ಪಿಎಸ್‌ಐ ಅಕ್ರಮ ಚರ್ಚೆಗೆ ಸದನ ಅಸ್ತು ನಿಯಮ 60ರಡಿ ಚರ್ಚೆಗೆ ಕಾಂಗ್ರೆಸ್ ಪಟ್ಟು, ಗದ್ದಲ ನಿಯಮ 69ರಡಿ ವಿಷಯ ಪ್ರಸ್ತಾಪಕ್ಕೆ ಒಪ್ಪಿಗೆ
ವಿಧಾನಸಭೆ (ಸೆ.16) : ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಅಕ್ರಮ ನೇಮಕಾತಿ ಪ್ರಕರಣದ ಬಗ್ಗೆ ನಿಲುವಳಿ ಸೂಚನೆಯಡಿ (ನಿಯಮ 60) ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸದನದಲ್ಲಿ ಗದ್ದಲ, ವಾಕ್ಸಮರ ಜರುಗಿತು. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ಮಾತಿನ ಚಕಮಕಿಯ ಬಳಿಕ ನಿಲುವಳಿ ಸೂಚನೆಯಡಿ ಚರ್ಚಿಸುವ ಬದಲು ನಿಯಮ 69ರಡಿ ಚರ್ಚೆ ನಡೆಸಲು ಸದನ ಒಪ್ಪಿಗೆ ನೀಡಿದ ಬಳಿಕ ಜಟಾಪಟಿ ತಣ್ಣಗಾಯಿತು. ರಾಜ್ಯದಲ್ಲಿ ಮಳೆಯಿಂದಾಗಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಕುರಿತು ಚರ್ಚೆ ಮತ್ತು ಸರ್ಕಾರದ ಉತ್ತರ ಬಳಿಕ ಪಿಎಸ್‌ಐ ಅಕ್ರಮ ನೇಮಕಾತಿ ಕುರಿತು ಚರ್ಚಿಸಲು ಒಪ್ಪಿಗೆ ನೀಡಲಾಯಿತು.
ಗುರುವಾರ ಶೂನ್ಯವೇಳೆ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ನಿಲುವಳಿ ಸೂಚನೆಯ ಕುರಿತು ವಿಷಯ ಪ್ರಸ್ತಾಪಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಕರಣವು ನ್ಯಾಯಾಲಯದಲ್ಲಿ ಇರುವ ಕಾರಣ ನಿಯಮಗಳ ಪ್ರಕಾರ ನಿಲುವಳಿ ಸೂಚನೆಯಡಿ ಚರ್ಚೆಗೆ ತೆಗೆದುಕೊಳ್ಳುವುದು ಕಷ್ಟಎಂದು ಹೇಳಿದರು. ಆದರೆ, ತಮ್ಮ ನಿಲುವಳಿ ಸೂಚನೆಯನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಈ ಹಿಂದೆಯೂ ಹಲವು ಪ್ರಕರಣಗಳ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆ ನಡೆಸಲಾಗಿದೆ. ಹೀಗಾಗಿ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಚರ್ಚೆಗೆ ಅವಕಾಶ ನೀಡುವಂತೆ ಪದೇ ಪದೇ ಕಾಂಗ್ರೆಸ್ ಸದಸ್ಯರು ಮಧ್ಯಪ್ರವೇಶಿಸುತ್ತಿದ್ದ ಕಾರಣ ಒಂದು ಹಂತದಲ್ಲಿ ಸಭಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಪರವಾಗಿ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರಕರಣವು ಇತ್ತೀಚೆಗೆ ನಡೆದಿರುವುದಲ್ಲ. ಹೀಗಾಗಿ ತುರ್ತಾಗಿ ಚರ್ಚೆ ನಡೆಸಬೇಕಾದ ಅಗತ್ಯ ಇಲ್ಲ ಎಂದು ಹೇಳಿದರು. ತಕ್ಷಣ ಕಾಂಗ್ರೆಸ್‌ನ ಮುಖ್ಯ ಸಚೇತಕ ಅಜಯ್‌ಸಿಂಗ್, ಸದನ ಕರೆದಿರುವುದು ಈಗ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸಬೇಕು ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್‌ನ ಸದಸ್ಯರು ಧ್ವನಿಗೂಡಿಸಿದಾಗ ಕೋಪಗೊಂಡ ಮಾಧುಸ್ವಾಮಿ, ಈ ರೀತಿ ಕೂಗಾಡಿದರೆ ಹೇಗೆ, ಸರ್ಕಾರ ಕತ್ತೆ ಕಾಯೋಕೆ ಇರೋದಾ? ನಿಯಮಗಳ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ ಎಂದು ಕಿಡಿಕಾರಿದರು. ಈ ವೇಳೆ ಎರಡೂ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು.
ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಕಾಂಗ್ರೆಸ್ ಸದಸ್ಯರನ್ನು ಸಮಾಧಾನಪಡಿಸಿದರು. ಮಾತು ಮುಂದುವರಿಸಿದ ಮಾಧುಸ್ವಾಮಿ, ಪ್ರತಿಪಕ್ಷ ನಾಯಕರು ನೀಡಿರುವ ನೊಟೀಸ್‌ನಲ್ಲಿ ಸಚಿವರು, ಶಾಸಕರು ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಇದು ಶಾಸಕರ ಹಕ್ಕು ಚ್ಯುತಿಯಾಗಲಿದೆ. ನಿಖರವಾದ ಹೆಸರು ಸಹ ಪ್ರಸ್ತಾಪಿಸಿಲ್ಲ. ನಿಲುವಳಿ ಸೂಚನೆಯಡಿ ಚರ್ಚೆ ನಡೆಸುವುದಕ್ಕಿಂತ ಬೇರೆ ರೀತಿಯಲ್ಲಿ ಚರ್ಚೆಗೆ ತನ್ನಿ, ಸರ್ಕಾರ ಚರ್ಚೆ ನಡೆಸಲು ಸಿದ್ಧವಿದೆ. ಬೇರೆ ಸ್ವರೂಪದಲ್ಲಿ ಚರ್ಚೆಗೆ ಸರ್ಕಾರದ ಯಾವುದೇ ಅಭ್ಯಂತರ ಇಲ್ಲ. ಪ್ರಕರಣದಲ್ಲಿ ಸರ್ಕಾರವು ಸೂಕ್ತ ಕ್ರಮ ಜರುಗಿಸಿದೆ. ಹಿರಿಯ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿರುವುದು ನಾವು, ಅವರಲ್ಲ. ಈ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಬೇಕಿದ್ದು, 2006ರಿಂದ ಏನೇನು ಆಗಿದೆಯೋ ಎಲ್ಲವೂ ಬಯಲಾಗಲಿ ಎಂದು ಹೇಳಿದರು.
ಸಿದ್ದರಾಮಯ್ಯ ತಿರುಗೇಟು:
ಮಾಧುಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಇದಕ್ಕೆಲ್ಲಾ ನಾವು ಹೆದರುವುದಿಲ್ಲ. 40 ವರ್ಷದಿಂದ ಈ ಸದನದಲ್ಲಿ ನಾನೂ ಇದ್ದೇನೆ. ರಾಜಕೀಯ ಭಾಷಣ ಬೇಕಾಗಿಲ್ಲ. ನಮಗೂ ರಾಜಕೀಯ ಭಾಷಣ ಬರುತ್ತದೆ. ಈ ವೇದಿಕೆಯು ರಾಜಕೀಯ ವೇದಿಕೆಯಲ್ಲ. ಜನರ ಸಮಸ್ಯೆ ಚರ್ಚಿಸಲು ಇರುವ ವೇದಿಕೆಯಾಗಿದೆ. ಎಲ್ಲವೂ ತನಿಖೆ ನಡೆಸಿ ಎಂದು ಗುಡುಗಿದರು. ಆಡಳಿತ ಮತ್ತು ಪ್ರತಿಪಕ್ಷದ ಅಭಿಪ್ರಾಯಗಳನ್ನು ಆಲಿಸಿದ ಸಭಾಧ್ಯಕ್ಷರು ಅಂತಿಮವಾಗಿ ನಿಯಮ 69ರಡಿ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಎಂದು ಹೇಳಿದಾಗ ಕಾವೇರಿದ ಚರ್ಚೆಗೆ ತೆರೆಬಿತ್ತು.
ಕನ್ನಡಪ್ರಭ ವರದಿ ಪ್ರಸ್ತಾಪ
ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ ಸಂಬಂಧ ಮೊದಲ ಬಾರಿಗೆ ವರದಿ ಪ್ರಕಟಿಸಿದ ‘ಕನ್ನಡಪ್ರಭ’ ಪತ್ರಿಕೆ ವರದಿ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲಿ ಪ್ರಸ್ತಾಪಿಸಿದರು. ಪಿಎಸ್‌ಐ ಹಗರಣದ ಕುರಿತು ಕನ್ನಡಪ್ರಭ ಪತ್ರಿಕೆಯು ಸರಣಿ ವರದಿ ಮಾಡಿದೆ. ಅಲ್ಲದೇ, ಸಂಪಾದಕೀಯ ಸಹ ಬರೆದಿದೆ. ಇತರೆ ಮಾಧ್ಯಮಗಳು ಸಹ ಬರೆದಿವೆ. ಗಂಭೀರವಾದ ಇಂತಹ ವಿಷಯಗಳ ಕುರಿತು ಚರ್ಚೆಯಾಗದಿದ್ದರೆ ಹೇಗೆ? ಜನರಿಗೆ ನಾವು ಯಾವ ಸಂದೇಶ ನೀಡಿದಂತಾಗುತ್ತದೆ ಎಂದು ತೀಕ್ಷ$್ಣವಾಗಿ ಹೇಳಿದರು.
