲಿ ಅಕ್ಬರ್‌ ಖಾನ್‌ ಅವರಿಂದಾಗಿ ಸರೋದ್‌ ವಾದನದತ್ತ ಆಕರ್ಷಿತರಾದರು. ಅಕ್ಬರ್‌ ಖಾನ್‌ ಅವರ ಶಿಷ್ಯರಾಗಿ ಶಿಕ್ಷಣ ಪಡೆದ ಅವರು ಖ್ಯಾತ ಸರೋದ್‌ ವಾದಕರಾಗಿ ದೇಶ-ವಿದೇಶಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿ ಹೆಸರುಗಳಿಸಿದವರು. 
 

Rajeev Taranath Path to Becoming Legend in the Music Industry is Wonder grg
Author
First Published Jun 12, 2024, 9:42 AM IST

ಮೈಸೂರು(ಜೂ.12):  ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್‌ ವಾದಕರಾದ ಪಂಡಿತ ರಾಜೀವ್‌ ತಾರಾನಾಥ್‌ ಅವರು ಸಂಗೀತ ಕ್ಷೇತ್ರದ ದಿಗ್ಗಜರಾಗಿ ಬೆಳೆದು ಬಂದ ಹಾದಿಯೇ ಒಂದು ಕೌತುಕ. ತಂದೆ ಪಂಡಿತ್‌ ತಾರಾನಾಥ್‌ ಸೇರಿ ಕಿರಾಣಾ ಘರಾನಾದ ಅನೇಕರಿಂದ ಬಾಲ್ಯದ ಸಂಗೀತ ಶಿಕ್ಷಣ ಪಡೆದ ಅವರು ಆರಂಭದಲ್ಲಿ ನಂತರ ಆಕರ್ಷಿತರಾದದ್ದು ಮಾತ್ರ ಸರೋದ್‌ ವಾದನದೆಡೆಗೆ.

ಸಣ್ಣ ವಯಸ್ಸಿನಲ್ಲೇ ಆಕಾಶವಾಣಿಯಲ್ಲಿ ಗಾಯಕರಾಗುವ ಅವಕಾಶ ಪಡೆದ ಅವರು ಬೆಂಗಳೂರು ಸೆಂಟ್ರಲ್‌ ಕಾಲೇಜಿನಲ್ಲಿ ಬಿ.ಎ.ಆನರ್ಸ್‌ ಅನ್ನು ಮೊದಲ ರ್‍ಯಾಂಕ್‌ನೊಂದಿಗೆ ಪೂರೈಸಿದ್ದರು. 1962ರಲ್ಲಿ ಮೈಸೂರು ವಿವಿಯಿಂದ ಎಂ.ಎ.ಇಂಗ್ಲಿಷ್‌ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರ್ಣಗೊಳಿಸಿದ್ದರು. ನಂತರ ಪ್ರೊ.ಸಿ.ಡಿ. ನರಸಿಂಹಯ್ಯ ಅವರ ಮಾರ್ಗದರ್ಶನದಲ್ಲಿ ಇಮೇಜ್‌ ಇನ್‌ ಪೊಯಿಟ್ರಿ ಆಫ್‌ ಟಿ.ಎಸ್‌.ಎಲಿಯೆಟ್‌ ಕುರಿತು ಸಂಶೋಧನೆ ನಡೆಸಿ ಪಿಎಚ್‌.ಡಿ ಪಡೆದಿದ್ದರು.

ಸರ್ಕಾರದ ವಿರುದ್ಧವೇ ಲಂಚ ಆರೋಪ ಮಾಡಿದ್ದ ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ನಿಧನ

