ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 72 ವರ್ಷದ ಆಡುವ ಹುಡುಗ. ಬಹಳ ಯಂಗ್‌ಸ್ಟರ್‌. 16 ವರ್ಷದ ಹುಡುಗ ನೋಡಿ!

ಹೀಗೆಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡವರು ಮಾಜಿ ಸಚಿವ ಆರ್‌.ಅಶೋಕ್‌. 75 ವರ್ಷ ವಯಸ್ಸಾದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಇನ್ನೂ ತಮ್ಮ ಬುದ್ಧಿಬಿಟ್ಟಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಆರ್‌.ಅಶೋಕ್‌ ತೀವ್ರ ಕಿಡಿಕಾರಿದರು.

ತಮ್ಮ ರೆಸಾರ್ಟ್‌ ವಾಸ್ತವ್ಯ ಮುಗಿಸಿಕೊಂಡು ಶನಿವಾರ ಕರ್ನಾಟಕ ಭವನಕ್ಕೆ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, 72 ವರ್ಷದ ಸಿದ್ದರಾಮಯ್ಯ 75 ವರ್ಷದ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಅಂದರೆ ಸಿದ್ದರಾಮಯ್ಯ ಅವರೇನು ಚಿರ ಯುವಕರೇ? ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಅವರಿಗಿಂತ ಮೂರು ವರ್ಷ ಹೆಚ್ಚು ವಯಸ್ಸಾಗಿದೆ ಅಷ್ಟೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರು ರೈತ ಹೋರಾಟದ ಹಿನ್ನೆಲೆಯಿಂದ ಮುಖ್ಯಮಂತ್ರಿ ಆದವರು. ಆದರೆ ಸಿದ್ದರಾಮಯ್ಯ ಪಕ್ಷಾಂತರ ಮಾಡಿ ಮುಖ್ಯಮಂತ್ರಿ ಆದವರು. ಸಿದ್ದರಾಮಯ್ಯ ಈಗಾಗಲೇ ಐದಾರು ಬಾರಿ ಪಕ್ಷಾಂತರ ಮಾಡಿದ್ದು ಪಕ್ಷಾಂತರದಲ್ಲಿ ಅವರು ನಿಸ್ಸೀಮರಾಗಿದ್ದಾರೆ ಎಂದು ಅಶೋಕ್‌ ವ್ಯಂಗ್ಯವಾಡಿದರು.

ಇದೇ ವೇಳೆ, ಕಾಂಗ್ರೆಸ್‌ನಿಂದ ಆ ಪಕ್ಷದ ಶಾಸಕರೇ ದೂರ ಸರಿದಿದ್ದಾರೆ. ಅವರು ಮೊದಲು ತಮ್ಮ ಮನೆಯನ್ನು ಸರಿಯಾಗಿಟ್ಟುಕೊಳ್ಳಲಿ. ಕಾಂಗ್ರೆಸ್‌ನವರಿಗೆ ಅವರ ಶಾಸಕರು ಎಲ್ಲೆಲ್ಲಿದ್ದಾರೆ ಎಂಬುದೇ ಗೊತ್ತಿಲ್ಲ. ನಾವು ದೆಹಲಿಗೆ ಬಂದ ಸಂದರ್ಭದಲ್ಲಿ ಅವರ ಶಾಸಕರು ಹೈದಾರಾಬಾದ್‌, ಮುಂಬೈ ಹೀಗೆ ಎಲ್ಲೆಲ್ಲೋ ಇದ್ದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಳಿ ಹಣ, ಅಧಿಕಾರದ ದರ್ಪವಿದೆ. ಹಾಗೆಯೇ ಪಕ್ಷಾಂತರದಲ್ಲಿ ನಿಸ್ಸೀಮರಾಗಿರುವ ಸಿದ್ದರಾಮಯ್ಯ ಅವರಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಶಾಸಕರನ್ನು ಸೆಳೆಯುವ ಅವರ ಪ್ರಯತ್ನಕ್ಕೆ ತಡೆಯೊಡ್ಡಲು ರೆಸಾರ್ಟ್‌ನಲ್ಲಿ ಉಳಕೊಂಡಿದ್ದೆವು ಎಂದು ಅಶೋಕ್‌ ಸ್ಪಷ್ಟನೆ ನೀಡಿದರು.