ಹುಬ್ಬಳ್ಳಿ(ಜ.12): ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಜ.20ರಂದು ಕಾಂಗ್ರೆಸ್‌ ವತಿಯಿಂದ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ. ಲಕ್ಷಾಂತರ ಜನ ಅಂದು ಬೆಂಗಳೂರಲ್ಲಿ ಸೇರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಇಲ್ಲಿನ ಲೋಟಸ್‌ ಗಾರ್ಡನ್‌ನಲ್ಲಿ ಆಯೋಜಿಸಿರುವ ಬೆಳಗಾವಿ ವಿಭಾಗ ಮಟ್ಟದ ಕಾಂಗ್ರೆಸ್‌ನ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಎಐಸಿಸಿ ಈ ಪ್ರತಿಭಟನೆ ನಡೆಸುವ ಕುರಿತು ಸೂಚನೆ ನೀಡಿದೆ. ಜ.15ಕ್ಕೆ ನಡೆಯಬೇಕಿತ್ತು.

ಸಿದ್ದರಾಮಯ್ಯ ಡ್ರೈವರ್‌, ಡಿ.ಕೆ. ಶಿವಕುಮಾರ್ ಕಂಡಕ್ಟರ್ ಎಂದ ಸಚಿವ...!

ಆದರೆ, ಅಂದು ಸಂಕ್ರಮಣ ಇರುವ ಕಾರಣ ಕರ್ನಾಟಕದಲ್ಲಿ ಜ.20ರಂದು ರಾಜಭವನ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ಎಐಸಿಸಿಗೆ ತಿಳಿಸಿದ್ದೇವೆ. ಅದರಂತೆ ಜ.20ಕ್ಕೆ ರೈತರ ಪರವಾಗಿ ಬೃಹತ್‌ ಪ್ರತಿಭಟನೆ ನಡೆಯಲಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಿಂದ ರಾಜಭವನಕ್ಕೆ ತೆರಳಲಾಗುವುದು ಎಂದು ತಿಳಿಸಿದರು.

ಅಂದಿನ ಪ್ರತಿಭಟನೆಗೆ ನೀವಷ್ಟೇ ಬರುವುದಲ್ಲ. ನಿಮ್ಮ ಜಿಲ್ಲೆ, ಬ್ಲಾಕ್‌ಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ರೈತರನ್ನು ಕರೆದುಕೊಂಡು ಬರಬೇಕು. ಪ್ರತಿ ಕ್ಷೇತ್ರದಿಂದ ಕನಿಷ್ಠವೆಂದರೂ ಐದು ಬಸ್‌ಗಳಲ್ಲಿ ರೈತರು, ಕಾರ್ಯ​ಕ​ರ್ತ​ರನ್ನು ಬೆಂಗಳೂರಿಗೆ ಕರೆ​ದು​ಕೊಂಡು ಬರಬೇಕು. ಶಾಸಕರು, ಮಾಜಿ ಶಾಸಕರು, ಪಕ್ಷದ ಎಲ್ಲ ಬಗೆಯ ಪದಾಧಿಕಾರಿಗಳು ಅಂದಿನ ಪ್ರತಿಭಟನೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ರಾಜ್ಯಮಟ್ಟದ ಎಲ್ಲ ನಾಯಕರು ಅದರಲ್ಲಿ ಪಾಲ್ಗೊಳ್ಳುವರು ಎಂದು ತಿಳಿ​ಸಿ​ದ​ರು.