ರಾಯಚೂರಿನಲ್ಲಿ ಅವರ ತಂದೆ ಕಟ್ಟಿದ ಹಮ್‌ ದರ್ದ್‌ ಕಾಲೇಜಿನಲ್ಲಿ 1963ರಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಅವರು 1964 ರಲ್ಲಿ ಧಾರವಾಡದ ಕರ್ನಾಟಕ ಕಾಲೇಜು, 1965-68 ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಆರ್‌ಐಇ), 1968-74 ರವರೆಗೆ ತಿರುಚ್ಚಿಯ ರೀಜನಲ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, 1974-81 ರವರೆಗೆ ಹೈದರಾಬಾದಿನ ಸೆಂಟ್ರಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಗ್ಲಿಷ್‌ ಮತ್ತು ಫಾರಿನ್‌ ಲಾಂಗ್ವೇಜಸ್‌ನಲ್ಲಿ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರಾಗಿದ್ದರು. 1980ರಲ್ಲಿ ಯೆಮನ್‌ ದೇಶದ ಏಡನ್‌ನಲ್ಲಿ ಇಂಗ್ಲಿಷ್‌ ಅಧ್ಯಾಪಕರಾಗಿದ್ದರು.1981-82ರಲ್ಲಿ ಪುಣೆಯ ಫಿಲಂ ಇನ್ಸ್‌ಟಿಟ್ಯೂಟ್‌ನಲ್ಲಿ ಸಿನಿಮಾ ಸಂಗೀತ ವಿಭಾಗದ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಮೊದಲ ಸಂಗೀತ ಕಛೇರಿ ನೀಡಿದ ಅವರು, ಕೊಲ್ಕತಾದ ಪಂಡಿತ್‌ ಅಲಿ ಅಕ್ಬರ್‌ ಖಾನ್‌ ಅವರಿಂದಾಗಿ ಸರೋದ್‌ ವಾದನದತ್ತ ಆಕರ್ಷಿತರಾದರು. ಅಕ್ಬರ್‌ ಖಾನ್‌ ಅವರ ಶಿಷ್ಯರಾಗಿ ಶಿಕ್ಷಣ ಪಡೆದ ಅವರು ಖ್ಯಾತ ಸರೋದ್‌ ವಾದಕರಾಗಿ ದೇಶ-ವಿದೇಶಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿ ಹೆಸರುಗಳಿಸಿದವರು. ಸಿಡ್ನಿಯ ಪ್ರಸಿದ್ಧ ಒಪೆರಾ ಹೌಸ್‌ನಲ್ಲಿ ಸರೋದ್‌ ನುಡಿಸಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಅವರು ಭಾಜನರಾಗಿದ್ದಾರೆ. ಸಂಗೀತ ನಿರ್ದೇಶಕರಾಗಿಯೂ ಅವರು ಕನ್ನಡ ಮತ್ತು ಅನೇಕ ಮಲಯಾಳಂ ಸಿನಿಮಾಗಳಿಗೆ ಸಂಗೀತ ನೀಡಿದ್ದರು.

ಪ್ರಶಸ್ತಿಗಳು: 

ರಾಜೀವ್‌ ತಾರಾನಾಥ್‌ ಅವರಿಗೆ 1993ರಲ್ಲಿ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯು ಕರ್ನಾಟಕ ಕಲಾಶ್ರೀ ಪ್ರಶಸ್ತಿ, 1996 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1998 ರಲ್ಲಿ ರಾಜ್ಯ ಸರ್ಕಾರದ ಟಿ.ಚೌಡಯ್ಯ ಪ್ರಶಸ್ತಿ, 2000 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2018 ರಲ್ಲಿ ಹಂಪಿ ಕನ್ನಡ ವಿವಿಯ ನಾಡೋಜ, 2018ರ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ, 2019ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ, 2019ರಲ್ಲಿ ಚಿತ್ರದುರ್ಗದ ಮುರುಘಾ ಮಠದಿಂದ ಬಸವಶ್ರೀ ಪ್ರಶಸ್ತಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿತ್ತು.

ಕೃತಿಗಳು

ಪಂ.ರಾಜೀವ್‌ ತಾರಾನಾಥರ ಕುರಿತು ಸುಮಂಗಲಾ ಅವರು ಸರೋದ್‌ ಮಾಂತ್ರಿಕ, ಪ್ರೊ.ಟಿ.ಎಸ್‌. ವೇಣುಗೋಪಾಲ್‌, ಶೈಲಜಾ ಅವರು ವಾದಿ-ಸಂವಾದಿ ಕೃತಿ ಪ್ರಕಟಿಸಿದ್ದರು. ಗಣೇಶ ಅಮೀನಗಡ ಹಾಗೂ ರಘುಪತಿ ತಾಮ್ಹನ್‌ಕರ್‌ ಅವರು ಸರೋದ್‌ ಸ್ವರಯಾನ ಕೃತಿ ಸಂಪಾದಿಸಿದ್ದರು.

