* ಬ್ಲೂಟೂತ್ ಎಕ್ಸ್‌ಪರ್ಚ್ ಸಿಐಡಿ ಎದುರು ಶರಣು* ನಾಪತ್ತೆಯಾಗಿದ್ದ ಸರ್ಕಾರಿ ಎಂಜಿನಿಯರ್ ಮಂಜುನಾಥ* ನಿವೃತ್ತ ಎಎಸ್‌ಐ ಪುತ್ರ, ಮತ್ತೊಬ್ಬ ಅಭ್ಯರ್ಥಿ ಬಂಧನ
ಕಲಬುರಗಿ(ಮೇ.02): ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಅಕ್ರಮವಾಗಿ ಉತ್ತರ ಪೂರೈಸಿದ್ದ ಆರೋಪ ಹೊತ್ತಿರುವ ‘ಬ್ಲೂಟೂತ್ ಎಕ್ಸ್‌ಪರ್ಚ್’ ಖ್ಯಾತಿಯ ಮಂಜುನಾಥ ಮೇಳಕುಂದಿ ಭಾನುವಾರ ಸಿಐಡಿ ಎದುರು ಶರಣಾಗಿದ್ದಾನೆ. ಕಲಬುರಗಿ ನೀರಾವರಿ ಇಲಾಖೆ ಕಿರಿಯ ಎಂಜಿನಿಯರ್ ಆಗಿರುವ ಈತ ಪಿಎಸ್‌ಐ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ. ಮಂಜುನಾಥ ನಿವೃತ್ತ ಎಎಸ್‌ಐವೊಬ್ಬರ ಪುತ್ರ.
ಮಂಜುನಾಥ ಶರಣಾಗತಿ ಬೆನ್ನಲ್ಲೇ ಶ್ರೀಧರ ರಾಥೋಡ ಎಂಬ ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಸಿಐಡಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಶ್ರೀಧರ ವಿರುದ್ಧ ಪರೀಕ್ಷಾ ಅಕ್ರಮದ ಆರೋಪ ಇಲ್ಲವಾದರೂ, ಒಎಂಆರ್ ಶೀಟ್‌ನಲ್ಲಿ ಅಕ್ರಮವೆಸಗಿ ಸಿಕ್ಕಿಬಿದ್ದಿರುವ ತನ್ನ ಗೆಳೆಯ ವೀರೇಶ್‌ಗೆ ಮಂಜುನಾಥ ಮೇಳಕುಂದಿಯನ್ನು ಪರಿಚಯಿಸಿದ್ದ ಎಂದು ಹೇಳಲಾಗಿದೆ. ಇದರೊಂದಿಗೆ ಪರೀಕ್ಷಾ ಅಕ್ರಮದಲ್ಲಿ ಬಂಧಿತರ ಸಂಖ್ಯೆ 25ಕ್ಕೇರಿದೆ.
21 ದಿನದಿಂದ ತಲೆಮರೆಸಿಕೊಂಡಿದ್ದ ಮಂಜುನಾಥ ಆಟೋದಲ್ಲಿ ತನ್ನ ವಕೀಲರೊಂದಿಗೆ ಸಿಐಡಿ ಕಚೇರಿಗೆ ಬಂದು ಶರಣಾಗಿದ್ದಾನೆ. ಯಾರಿಗೂ ಸುಳಿವು ನೀಡದಂತೆ ಸಿಐಡಿ ಕಚೇರಿಗೆ ಆತ ತಾನಾಗಿಯೇ ಬಂದು ಶರಣಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಮೂರು ವಾರಗಳಿಂದ ಮಂಜುನಾಥನ ಬೆನ್ನುಬಿದ್ದಿದ್ದ ಸಿಐಡಿ ಪೊಲೀಸರು, ಆತನ ಅಡಗುದಾಣಗಳ ಬಗ್ಗೆ ನಿರಂತರ ಪರಿಶೀಲನೆ ನಡೆಸಿದ್ದರು. ಆದರೆ ಇದೀಗ ದಿಢೀರ್ ಆಗಿ ಮಂಜುನಾಥ್ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾನೆ.
ಸಿಐಡಿ ಕಚೇರಿಗೆ ಆಟೋದಲ್ಲಿ ಬಂದ ಮಂಜುನಾಥನ ಜೊತೆಗೆ ಒಂದು ಬ್ಯಾಗ್ ಕೂಡ ಇತ್ತು. ಮಂಜುನಾಥ್‌ನನ್ನು ನೋಡುತ್ತಿದ್ದಂತೆ ಅಲ್ಲೇ ಇದ್ದ ಪತ್ರಕರ್ತರು ಮಾತಿಗೆ ಮುಂದಾದಾಗ, ‘ಅನಾರೋಗ್ಯ ಕಾಡಿದ್ದರಿಂದ ಮಂಗಳೂರಿನಲ್ಲಿದ್ದೆ. ಹಗರಣದಲ್ಲಿ ನನ್ನ ಪಾತ್ರವಿಲ್ಲ, ನನ್ನ ಹೆಸರನ್ನು ಸುಮ್ಮನೆ ತಳಕು ಹಾಕಲಾಗುತ್ತಿದೆ’ ಎಂದಷ್ಟೇ ಹೇಳಿ ಕಚೇರಿಯೊಳಗೆ ತೆರಳಿದ.
ಪಿಎಸ್‌ಐ ಅಕ್ರಮದ ಜೊತೆಗೆÜ ಡಿಸೆಂಬರ್‌ನಲ್ಲಿ ನಡೆದ ಪಿಡಬ್ಲ್ಯುಡಿ ಜೆಇ(ಕಿರಿಯ ಎಂಜಿನಿಯರ್) ಪರೀಕ್ಷೆಯಲ್ಲೂ ಬ್ಲೂಟೂತ್ ಬಳಸಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಪರೀಕ್ಷೆ ಅಕ್ರಮದಲ್ಲೂ ಮಂಜುನಾಥ ಹೆಸರು ಕೇಳಿಬಂದಿದೆ. ಈಗಾಗಲೇ ಬಂಧಿತರಾಗಿರುವ ಅಫಜಲ್ಪುರ ಮೂಲದ ಪಾಟೀಲ ಸೋದರರು ಹಾಗೂ ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ಜತೆಗೆ ಈತ ನಿಕಟ ಸಂಪರ್ಕ ಹೊಂದಿದ್ದ. ಬ್ಲೂಟೂತ್ ಅಕ್ರಮಕ್ಕೆ ಬೇಕಿರುವ ಎಲ್ಲ ತಾಂತ್ರಿಕ ನೆರವನ್ನು ಈತ ನೀಡುತ್ತಿದ್ದ ಎಂದು ಹೇಳಲಾಗಿದೆ. ಮಂಜುನಾಥ ನಿವೃತ್ತ ಎಎಸ್‌ಐ ವಿಶ್ವನಾಥ ಮೇಳಕುಂದಿ ಪುತ್ರನಾಗಿದ್ದಾನೆ.
