Asianet Suvarna News Asianet Suvarna News

ಬಿಜೆಪಿ ಕಾಲದ ಹಗರಣ: ಭೋವಿ ನಿಗಮದ ಮಾಜಿ ಎಂಡಿ ತಂಗಿ ಅರೆಸ್ಟ್‌..!

ಜಾಲಹಳ್ಳಿ ನಿವಾಸಿ ಆರ್. ಮಂಗಳಾ ಅವರನ್ನು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಬಂಧಿಸಿದ್ದು, ಬಿಜೆಪಿ ಕಾಲದ ಭೋವಿ ನಿಗಮದ ಹಗರಣದಲ್ಲಿ ಸಿಐಡಿ ನಡೆಸಿದ ಮತ್ತೊಂದು ಮಹತ್ವದ ಬೇಟೆ ಇದಾಗಿದೆ. ಕೆಲ ದಿನಗಳ ಹಿಂದಷ್ಟೇ ನಿಗಮದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳ ಮೇಲೆ ದಿಢೀರ್‌ ದಾಳಿ ನಡೆಸಿ 100ಕ್ಕೂ ಹೆಚ್ಚಿನ ಕಡತಗಳನ್ನು ಸಿಐಡಿ ವಶಪಡಿಸಿಕೊಂಡಿತ್ತು. 

R Mangala arrested on Bhovi Development Corporation scam in karnataka grg
Author
First Published Aug 22, 2024, 8:00 AM IST | Last Updated Aug 22, 2024, 8:00 AM IST

ಗಿರೀಶ್ ಮಾದೇನಹಳ್ಳಿ 

ಬೆಂಗಳೂರು(ಆ.22):  ತನ್ನ ಸೋದರಿಯ ಬಹುಕೋಟಿ ಅವ್ಯವಹಾರದಲ್ಲಿ 2 ಕೋಟಿ ರು. ಹಣ ಸ್ವೀಕರಿಸಿದ ಆರೋಪ ಹೊತ್ತು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಆರ್.ಲೀಲಾವತಿ ಅವರ ಸೋದರಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಉದ್ಯೋಗಿ ಪರಪ್ಪನ ಅಗ್ರಹಾರ ಕೇಂದ್ರ ಸೇರುವಂತಾಗಿದೆ.

ಜಾಲಹಳ್ಳಿ ನಿವಾಸಿ ಆರ್. ಮಂಗಳಾ ಅವರನ್ನು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಬಂಧಿಸಿದ್ದು, ಬಿಜೆಪಿ ಕಾಲದ ಭೋವಿ ನಿಗಮದ ಹಗರಣದಲ್ಲಿ ಸಿಐಡಿ ನಡೆಸಿದ ಮತ್ತೊಂದು ಮಹತ್ವದ ಬೇಟೆ ಇದಾಗಿದೆ. ಕೆಲ ದಿನಗಳ ಹಿಂದಷ್ಟೇ ನಿಗಮದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳ ಮೇಲೆ ದಿಢೀರ್‌ ದಾಳಿ ನಡೆಸಿ 100ಕ್ಕೂ ಹೆಚ್ಚಿನ ಕಡತಗಳನ್ನು ಸಿಐಡಿ ವಶಪಡಿಸಿಕೊಂಡಿತ್ತು. 

ಮುಡಾ ದಾಖಲೆ ಕಾಪ್ಟರ್‌ನಲ್ಲಿ ತಂದು ತಿದ್ದಿದ್ದಾರೆ: ಕೇಂದ್ರ ಕೈಗಾರಿಕಾ ಸಚಿವ ಕುಮಾರಸ್ವಾಮಿ

ರಾಜ್ಯ ಭೋವಿ ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ತಮ್ಮ ಹಿರಿಯ ಸೋದರಿ ಲೀಲಾವತಿ ಪರವಾಗಿ 2 ಕೋಟಿ ರು. ಹಣವನ್ನು ಮಂಗಳಾ ಸ್ವೀಕರಿಸಿದ್ದ ಸಂಗತಿ ತನಿಖೆಯಲ್ಲಿ ಪತ್ತೆಯಾಗಿದೆ. ಈ ಮಾಹಿತಿ ಮೇರೆಗೆ ಅವರನ್ನು ಬಂಧಿಸಿ ವಿಚಾರಣೆ ಬಳಿಕ ಜೈಲಿಗೆ ಕಳುಹಿಸಲಾಯಿತು ಎಂದು ಸಿಐಡಿ ಉನ್ನತಮೂಲಗಳು 'ಕನ್ನಡಪ್ರಭ'ಕ್ಕೆ ತಿಳಿಸಿವೆ.

