20 ದಿನಗಳ ಬಳಿಕ ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕು
ಕರಾವಳಿಯ ಮೂರು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂದಿನ 24 ಗಂಟೆಯಲ್ಲಿ 6.5 ಸೆಂ.ಮೀ.ಗೂ ಅಧಿಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ

ಬೆಂಗಳೂರು(ಆ.20): ಕಳದೆ 20 ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಇದೀಗ ಮತ್ತೆ ಚುರುಕುಗೊಂಡಿದೆ. ಮೈಸೂರು, ದಕ್ಷಿಣ ಕನ್ನಡ ಸೇರಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಶನಿವಾರ ಮತ್ತೆ ಮಳೆಯಾಗಿದೆ. ಈ ಮಧ್ಯೆ, ಮುಂದಿನ 24 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಎರಡ್ಮೂರು ವಾರಗಳಿಂದ ರಾಜ್ಯಾದ್ಯಂತ ಮಳೆ ನಾಪತ್ತೆಯಾಗಿದ್ದು, ರೈತರಲ್ಲಿ ಆತಂಕ ಮನೆಮಾಡಿತ್ತು. ಇದರ ನಡುವೆಯೇ ಇದೀಗ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾದರೆ, ಕೊಪ್ಪಳ, ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಸಾಧಾರಣ ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಾದ್ಯಂತ ಶುಕ್ರವಾರ ಸಂಜೆಯಿಂದಲೇ ಮಳೆ ಆರಂಭವಾಗಿದ್ದು, ರಾತ್ರಿ ದಿನವಿಡೀ ವರುಣನ ಅಬ್ಬರವಾಗಿದೆ. ದಿಢೀರ್ ಮಳೆಯಿಂದಾಗಿ ತುಂಗಾ ನದಿಯಲ್ಲಿ ನೀರಿನಮಟ್ಟಕೊಂಚ ಏರಿಕೆಯಾಗಿದೆ.
ಮಳೆಗಾಗಿ ಬೈರೇದೇವರಿಗೆ ರೈತರ ವಿಶೇಷ ಪೂಜೆ
ಯೆಲ್ಲೋ ಅಲರ್ಟ್ ಎಚ್ಚರಿಕೆ:
ಈ ಮಧ್ಯೆ, ಕರಾವಳಿಯ ಮೂರು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂದಿನ 24 ಗಂಟೆಯಲ್ಲಿ 6.5 ಸೆಂ.ಮೀ.ಗೂ ಅಧಿಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಉಡುಪಿ ಜಿಲ್ಲೆಯ ಕೋಟದಲ್ಲಿ ಅತಿ ಹೆಚ್ಚು 7 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಉತ್ತರ ಕನ್ನಡದ ಹೊನ್ನಾವರದಲ್ಲಿ 6, ಕುಂದಾಪುರ, ಮಂಕಿ ಹಾಗೂ ಮಂಗಳೂರು ವಿಮಾನ ನಿಲ್ದಾದಲ್ಲಿ ತಲಾ 5, ಮಾಣಿ, ಪಣಂಬೂರು, ಕ್ಯಾಸಲ್ ರಾಕ್, ಗೇರುಸೊಪ್ಪ, ವಿರಾಜಪೇಟೆಯಲ್ಲಿ ತಲಾ 4, ಗೋಕರ್ಣ, ಕದ್ರಾ, ಶಿರಾಲಿ, ಕುಮಟಾ, ಕಾರ್ಕಳ, ಸಿದ್ದಾಪುರ, ಪುತ್ತೂರು, ಉಪ್ಪಿನಂಗಡಿ, ಸೋಮವಾರ ಪೇಟೆ, ಭಾಗಮಂಡಲ, ಕೊಟ್ಟಿಗೆಹಾರ, ಲಿಂಗನಮಕ್ಕಿ ಸೇರಿದಂತೆ ವಿವಿಧ ಕಡೆ ತಲಾ 3 ಸೆಂ.ಮೀ. ಮಳೆಯಾಗಿದೆ.