ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಶಾಲೆಯಲ್ಲಿ ಶಿಕ್ಷಕರ ಗೈರುಹಾಜರಿ ವೇಳೆ, ಪ್ರಾರ್ಥನಾ ಸಮಯದಲ್ಲಿ ನಡೆದ ತಳ್ಳಾಟದಲ್ಲಿ 4ನೇ ತರಗತಿ ವಿದ್ಯಾರ್ಥಿನಿಯ ಕಾಲು ಮುರಿದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಮತ್ತು ಗ್ರಾಮಸ್ಥರು ಶಿಕ್ಷಕರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು, (ನ.4): ಶಿಕ್ಷಕರ ಗೈರು ಹಾಜರಿ ವೇಳೆ ನಡೆದ ಪ್ರಾರ್ಥನೆಯಲ್ಲಿ ಮಕ್ಕಳ ನಡುವೆ ತಳ್ಳಾಟವಾಗಿ ವಿದ್ಯಾರ್ಥಿನಿ ಕೆಳಗೆ ಬಿದ್ದು ಕಾಲು ಮುರಿದ ಘಟನೆ ರಾಯಚೂರು ತಾಲೂಕು ಮರ್ಚೆಡ್ ಗ್ರಾಮದಲ್ಲಿ ನಡೆದಿದೆ.
ಬಾಲಕಿಗೆ ಕಾಲುಮುರಿದರೂ ಶಾಲೆಯಲ್ಲಿಲ್ಲ ಶಿಕ್ಷಕರು!
ಸೋನಿ (10) ಗಾಯಗೊಂಡಿರುವ ಬಾಲಕಿ. ಮರ್ಚೆಡ್ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ. ಕಾಲು ಮುರಿದ ಸುದ್ದಿ ಕೇಳಿ ಶಾಲೆಗೆ ಓಡೋಡಿ ಬಂದ ಪೋಷಕರು. ಮಗಳು ನೋವಿನಿಂದ ಅಳುತ್ತಿರುವುದು ನೋಡಿ ಪೋಷಕರು ಶಿಕ್ಷಕರ ವಿರುದ್ಧ ಗರಂ ಆಗಿದ್ದಾರೆ. ಆದರೆ ಪೋಷಕರು ಬಂದ ವೇಳೆ ಶಾಲೆಯಲ್ಲಿ ಶಿಕ್ಷಕರೊಬ್ಬರೂ ಒಬ್ಬರೂ ಇರಲಿಲ್ಲ. ಶಾಲೆಯಲ್ಲಿ ಶಿಕ್ಷಕರಿಲ್ಲದ್ದರಿಂದಲೇ ತಳ್ಳಾಟವಾಗಿ ಘಟನೆ ನಡೆದಿದೆ.
ಶಿಕ್ಷಕರಿಗೆ ಗ್ರಾಮಸ್ಥರು ತರಾಟೆ
ಘಟನೆಯ ಮಾಹಿತಿ ತಿಳಿದು ಗೈರಾಗಿದ್ದ ಶಿಕ್ಷಕರು ಶಾಲೆಗೆ ಓಡೋಡಿ ಬಂದಿದ್ದಾರೆ. ಆ ವೇಳೆ ಬಾಲಕಿಯ ಪೋಷಕರು, ಗ್ರಾಮಸ್ಥರು ಶಾಲೆಯಲ್ಲಿ ಜಮಾಯಿಸಿದ್ದಾರೆ. ಶಿಕ್ಷಕರು ಗೈರು ಹಾಜರಿ ಕಂಡು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಲೆಯ ಶಿಕ್ಷಕರಾಗಿ ನಿಮ್ಮ ಜವಾಬ್ದಾರಿ ಏನು? ಮಕ್ಕಳ ರಕ್ಷಣೆ ಯಾರದ್ದು? ಇನ್ನೊಮ್ಮೆ ಇಂಥ ಘಟನೆ ನಡೆದರೆ ಶಿಕ್ಷಕರಿಗೆ ಬಹಿಷ್ಕಾರ ಹಾಕುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಗಾಯಗೊಂಡ ಬಾಲಕಿ ರಿಮ್ಸ್ ಆಸ್ಪತ್ರೆಗೆ ದಾಖಲು:
ಗಾಯಗೊಂಡ ಬಾಲಕಿ ಸೋನಿಯನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಸ್ (ರಿಮ್ಸ್) ಆಸ್ಪತ್ರೆಗೆ ದಾಖಲು ಮಾಡಲಾಯಿತು. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಈ ಘಟನೆ ನಡೆದಿದೆ.