ಮಂಗಳಾ ಬ್ಯಾಂಕ್ ಖಾತೆಗೆ ಹಣ ವರ್ಗ: 

ಮಲ್ಲೇಶ್ವರದ ಐಐಎಸ್ ಸಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಮಂಗಳಾ ಅವರು, ತಮ್ಮ ಕುಟುಂಬದ ಜತೆ ಜಾಲಹಳ್ಳಿಯಲ್ಲಿ ವಾಸವಾಗಿದ್ದಾರೆ. ಮಂಗಳಾ ಸೋದರಿಯರ ಪೈಕಿ ಹಿರಿಯ ಅಕ್ಕ ಆರ್. ಲೀಲಾವತಿ ಭೋವಿನಿಗಮದ ಎಂಡಿಯಾಗಿದ್ದರು. ಆ ವೇಳೆ ಸೋದರಿ ಹಣಕಾಸು ಅವ್ಯವಹಾರಗಳಿಗೆ ಮಂಗಳಾ ನೆರವಾಗಿದ್ದಾರೆ ಎನ್ನಲಾಗಿದೆ.

ಭೋವಿ ನಿಗಮದ ಹಗರಣದ ಸಂಬಂಧ ಹಣ ವರ್ಗಾವಣೆ ಮಾಹಿತಿ ಕಲೆ ಹಾಕಿದಾಗ ಮಂಗಳಾ ಖಾತೆಗೆ ಸುಮಾರು 2 ಕೋಟಿ ರು. ಹಣ ವರ್ಗಾವಣೆಯಾಗಿರುವುದು ಗೊತ್ತಾ ಯಿತು. ಸಾಲ ಮಂಜೂರಾತಿ ನೆಪದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹನ್ಸಿಕಾ ಎಂಟರ್‌ಪ್ರೈಸಸ್, ನ್ಯೂ ಡೀಮ್ಸ್ ಎಂಟರ್ ಪ್ರೈಸಸ್, ಹರ್ನಿತಾ ಕ್ರಿಯೇಷನ್ಸ್ ಹಾಗೂ ಸೋಮನಾಥೇಶ್ವರ ಎಂಟರ್‌ಪ್ರೆ ಸಸ್ಗಳಿಗೆ ನಿಗಮದ ಹಣ ವರ್ಗಾವಣೆಯಾಗಿತ್ತು. ಈ ಕಂಪನಿಗಳ ಖಾತೆ ಯಿಂದ ಮಂಗಳಾ ಖಾತೆಗೆ ಹಂತ ಹಂತವಾಗಿ ಹಣ ವರ್ಗಾವಣೆಯಾಗಿರುವುದಕ್ಕೆ ದಾಖಲೆ ಗಳು ಸಿಕ್ಕಿವೆ ಎಂದು ಸಿಐಡಿ ಮೂಲಗಳು ಈ ಕಂಪನಿಗಳ ಜತೆ ಮಂಗಳಾ ಆರ್ಥಿಕ ವ್ಯವಹಾರಕ್ಕೆ ಸೂಕ್ತ ಕಾರಣಗಳೆಲ್ಲ, ಹೀಗಾಗಿ ನಿಗಮದ ಎಂಡಿಯಾಗಿದ್ದ ಲೀಲಾವತಿ ಸೂಚನೆ ಮೇರೆಗೆ ಅವರ ಸೋದರಿ ಖಾತೆಗೆ ಹಣ ವರ್ಗಾವಣೆಯಾಗಿದೆ. ಇನ್ನು ಸಿಐಡಿವಿಚಾರಣೆ ವೇಳೆ ಕೂಡ ಹಣದ ಬಗ್ಗೆ ಮಂಗಳಾ ಸ್ಪಷ್ಟಪಡಿಸಿಲ್ಲ. ತಾನು ತಪ್ಪು ಮಾಡಿಲ್ಲವೆಂದೇ ಹೇಳಿದರು ಎಂದು ತಿಳಿದು ಬಂದಿದೆ. 

