ಬೆಂಗಳೂರಿನಲ್ಲಿ ಮಳೆ ಸಾರ್ವಕಾಲಿಕ ದಾಖಲೆ ಜೂನ್‌ನಿಂದ ಸೆ.6ವರೆಗೆ 103 ಸೆಂ.ಮೀ. ವರ್ಷಧಾರೆ 1998ರ ಈ ಅವಧಿಯ ದಾಖಲೆ ‘ನೀರುಪಾಲು’  ಮಳೆಗಾಲ ಮುಗಿಯಲು ಇನ್ನೂ 2 ತಿಂಗಳು ಬಾಕಿ 144 ಸೆಂ.ಮೀ. ಮುಂಗಾರು ದಾಖಲೆಯೂ ಪುಡಿ?

ರಾಕೇಶ್‌.ಎನ್‌.ಎಸ್‌.

ಬೆಂಗಳೂರು (ಸೆ.9) : ದೇಶದ ಐಟಿ ಕಾರಿಡಾರ್‌ ಎಂದು ಖ್ಯಾತಿವೆತ್ತ ಪ್ರದೇಶಗಳನ್ನು ಮುಳುಗಿಸಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆಂಗಳೂರಿನ ಮುಂಗಾರು ಮಳೆ ದಾಖಲೆಗಳ ಮೇಲೆ ದಾಖಲೆ ಬರೆಯುತ್ತ ಸಾಗಿದೆ. ಜೂನ್‌ನಿಂದ ಸೆಪ್ಟೆಂಬರ್‌ 7ರವರೆಗೆ ಬೆಂಗಳೂರಿನಲ್ಲಿ 103 ಸೆಂ.ಮೀ. ಮಳೆಯಾಗಿದ್ದು, ಇದು ಈ ಅವಧಿಯಲ್ಲಿ ರಾಜ್ಯ ರಾಜಧಾನಿಯ ಇತಿಹಾಸದಲ್ಲೇ ಗರಿಷ್ಠ. ಅಲ್ಲದೆ, ಇಡೀ ಮುಂಗಾರು ಹಂಗಾಮಿನ ಸಾರ್ವಕಾಲಿಕ ದಾಖಲೆಯಾದ 144.98 ಸೆಂ.ಮೀ. ಕೂಡ ಈ ಬಾರಿ ಮುರಿದು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಬೆಂಗಳೂರಲ್ಲಿ ಮಳೆಯಾದ್ರೆ ಈ 209 ಪ್ರದೇಶಗಳು ಭಾರೀ ಡೇಂಜರ್ : ಎಚ್ಚರ

1998ರಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ 91 ಸೆಂ.ಮೀ. ಮಳೆ ಆಗಿದ್ದು ಈವರೆಗಿನ ದಾಖಲೆ. ಈ ವರ್ಷ ಇದೇ ಅವಧಿಯಲ್ಲಿ 88 ಸೆಂ.ಮೀ. ಮಳೆ ಆಗಿದೆ. ಆದರೆ, ಅದರ ನಂತರದ 1 ವಾರದಲ್ಲಿ (ಈ ವರ್ಷದ ಸೆ.1ರಿಂದ 6ರವರೆಗೆ) ಮತ್ತೆ 15 ಸೆಂ.ಮೀ. ಮಳೆಯಾಗಿದ್ದು, ಇದು ಹಿಂದೆಂದಿಗಿಂತ ಹೆಚ್ಚು. ಹಾಗಾಗಿ, ಜೂನ್‌ನಿಂದ ಸೆ.6ರ ಅವಧಿಯಲ್ಲಿ ಈ ವರ್ಷ ಸಾರ್ವಕಾಲಿಕ ಮಳೆ ದಾಖಲಾಗಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ಹಿಂದಿನ ದಾಖಲೆ 144 ಸೆಂ.ಮೀ.:

