ಬೆಂಗಳೂರು[ಫೆ.17]: ಜೈಷ್‌ ಎ ಮೊಹಮ್ಮದ್‌ ಸಂಘಟನೆ ಸಂಸ್ಥಾಪಕ ಮಸೂದ್‌ ಅಜರ್‌ ಜಾಗ​ತಿಕ ಭಯೋ​ತ್ಪಾ​ದಕ ಎಂದು ಘೋಷಿ​ಸು​ವು​ದನ್ನು ವಿರೋ​ಧಿ​ಸು​ತ್ತಿ​ರುವ ಚೀನಾ ದೇಶ​ವನ್ನು ಪುಲ್ವಾಮಾ ಭಯೋ​ತ್ಪಾ​ದಕ ಘಟ​ನೆಗೆ ಹೊಣೆಗಾರ ಮಾಡ​ಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಒತ್ತಾಯಿಸಿದ್ದಾರೆ.

ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲಿನ ಆತ್ಮಾಹುತಿ ದಾಳಿ ಖಂಡಿಸಿ ಮಾತನಾಡಿರುವ ಅವರು, ಮಸೂದ್‌ ಅಜರ್‌ ಪಾಕಿಸ್ತಾನದ ಹೊರಗಿದ್ದುಕೊಂಡು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಿದ್ದಾನೆ. ಮುಕ್ತವಾಗಿ ಓಡಾಡಿಕೊಂಡು ಪೈಶಾಚಿಕ ಕೃತ್ಯಗಳನ್ನು ಎಸಗುವ ದುಷ್ಕರ್ಮಿಯಾಗಿದ್ದಾನೆ. ಆದ್ದರಿಂದ ಅವನನ್ನು ಬಂಧಿಸಿ ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಲು ಅಮೆರಿಕ ಕೂಡ ಶ್ರಮಿಸುತ್ತಿದೆ. ಭಾರ​ತವೂ ಆಗ್ರ​ಹಿ​ಸಿದೆ. ಆದರೆ, ಇದಕ್ಕೆ ಚೀನಾ ಅಡ್ಡಿ​ಪ​ಡಿ​ಸು​ತ್ತಿದೆ. ಹೀಗಾಗಿ ಅಜ​ರ್‌ನ ಸಂಘ​ಟನೆ ಎಸಗುವ ಕೃತ್ಯ​ಗಳ ಹೊಣೆಯನ್ನು ಚೀನಾ ಮೇಲೆ ಹೇರಬೇಕು ಎಂದು ಹೇಳಿ​ದ​ರು.

ಘಟನೆಗೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಚೀನಾ ಪದೇ ಪದೇ ಅಡ್ಡಿಪಡಿಸಿ ನಿರ್ಬಂಧ ಹೇರುವ ಮತ್ತು ಕ್ರಮಗಳನ್ನು ವಿಫಲಗೊಳಿಸುವ ಚಟುವಟಿಕೆಗಳಲ್ಲಿ ತೊಡಗಿದೆ. ಆರ್ಥಿಕ ಮತ್ತು ನೈತಿಕವಾಗಿ ಈಗಾಗಲೇ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಆರ್ಥಿಕ ಬೆಂಬಲ ನೀಡುತ್ತಿರುವ ಪ್ರಮುಖ ದೇಶ ಚೀನಾ ಆಗಿದೆ ಎಂದಿದ್ದಾರೆ.

ಭಾರತದಲ್ಲಿ ಪದೇ ಪದೇ ಇಂತಹ ಭಯೋತ್ಪಾದಕ ಕೃತ್ಯಗಳನ್ನು ಎಸಗುವ ಮೂಲಕ ಭಾರತವು ಈ ಕಡೆಯೇ ಹೆಚ್ಚು ಗಮನ ಕೇಂದ್ರೀಕರಿಸುವಂತೆ ಮಾಡುವುದು ಪಾಕಿಸ್ತಾನದ ಉದ್ದೇಶವಾಗಿದೆ. ಇಡೀ ಜಗತ್ತಿನ ದೃಷ್ಟಿಕೋನವೇ ಒಂದಾದರೆ, ಪಾಕಿಸ್ತಾನದ ದೃಷ್ಟಿಕೋನವೇ ಬೇರೆಯದಾಗಿದೆ. ಇಂತಹ ದಾಳಿಗಳಿಂದ ಆಘ್ಘಾನಿಸ್ತಾನವನ್ನು ತನ್ನತ್ತ ಸೆಳೆಯುವುದು ಕೂಡ ಪಾಕಿಸ್ತಾನದ ನಿರೀಕ್ಷೆಯಾಗಿದೆ. ಆಷ್ಘಾನಿಸ್ತಾನದಲ್ಲಿರುವ ಅಮೆರಿಕದ ಸೈನಿಕರನ್ನು ಕಳುಹಿಸಿ ಆ ಸ್ಥಾನವನ್ನು ತುಂಬುವ ಕಡೆಗೂ ಪಾಕಿಸ್ತಾನ ದೃಷ್ಟಿನೆಟ್ಟಿದೆ. ಹೀಗಾಗಿ, ಪ್ರತಿಯೊಂದು ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಘಟನೆಗಳು ಪಾಕಿಸ್ತಾನ ಮತ್ತು ಚೀನಾ ವಿರುದ್ಧ ನಿಲ್ಲಬೇಕಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯುತ ಮತ್ತು ನೆಮ್ಮದಿಯ ಜೀವನ ಮಾಡುವ ಜನರ ಪರವಾಗಿ ಎಲ್ಲರೂ ನಿಲ್ಲಬೇಕಿದೆ ಎಂದು ರಾಜೀವ್‌ ಚಂದ್ರಶೇಖರ್‌ ಕರೆ ನೀಡಿದ್ದಾರೆ.

ಯೋಧರ ತ್ಯಾಗ, ಬಲಿದಾನ ಸ್ಮರಿಸೋಣ

ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರ ಯೋಧ ಗುರು ಮತ್ತು ಅವರ ಜತೆಗೆ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ದೇಶದ ವೀರಪುತ್ರ, ಧೈರ್ಯಶಾಲಿ ಯೋಧರನ್ನು ನಾವೆಲ್ಲ ಸ್ಮರಿಸಬೇಕಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಹುತಾತ್ಮ ಯೋಧ ಎಚ್‌. ಗುರು ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತದ ಎಲ್ಲಾ ಪ್ರಜೆಗಳು ಒಗ್ಗಟ್ಟಿನಿಂದ ಇರಬೇಕಿದೆ. ಸೇನೆ ಕೈಗೊಳ್ಳುವ ನಿರ್ಧಾರಗಳಿಗೆ ಬೆಂಬಲ ಸೂಚಿಸಬೇಕು ಮತ್ತು ಯೋಧರು ಚೆನ್ನಾಗಿರಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸೋಣ ಎಂದು ಮನವಿ ಮಾಡಿದರು.