ಬಂಧನ ಭೀತಿಗೊಳಗಾಗಿದ್ದ ಮಂಗಳಾ: 

ಭೋವಿ ನಿಗಮದ ಹಗರಣ ಬೆಳಕಿಗೆ ಬಂದ ಬಳಿಕ ಬಂಧನ ಭೀತಿಗೊಳಗಾಗಿ ನಿರೀಕ್ಷಣಾ ಜಾಮೀನು ಕೋರಿ ಮಂಗಳಾ ನ್ಯಾಯಾಲ ಯದಮೊರೆಹೋಗಿದ್ದರು. ಆದರೆ ನ್ಯಾಯಾಲ ಯದಲ್ಲಿ ಅವರ ಅರ್ಜಿ ವಜಾಗೊಂಡ ಬೆನ್ನಲ್ಲೇ ಸಿಐಡಿ ಕಾರ್ಯಾಚರಣೆ ನಡೆಸಿದೆ ಎಂದು ಮೂಲಗಳು ಹೇಳಿವೆ. ಆರ್ಥಿಕವಾಗಿ ಹಿಂದುಳಿದ ಭೋವಿ ಸಮುದಾಯದ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯಡಿ ಸಾಲ ಮಂಜೂರಾತಿ ನೆಪದಲ್ಲಿ ಭೋವಿ ನಿಗಮದಲ್ಲಿ ಬಹುಕೋಟಿ ಆಕ್ರಮ ನಡೆದಿದೆ ಎಂಬ ಆರೋಪ ಬಂದಿತ್ತು. 

ನೂರು ಸಿದ್ದು ಬಂದರೂ ಸಾಧ್ಯವಿಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ

ಈ ಸಂಬಂಧ ಬೆಂಗಳೂರು, ಕಲಬುರಗಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಐದು ಎಫ್‌ಐಆರ್‌ಗಳು ದಾಖಲಾಗಿದವು. ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿದ್ದ ಭೋವಿ ನಿಗಮದ ಹಗರಣವನ್ನು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ವಹಿಸಿತ್ತು. ಈ ತನಿಖೆಗಿಳಿದ ಸಿಐಡಿ, ಮೊದಲು ಕಚೇರಿ ಅಧೀಕ್ಷಕ ಸುಬ್ಬಪ್ಪ ಅವರನ್ನು ಬಂಧಿಸಿತ್ತು. ಈಗ ಮತ್ತೊಬ್ಬರು ಸೆರೆಯಾಗಿದ್ದಾರೆ.

ಏನಿದು ಭೋವಿ ಹಗರಣ? 

* ಬಡ ಭೋವಿ ಉದ್ಯಮಿಗಳಿಗೆ ಭೋವಿ ನಿಗಮದಿಂದ ಸಾಲ ನೀಡುವ ಯೋಜನೆಯಲ್ಲಿ 2021, 2022ರಲ್ಲಿ ಅವ್ಯವಹಾರ
*  ಸಾಲ ನೀಡುವ ನೆಪದಲ್ಲಿ ನಕಲಿ ಕಂಪನಿಗಳಿಗೆ ಹಣ ಕಳುಹಿಸಿ, ಅಲ್ಲಿಂದ ಕಿಕ್‌ಬ್ಯಾಕ್ ತರಿಸಿಕೊಳ್ಳುತ್ತಿದ್ದ ಆರೋಪಿಗಳು 
* 2023ರಲ್ಲಿ ಬೆಂಗಳೂರು, ಬೆಂ.ಗ್ರಾಮಾಂತರ, ಕಲಬುರಗಿ ಯಲ್ಲಿ ಎಫ್‌ಐಆ‌ರ್; ಸಿಐಡಿ ತನಿಖೆಗೆ ಆದೇಶಿಸಿದ್ದ ಸರ್ಕಾರ
* ಇತ್ತೀಚೆಗೆ ಭೋವಿ ನಿಗಮದ ಕಚೇರಿ ಅಧೀಕ್ಷಕ ಸುಬ್ಬಪ್ಪ ಬಂಧನ, ತಲೆಮರೆಸಿಕೊಂಡಿದ್ದ ಮಾಜಿ ಎಂ.ಡಿ. ಲೀಲಾವತಿ

ಮಂಗಳಾ ಮಾಡಿದ ತಪ್ಪೇನು?

ನಿಗಮದ ಮಾಜಿ ಎಂಡಿ ಲೀಲಾವತಿ ಪರವಾಗಿ 2 ಕೋಟಿ ರುಪಾಯಿಗಳಷ್ಟು ಅಕ್ರಮ ಹಣವನ್ನು ಐಐಎಸ್‌ಸಿ ಉದ್ಯೋಗಿ ಮಂಗಳಾ ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ಪತ್ತೆ. 

Latest Videos
Follow Us:
Download App:
  • android
  • ios