ಇದಲ್ಲದೆ, ಅದೇ 1998ರಲ್ಲಿ ಜೂನ್‌ನಿಂದ ಅಕ್ಟೋಬರ್‌ವರೆಗಿನ 4 ತಿಂಗಳ ಮುಂಗಾರು ಹಂಗಾಮಿನಲ್ಲಿ 144.98 ಸೆಂ.ಮೀ. ಮಳೆ ಆಗಿದ್ದು ಬೆಂಗಳೂರಿನ ಇತಿಹಾಸದಲ್ಲೇ ಗರಿಷ್ಠ. ಈ ವರ್ಷ ಮುಂಗಾರು ಹಂಗಾಮು ಮುಗಿಯಲು ಒಂದೂವರೆ ತಿಂಗಳಿಗೂ ಹೆಚ್ಚು ಸಮಯವಿದ್ದು, ಇನ್ನು ಕನಿಷ್ಠ 32 ಸೆಂ.ಮೀ. ಮಳೆ ಸುರಿದರೂ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಲಿದೆ. ಈಗ ಸುರಿಯುತ್ತಿರುವ ಮಳೆಯ ಪ್ರಮಾಣ ನೋಡಿದರೆ, ಇದು ನಿಶ್ಚಿತ ಎಂಬುದು ಹವಾಮಾನ ತಜ್ಞರ ಅಂದಾಜು.

155 ಸೆಂ.ಮೀ. ಮಳೆ ಸಾಧ್ಯತೆ?:

ಭಾರತೀಯ ಹವಾಮಾನ ಕೇಂದ್ರದಲ್ಲಿರುವ 1901ರಿಂದ ಮಳೆ ಮಾಪನ ಆರಂಭಿಸಿದ್ದು, ಆ ನಂತರದ ದಾಖಲೆಗಳ ಪ್ರಕಾರ, 1998ರಲ್ಲಿ 144.98 ಸೆಂ.ಮೀ ಮಳೆ ಸುರಿದಿರುವುದು ಸಾರ್ವಕಾಲಿಕ ದಾಖಲೆ. ಪ್ರಸಕ್ತ ವರ್ಷ ಸೆಪ್ಟೆಂಬರ್‌ 7ರ ವೇಳೆಗೆ 103.8 ಸೆಂ.ಮೀ. ಮಳೆಯಾಗಿದೆ. ಅಲ್ಲದೆ, ಸೆಪ್ಟೆಂಬರ್‌ ತಿಂಗಳ ವಾಡಿಕೆಯ ಮಳೆ ಪ್ರಮಾಣ 21.2 ಸೆಂ.ಮೀ ಮತ್ತು ಅಕ್ಟೋಬರ್‌ನ ವಾಡಿಕೆಯ 16.8 ಸೆಂ.ಮೀ. ಈ ವರ್ಷ ಈ ಎರಡು ಮಾಸಗಳಲ್ಲಿ ವಾಡಿಕೆಯಷ್ಟೇ ಮಳೆಯಾದರೂ 155.8 ಸೆಂ. ಮೀ ಆಗಲಿದ್ದು, ಆಗ ಅದು ಸಾರ್ವಕಾಲಿಕ ದಾಖಲೆಯಾಗಲಿದೆ.

ಇನ್ನು ಮುಂಗಾರು ಋುತುವಿನಲ್ಲಿ ಜೂ.1ರಿಂದ ಸೆ.6 ರವರೆಗಿನ ದಾಖಲೆಗಳನ್ನು ನೋಡಿದರೆ ಪ್ರಸಕ್ತ ಮುಂಗಾರು ನಗರದ ಇತಿಹಾಸದಲ್ಲೇ ಅತಿ ಹೆಚ್ಚು ಮಳೆ ನೀಡಿದೆ. ಈ ಲೆಕ್ಕದಲ್ಲಿ ಇದು ಸಾರ್ವಕಾಲಿಕ ದಾಖಲೆ. 1998ರಲ್ಲಿ ಆಗಸ್ಟ್‌ ಅಂತ್ಯಕ್ಕೆ 91 ಸೆಂ.ಮೀ ಮಳೆಯಾಗಿತ್ತು. ಅದು ಜೂ.1ರಿಂದ ಆಗಸ್ಟ್‌ ಅಂತ್ಯದವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಆದರೆ ಆ ವರ್ಷ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಕಡಿಮೆ ಮಳೆಯಾಗಿತ್ತು. ಆದರೆ, ಈ ವರ್ಷ ಆಗಸ್ಟ್‌ ಅಂತ್ಯಕ್ಕೆ 88 ಸೆಂ.ಮೀ ಇತ್ತು. ಸೆಪ್ಟೆಂಬರ್‌ ಮೊದಲ ವಾರದಲ್ಲಿ 15 ಸೆಂ.ಮೀ. ಮಳೆಯಾಗಿದೆ. ಅಂದರೆ, ಇದುವರೆಗೂ 103 ಸೆಂ.ಮೀ. ಮಳೆಯಾಗಿದೆ. ಇದು ಈ ಅವಧಿಯ ಸಾರ್ವಕಾಲಿಕ ದಾಖಲೆ.