ವಿಜ್ಞಾನಿ ಕಸ್ತೂರಿ ರಂಗನ್, ಪಂಡಿತ್ ರಾಜೀವ್ ತಾರನಾಥ್ ಅವರಿಗೆ ಪ್ರತಿಷ್ಠಿತ ಬಸವ ಶ್ರೀ ಪ್ರಶಸ್ತಿ

ಸರೋದ್‌ ಬೆಳೆದ ಬಗ್ಗೆ, ಔತಮ್ಯದ ದಾರಿ ಹುಡುಕುತ್ತಾ, ಗುರುಗಳ ಕಲಿಸುವಿಕೆ, ಮಾನವೀಯ ಹೆಣ್ಣುಗುಣ, ಅರ್ಥಪೂರ್ಣ ಕಲೆಗಾರಿಕೆಯ ದಾರ್ಶನಿಕ, ರಾಜೀವರ ಬೆಳಗಿಗೆ ಎಷ್ಟೊಂದು ರಾಗಗಳು, ರಾಗದ ಪರಿಮಳ, ಕಿರಣನಿಗೆ ಎರೆದ ಶ್ರಮಧಾರಿ, ಗುರು ಎಂದರೆ ಅನುಭವ, ಅನುಗ್ರಹ, ಬೊಗಸೆಯಲ್ಲಿ ರಾಗಲಾಸ್ಯ, ಮೊಸರು ಹೆಪ್ಪಿಟ್ಟಂತೆ ಸಂಗೀತ, ರಾಜೀವ ತಾರಾನಾಥರಿಗೆ ಸಿಟ್ಟು ಏಕೆ ಬರುವುದು?, ರಾಜೀವರ ರಿಯಾಜ್‌ ಧ್ಯಾನ, ಬೆರಳು ಮರೆಯದ ಯಮನ್‌ ರಾಗ, ಬಗೆದಷ್ಟು ಹೊಳಪು ಹೊಳಪಿನ ಗಣಿ, ಸಾವು ಬರಲೇ ಎಂದಾಗ ಹೋಗಲೇ ಎನ್ನುವೇ, ವಾಗರ್ಥ ಮೀರಿ, ಸಂಗೀತವೆಂದರೆ ಆಕಾಶ ಇದ್ದಹಾಗೆ, ಗೋತ್ರಾನೂ ಒಂದ ಧೋತ್ರಾನೂ ಒಂದ, ಸಂಗೀತದ ಬಳ್ಳಿಯಲ್ಲಿ ಸಾಹಿತ್ಯದ ಹೂ, ಪಂಚಾಕ್ಷರಿ ಗವಾಯಿಗಳಿಗೆ ಗುರುಕಾಣಿಕೆ, ತಂಜಾವೂರಲ್ಲಿ ಹಾಡಿ- ನುಡಿಸಿ ಶಹಭಾಷ್‌ ಅನಿಸಿಗೋಬೇಕು- ಹೀಗೆ ವಿವಿಧ ದೃಷ್ಟಿಕೋನದಲ್ಲಿ ರಾಜೀವ ತಾರಾನಾಥರ ಸಂಗೀತ ಪಯಣ ಕುರಿತು ಸರೋದ್‌ ಸ್ವರಯಾನ ಕೃತಿಯಲ್ಲಿ ದಾಖಲಿಸಲಾಗಿದೆ.

ದಸರಾ ಸಂದರ್ಭದಲ್ಲಿ ಕಮಿಷನ್‌ ವಿವಾದ

2023ರಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ಅರಮನೆ ಆಂಗಳದಲ್ಲಿ ಕಾರ್ಯಕ್ರಮ ನೀಡುವುದಕ್ಕೆ ಕೆಲವರು ತಮ್ಮನ್ನು ಭೇಟಿಯಾಗಿ ಕಮಿಷನ್‌ ಕೇಳಿದರು ಎಂದು ರಾಜೀವ್‌ ತಾರಾನಾಥರು ಹೇಳಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ನಂತರ ಜಿಪಂ ಸಿಇಒ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಅವರನ್ನು ಭೇಟಿ ಮಾಡಿದ್ದರು. ನನ್ನನ್ನು ಯಾರೂ ಭೇಟಿ ಮಾಡಿಲ್ಲ, ನಾನು ಆ ರೀತಿ ಹೇಳಿಲ್ಲ ಎಂದು ಬಳಿಕ ಅವರು ಸ್ಪಷ್ಟನೆ ನೀಡಿದ್ದರು. ಕೊನೆಗೆ ಅವರಿಗೆ ಅರಮನೆ ಎದುರು ಕಾರ್ಯಕ್ರಮ ನೀಡುವುದರೊಂದಿಗೆ ವಿವಾದ ಸುಖಾಂತ್ಯವಾಗಿತ್ತು.

Latest Videos
Follow Us:
Download App:
  • android
  • ios