PSI Recruitment Scam ಪೇದೆ ಮನೆಯಲ್ಲಿ ಚೀಲದಲ್ಲಿ ತುಂಬಿಟ್ಟಿದ್ದ 1.5 ಕೋಟಿ ಜಪ್ತಿ!
- - ಪೇದೆ ಮನೆಯಲ್ಲಿ ರಾಶಿರಾಶಿ ಹಣ ಕಂಡು ಸಿಐಡಿ ದಂಗು
- - ನೇಮಕಾತಿ ವಿಭಾಗದಲ್ಲಿ ಡಿವೈಎಸ್ಪಿ ಶಾಂತಕುಮಾರ್‌ಗೆ ಆಪ್ತ
- - ಒಎಂಆರ್ ಶೀಟ್ ತಿದ್ದಿದ ಆರೋಪದಡಿ ಈಗಾಗಲೇ ಅರೆಸ್ಟ್
ಬೆಂಗಳೂರು(ಮೇ.18): ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣದಲ್ಲಿ ಬಂಧಿತನಾಗಿರುವ ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್‌ಸ್ಟೇಬಲ್ ಶ್ರೀಧರ್ ಮನೆಯಲ್ಲಿ ಒಂದೂವರೆ ಕೋಟಿ ರು.ಗಳನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಜಪ್ತಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ತನ್ಮೂಲಕ ಇದುವರೆಗೆ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಜಪ್ತಿಯಾದ ಬಹುದೊಡ್ಡ ಮೊತ್ತದ ಹಣ ಇದಾಗಿದೆ. ಈ ಪ್ರಕರಣ ಸಂಬಂಧ ಚಾಮರಾಜಪೇಟೆಯಲ್ಲಿರುವ ಶ್ರೀಧರ್ ಹಾಗೂ ಅವರ ಸಂಬಂಧಿ ಮನೆಗಳ ಮೇಲೆ ಸಿಐಡಿ ದಾಳಿ ನಡೆಸಿದ್ದರು. ಆ ವೇಳೆ ಶ್ರೀಧರ್ ಮನೆಯ ಕೋಣೆಯಲ್ಲಿ ಚೀಲದಲ್ಲಿ ತುಂಬಿಟ್ಟಿದ್ದ ಒಂದೂವರೆ ಕೋಟಿ ರು.ಗಳಿಗೆ ನಗದು ಪತ್ತೆಯಾಗಿದ್ದು, ಇಷ್ಟುಬೃಹತ್ ಮೊತ್ತದ ಹಣವು ಹೆಡ್ ಕಾನ್‌ಸ್ಟೇಬಲ್ ಮನೆಯಲ್ಲಿ ಕಂಡು ಸಿಐಡಿ ಅಧಿಕಾರಿಗಳು ದಂಗಾಗಿದ್ದಾರೆ ಎಂದು ತಿಳಿದು ಬಂದಿದೆ.
ನೇಮಕಾತಿ ವಿಭಾಗಕ್ಕೆ ಎರವಲು ಸೇವೆ ಮೇಲೆ ನಗರ ಸಶಸ್ತ್ರ ಮೀಸಲು ಪಡೆ ಎಎಚ್‌ಸಿ ಶ್ರೀಧರ್ ನಿಯೋಜನೆಗೊಂಡಿದ್ದ. ನಾಲ್ಕೈದು ವರ್ಷಗಳಿಂದ ನೇಮಕಾತಿ ವಿಭಾಗದಲ್ಲೇ ಕಾರ್ಯನಿರ್ವಹಿಸುತ್ತಿದ್ದ ಆತ, ಆ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಆಪ್ತ ಸಿಬ್ಬಂದಿಯಾಗಿ ಗುರುತಿಸಿಕೊಂಡಿದ್ದ. ಅಲ್ಲದೆ, ಶಾಂತಕುಮಾರ್ ಕೃಪೆಯಿಂದಲೇ ನೇಮಕಾತಿ ವಿಭಾಗಕ್ಕೆ ಶ್ರೀಧರ್ ನಿಯೋಜನೆಗೊಂಡಿದ್ದ ಎನ್ನಲಾಗಿದೆ. ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದಿದ ಆರೋಪದಡಿ ಶ್ರೀಧರ್ ಬಂಧನವಾಗಿದೆ.
