ಪ್ರಯಾಣಿಕನೊಬ್ಬನನ್ನು ಥಳಿಸಿ, ಕಾಲಿನಿಂದ ಒದ್ದು ದುರ್ವರ್ತನೆ ತೋರಿದ್ದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ನನ್ನು ಸಸ್ಪೆಂಡ್ ಮಾಡಲಾಗಿದೆ.

ಮಂಗಳೂರು, (ಸೆಪ್ಟೆಂಬರ್. 08):ಬಸ್ ಏರುತ್ತಿದ್ದ ಪ್ರಯಾಣಿಕನೊಬ್ಬನನ್ನು ಥಳಿಸಿ, ಕಾಲಿನಿಂದ ಒದ್ದು ಕೆಳಗಿಳಿಸಿದ್ದ ಕಂಡಕ್ಟರ್‌ನನ್ನು ಅಮಾನತು ಮಾಡಲಾಗಿದೆ. ಕುಡಿದು ಬಸ್ ಹತ್ತಿದ್ದ ಪ್ರಯಾಣಿಕನೊಬ್ಬನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಭಾಗದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಥಳಿಸಿ ಕಾಲಿನಿಂದ ಒದ್ದು ಬಸ್ ನಿಂದ ಕೆಳಗಿಳಿಸಿದ್ರು. ಈ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ಫುಲ್ ವೈರಲ್ ಆಗಿದ್ದು, ಕಂಡಕ್ಟರ್‌ನ ಅಮಾನವೀಯ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಘಟನೆ ನಡೆದ ಕಲವೇ ಗಂಟೆಗಳಲ್ಲಿ ಕಂಡಕ್ಟರ್‌ನನ್ನು ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪುತ್ತೂರು ಘಟಕದ ಕೆಎಸ್‌ಆರ್‌ಟಿಸಿ ನಿರ್ವಾಹಕ ಸುಖರಾಜ್ ರೈ ಅಮಾನತುಗೊಂಡವರು. 

ಲಾಡ್ಜ್‌​ನಲ್ಲಿ ಯುವತಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

ಇನ್ನು ಈ ವಿಡಿಯೋ ಬಗ್ಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬಕುಮಾರ್ ಪ್ರತಿಕ್ರಿಯಿಸಿ, ಅಧಿಕಾರಿಯ ಇಂತಹ ವರ್ತನೆ ಸಹಿಸುವುದಿಲ್ಲ. ಸಾರ್ವಜನಿಕರ ಜೊತೆ ಈ ರೀತಿ ನಡೆದುಕೊಂಡರೆ ಶಿಸ್ತು ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಘಟನೆ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ‌ಪುತ್ತೂರು ತಾಲೂಕಿ‌ನ ಈಶ್ವರಮಂಗಲದಲ್ಲಿ ಪ್ರಯಾಣಿಕ ಬಸ್ ಹತ್ತುತ್ತಿರುವಾಗಲೇ ಆತನನ್ನು ತಡೆದಿದ್ದ ಕಂಡಕ್ಟರ್, ಪ್ರಯಾಣಿಕನ ಕೊಡೆ ಕಿತ್ತೆಸೆದು ಬಸ್ ಒಳಗಡೆಯೇ ಕೈಯಿಂದ ಹಲ್ಲೆ ಮಾಡಿದ್ದಾನೆ. ಪ್ರಯಾಣಿಕ ಬಸ್ ಇಳಿಯಲು ಒಪ್ಪದೇ ಇದ್ದಾಗ ಕಾಲಿನಿಂದ ಒದ್ದಿದ್ದಾನೆ.

ಬಸ್ಸಿನ ಒಳಗಿನಿಂದ ಒದ್ದ ಪರಿಣಾಮ ಪ್ರಯಾಣಿಕ ರಸ್ತೆಗೆ ಬಿದ್ದಿದ್ದಾನೆ. ಬಳಿಕ ಆತನನ್ನ ಅಲ್ಲೇ ಬಿಟ್ಟು ಮುಂದಕ್ಕೆ ಬಸ್ ಹೋಗಿದೆ. ಸಾಮಾಜಿಕ ತಾಣಗಳಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿತ್ತು. ನಿರ್ವಾಹಕನ ದುರ್ವರ್ತನೆ ವಿರುದ್ದ ಸಾಮಾಜಿಕ ತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.