ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿದ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಟು ಶಬ್ದಗಳಲ್ಲಿ ಟೀಕೆ ಮಾಡಿದ್ದಾರೆ. ಈ ನಡುವೆ ಕಾಂಗ್ರೆಸ್ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಸಜ್ಜಾಗಿದೆ.
ಬೆಂಗಳೂರು (ಮಾ.24): ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ದೋಷಿ ಎಂದು ಕೋರ್ಟ್ ಘೋಷಿಸಿರುವ ಕಾರಣ ಲೋಕಸಭೆ ಕಾರ್ಯಾಲಯ ಅವರನ್ನು ವಯನಾಡು ಸಂಸದ ಸ್ಥಾನದಿಂದ ಅನರ್ಹ ಮಾಡಿದೆ. ಇದರ ಬೆನ್ನಲ್ಲಿಯೇ ಕಾಂಗ್ರೆಸ್ ಪಕ್ಷದಲ್ಲಿ ಕೋಲಾಹಲವೆದ್ದಿದ್ದು, ಬಹುತೇಕ ಎಲ್ಲಾ ನಾಯಕರು ಬಿಜೆಪಿಯ ವಿರುದ್ಧ ಕಿಡಿಕಾರಿದೆ. ಅನರ್ಹತೆಯ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಅವರನ್ನು ಸಂಸತ್ ಸ್ಥಾನದಿಂದ ತೆಗೆದುಹಾಕಬಹುದು ಆದರೆ ಕೋಟ್ಯಂತರ ಭಾರತೀಯರು ಹೃದಯದಲ್ಲಿ ನೀಡಿರುವ ಸ್ಥಾನದಿಂದ ತೆಗೆದುಹಾಕುವುದು ಅಸಾಧ್ಯ. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ನನ್ನ ಧಿಕ್ಕಾರ' ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಸಿದ್ಧರಾಮಯ್ಯ ಈ ಕುರಿತಾಗಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ ಮಾಡುವಂತೆ ಕರೆ ನೀಡಿದ್ದಾರೆ.' ರಾಹುಲ್ ಗಾಂಧಿಯವರು ಹೇಳುವ ಸತ್ಯವನ್ನು ಎದುರಿಸಲಾಗದ ನರೇಂದ್ರ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನವನ್ನು ಜಾಹೀರುಗೊಳಿಸಿದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ. ಭಾರತೀಯ ಜನತಾ ಪಕ್ಷದ ಪಾಪದ ಕೊಡ ತುಂಬಿದೆ. ತನ್ನ ನಾಶದ ಶವದಪೆಟ್ಟಿಗೆಗೆ ತಾನೇ ಕೊನೆಯ ಮೊಳೆ ಬಡಿದಿದೆ. ಈ ಫ್ಯಾಸಿಸ್ಟ್ ನಡವಳಿಕೆಗೆ ಹೆದರುವ, ಹಿಂಜರಿಯುವ ಪ್ರಶ್ನೆಯೇ ಇಲ್ಲ' ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಈ ಅನ್ಯಾಯದ ವಿರುದ್ದ ನ್ಯಾಯಾಲಯ ಮತ್ತು ಬೀದಿಗಳಲ್ಲಿ ಹೋರಾಟ ಮಾಡುತ್ತೇವೆ. ಭಾರತದಲ್ಲಿ ಇಂದು ಅನಧಿಕೃತವಾಗಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ನರೇಂದ್ರಮೋದಿ, ಬಿಜೆಪಿ ಮತ್ತು ಎನ್ ಡಿ ಎ ಸರ್ಕಾರದ ವಿರುದ್ದ ಮಾತನಾಡುವವರಿಗೆಲ್ಲರಿಗೂ ಎಚ್ಚರಿಕೆಯ ರೂಪದಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದು ಕೇವಲ ಕಾಂಗ್ರೆಸ್ ಪಕ್ಷ ಇಲ್ಲವೇ ರಾಹುಲ್ ಗಾಂಧಿಯವರಿಗೆ ನೀಡಿರುವ ಬೆದರಿಕೆ ಅಲ್ಲ, ಅನ್ಯಾಯ-ಅಕ್ರಮದ ವಿರುದ್ದ ದನಿ ಎತ್ತುವ ಎಲ್ಲ ಪ್ರಜಾಪ್ರಭುತ್ವ ಪ್ರೇಮಿಗಳಿಗೆ ಒಡ್ಡಿರುವ ಬೆದರಿಕೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಬಾಯಿಗೆ ಬಂದಂತೆ ಮಾತನಾಡುವ ಪ್ರವೃತ್ತಿಗೆ ಎಚ್ಚರಿಕೆಯ ಗಂಟೆ: ಪ್ರತಾಪ್ ಸಿಂಹ
ಪಕ್ಷ,ಪಂಥ ಮರೆತು ಎಲ್ಲರೂ ಒಟ್ಟಾಗಿ ಇದರ ವಿರುದ್ದ ಪ್ರತಿಭಟನೆ ನಡೆಸಬೇಕಾಗಿದೆ. ರಾಹುಲ್ ಗಾಂಧಿಯವರ ವಿರುದ್ದ ಕೈಗೊಳ್ಳಲಾದ ಕ್ರಮದಿಂದ ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವಾಗಿರುವುದು ನಿಜವಾದರೂ ಈ ಸಂದರ್ಭದಲ್ಲಿ ಸಂಯಮದಿಂದ ವರ್ತಿಸುವುದು ಅಗತ್ಯ. ಯಾರೂ ಕೂಡಾ ಸಿಟ್ಟು-ಆಕ್ರೋಶದ ಕೈಗೆ ಬುದ್ದಿ ಕೊಡದೆ ಶಾಂತಿಯುತ ಪ್ರತಿಭಟನೆ ನಡೆಸಬೇಕು ಎಂದು ಹೇಳಿದ್ದಾರೆ.
Rahul Gandhi ಪಾಲಿಗೆ ಆರಂಭ ಮಾತ್ರ, ಮಾಜಿ ಸಂಸದನ ಮೇಲಿದೆ ಇನ್ನೂ ನಾಲ್ಕು ಮಾನಹಾನಿ ಕೇಸ್!
4.45ಕ್ಕೆ ಕಾಂಗ್ರೆಸ್ ಪ್ರತಿಭಟನೆ: ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ ಮಾಡಿರುವ ಕುರಿತಾಗಿ ರಾಜ್ಯ ಕಾಂಗ್ರೆಸ್ ಕಾರ್ಯಕರ್ತರಿಂದ ಇಂದು ಪ್ರತಿಭಟನೆ ನಡೆಯಲಿದೆ. ಸಂಜೆ 4:45 ಕ್ಕೆ ಪ್ರತಿಭಟನೆ ನಡೆಸಲಿರುವ ಕಾರ್ಯಕರ್ತರು ಪ್ರತಿಭಟನೆ ಮಾಡಲಿದ್ದಾರೆ. ಕಾಂಗ್ರೆಸ್ ಭವನದ ಬಳಿ ಪ್ರತಿಭಟನೆ ಆಯೋಜನೆಯಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ.