ಡಿವೈಎಸ್ಪಿ ಪರ ಡೀಲ್:
ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಶುರುವಾದ ಬಳಿಕ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ 30ಕ್ಕೂ ಹೆಚ್ಚಿನ ಅಭ್ಯರ್ಥಿಗಳ ಜತೆ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಮಾತುಕತೆ ನಡೆಸಿದ್ದು, ತಮ್ಮ ಮಾತಿಗೆ ಒಪ್ಪಿದ ಅಭ್ಯರ್ಥಿಗಳಿಂದ 60ರಿಂದ 80 ಲಕ್ಷ ರು.ಗಳನ್ನು ಅವರು ವಸೂಲಿ ಮಾಡಿದ್ದರು. ಈ ಡೀಲ್‌ನಲ್ಲಿ ಶಾಂತಕುಮಾರ್ ಪರವಾಗಿ ಶ್ರೀಧರ್ ಹಣ ಪಡೆದಿದ್ದ ಎನ್ನಲಾಗಿದೆ. ತಮಗೆ ಹಣ ನೀಡಿದ ಅಭ್ಯರ್ಥಿಗಳ ಒಎಂಆರ್‌ಶೀಟ್‌ಗಳನ್ನು ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್‌ನಲ್ಲೇ ಡಿವೈಎಸ್ಪಿ ಶಾಂತಕುಮಾರ್, ಆರ್‌ಎಸ್‌ಐ ಶ್ರೀನಿವಾಸ್, ಎಎಚ್‌ಸಿ ಶ್ರೀಧರ್, ಎಫ್‌ಡಿಸಿ ಹರ್ಷ ಹಾಗೂ ಎಸ್‌ಡಿಸಿ ಲೋಕೇಶ್ ತಿದ್ದಿದ್ದರು ಎಂಬ ಆರೋಪ ಬಂದಿದೆ. ಈ ಪ್ರಕರಣದಲ್ಲಿ ಬಂಧಿತರಾದ ನೇಮಕಾತಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಮನೆಗಳ ಮೇಲೆ ಸಿಐಡಿ ದಾಳಿ ನಡೆಸಿತ್ತು. ಆಗ ಮೊದಲು ಶ್ರೀಧರ್ ಮನೆಯಲ್ಲಿ 16 ಲಕ್ಷ ರು. ನಗದು ಪತ್ತೆಯಾಗಿತ್ತು. ಮತ್ತೆ ಆತನ ಮನೆಯನ್ನು ಕೂಲಂಕುಷವಾಗಿ ಸಿಐಡಿ ತಪಾಸಣೆಗೊಳಪಡಿಸಿದಾಗ ಕೋಣೆಯ ಮೂಲೆಯಲ್ಲಿ ಅಡಿಸಿಟ್ಟಿದ್ದ ಚೀಲದಲ್ಲಿ ಒಂದೂವರೆ ಕೋಟಿ ರು. ಸಿಕ್ಕಿದೆ ಎಂದು ಮೂಲಗಳು ಹೇಳಿವೆ.
ಆರ್.ಡಿ.ಪಾಟೀಲ್ ಬ್ಯಾಂಕ್ ಖಾತೆಗಳು ಮುಟ್ಟುಗೋಲು
ಪಿಎಸ್‌ಐ ಹಗರಣದ ಮುಖ್ಯ ಆರೋಪಿ ಅಫಜಲ್ಪುರದ ಆರ್.ಡಿ. ಪಾಟೀಲ್‌ಗೆ ಸೇರಿದ್ದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸಿಐಡಿ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.
ಆರ್.ಡಿ. ಪಾಟೀಲ್ ಜೊತೆಗೆ ಸಿಐಡಿ ಅಧಿಕಾರಿಗಳು ಎಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಇನ್ನಿತರ ಬ್ಯಾಂಕ್ ಶಾಖೆಗಳಿಗೆ ತೆರಳಿ ಆತನಿಗೆ ಸೇರಿದ್ದ ಎಲ್ಲಾ ಖಾತೆಗಳ ವಿವರ ಪಡೆದರು. ನಂತರ ಎಲ್ಲಾ ಖಾತೆಗಳನ್ನು ಮುಂದಿನ ಆದೇಶದವರೆಗೆ ಅಮಾನತಿನಲ್ಲಿಡುವಂತೆ ಸೂಚಿಸಿದರು. ಅಕ್ರಮದಲ್ಲಿ ಬಹುಕೋಟಿ ಸಂಪಾದನೆ ಮಾಡಿದ್ದ ಆರ್.ಡಿ.ಪಾಟೀಲನ ಹಣಕಾಸು ವ್ಯವಹಾರಗಳ ಮೇಲೆ ಸಿಐಡಿ ಇದೀಗ ಕಣ್ಣಿಟ್ಟಿದೆ. ಆರ್.ಡಿ.ಪಾಟೀಲ ಅಕ್ರಮದ ಹಣದಲ್ಲಿ ಭಾರೀ ಆಸ್ತಿ ಖರೀದಿಸಿರುವ ಮಾಹಿತಿಯೂ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿದ್ದು, ಈ ಕುರಿತು ಮಾಹಿತಿ ಕಲೆಹಾಕುವ ಕೆಲಸ ಮುಂದುವರಿದಿದೆ.