ಎಲ್ಲಿ ಎಷ್ಟುಮಳೆ?:

ಈ ವರ್ಷ ಬೆಂಗಳೂರು ನಗರ ವ್ಯಾಪ್ತಿಯ ತಾಲೂಕುಗಳಾದ ಬೆಂಗಳೂರು ಉತ್ತರದಲ್ಲಿ 72.83 ಸೆಂ.ಮೀ (ವಾಡಿಕೆ 39.13 ಸೆಂ.ಮೀ), ಬೆಂಗಳೂರು ದಕ್ಷಿಣ 79.76 ಸೆಂ. ಮೀ (ವಾಡಿಕೆ 32.72),ಬೆಂಗಳೂರು ಪೂರ್ವ 75.47 (ವಾಡಿಕೆ 31 ಸೆಂ.ಮೀ), ಯಲಹಂಕ 77.96 (ವಾಡಿಕೆ 27.65 ಸೆಂ.ಮೀ) ಮಳೆಯಾಗಿದೆ. ನಗರದ ಬಹುತೇಕ ಕಡೆ ಮಳೆಯ ಪ್ರಮಾಣ ಈ ಮುಂಗಾರಿನಲ್ಲಿ ಹೆಚ್ಚು ಕಡಿಮೆ ಸಮಾನವಾಗಿ ಹಂಚಿಕೆ ಆಗಿದೆ.

ಬೆಂಗಳೂರಲ್ಲಿ ಮಳೆಗಾಲದ ಪ್ರವಾಹ ಪರಿಸ್ಥಿತಿಗೆ ಶಾಶ್ವತ ಪರಿಹಾರ ಅಗತ್ಯ, ಅಶ್ವತ್ಥ ನಾರಾಯಣ

ಮಳೆ ಹಾನಿ ಪರಿಶೀಲನೆ; ರಾಜ್ಯಕ್ಕೆ ಕೇಂದ್ರದ ತಂಡ

ಬೆಂಗಳೂರು: ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಂಭವಿಸಿರುವ ಅನಾಹುತಗಳ ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ 4 ತಂಡ ಬುಧವಾರ ಬೆಂಗಳೂರಿಗೆ ಆಗಮಿಸಿದೆ. ತಂಡದ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದರು. ಈ ವೇಳೆ ಗರಿಷ್ಠ ಪರಿಹಾರ ನೀಡುವಂತೆ ಬೊಮ್ಮಾಯಿ ಮನವಿ ಮಾಡಿದರು. ತಂಡಗಳು ಗುರುವಾರದಿಂದ 3 ದಿನಗಳ ಕಾಲ ವಿವಿಧ ಜಿಲ್ಲೆಗಳಿಗೆ ತೆರಳಿ ಮಳೆ ಹಾನಿ ಪರಿಶೀಲನೆ ನಡೆಸಲಿವೆ.

ಮಲೆನಾಡಿಗೆ ಮತ್ತೆ ಭಾರಿ ಮಳೆಯ ರೆಡ್‌ ಅಲರ್ಚ್‌:

ಬೆಂಗಳೂರು: ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿ ಗುರುವಾರ 20.44 ಸೆಂ.ಮೀಗಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಕೇಂದ್ರ ‘ರೆಡ್‌ ಅಲರ್ಚ್‌’ ನೀಡಿದೆ. ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 11.56 ಸೆಂ.ಮೀನಿಂದ 20.44 ಸೆಂ.ಮೀ ತನಕ ಮಳೆ ಆಗುವ ನಿರೀಕ್ಷೆಯಿದ್ದು, ‘ಆರೆಂಜ್‌ ಅಲರ್ಚ್‌’ ಎಚ್ಚರಿಕೆ ನೀಡಿದೆ. ಶನಿವಾರದ ತನಕವೂ ಮಳೆಯ ಅಬ್ಬರ ಇರಲಿದೆ.