ಕೇಂದ್ರ ಸರ್ಕಾರವು ಈಗಾಗಲೆ ಪ್ರತಿ ಬಿಪಿಎಲ್‌ ಸದಸ್ಯನಿಗೆ 5 ಕೆಜಿ ವಿತರಿಸುತ್ತಿದೆ. ಅಕ್ಕಿ ಸಿಗದಿದ್ದರೆ ರಾಜ್ಯ ಸರ್ಕಾರವು ರೈತರಿಂದ ನೇರವಾಗಿ ರಾಗಿ, ಜೋಳ, ಗೋಧಿ ವಿತರಿಸಬೇಕು. ಇದರಿಂದಾಗಿ ಬೆಳೆ ಬೆಳೆದ ರೈತರಿಗೂ ಅನುಕೂಲವಾಗುತ್ತದೆ. ಪಡಿತರ ಫಲಾನುಭವಿಗಳಿಗೆ ಹಣ ಕೊಟ್ಟರೆ ನ್ಯಾಯಬೆಲೆ ಅಂಗಡಿ ವಿತರಕರಿಗೆ ಸಿಗಬೇಕಿದ್ದ ಕಮಿಷನ್‌ ಹಣವೂ ಖೋತಾ ಆಗಲಿದೆ: ಟಿ.ಕೃಷ್ಣಪ್ಪ 

ಬೆಂಗಳೂರು(ಜೂ.29): ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ನೀಡಲು ರಾಜ್ಯ ಸರ್ಕಾರ ತೆಗದುಕೊಂಡಿರುವ ತೀರ್ಮಾನವನ್ನು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ತೀವ್ರವಾಗಿ ವಿರೋಧಿಸಿದೆ. ಅಕ್ಕಿ ಬದಲು ಹಣ ಕೊಟ್ಟರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದೆ.

ಬುಧವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಕೇಂದ್ರ ಸರ್ಕಾರವು ಈಗಾಗಲೆ ಪ್ರತಿ ಬಿಪಿಎಲ್‌ ಸದಸ್ಯನಿಗೆ 5 ಕೆಜಿ ವಿತರಿಸುತ್ತಿದೆ. ಅಕ್ಕಿ ಸಿಗದಿದ್ದರೆ ರಾಜ್ಯ ಸರ್ಕಾರವು ರೈತರಿಂದ ನೇರವಾಗಿ ರಾಗಿ, ಜೋಳ, ಗೋಧಿ ವಿತರಿಸಬೇಕು. ಇದರಿಂದಾಗಿ ಬೆಳೆ ಬೆಳೆದ ರೈತರಿಗೂ ಅನುಕೂಲವಾಗುತ್ತದೆ. ಪಡಿತರ ಫಲಾನುಭವಿಗಳಿಗೆ ಹಣ ಕೊಟ್ಟರೆ ನ್ಯಾಯಬೆಲೆ ಅಂಗಡಿ ವಿತರಕರಿಗೆ ಸಿಗಬೇಕಿದ್ದ ಕಮಿಷನ್‌ ಹಣವೂ ಖೋತಾ ಆಗಲಿದೆ. ಈಗಾಗಲೇ ಜೀವನ ನಿರ್ವಹಣೆಗೆ ಕಷ್ಟುಪಡುತ್ತಿರುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸಾಕಷ್ಟುನಷ್ಟವಾಗಲಿದೆ. ಆದ್ದರಿಂದ ಕಾರ್ಡುದಾರರಿಗೆ ಹಣದ ಬದಲು ಧಾನ್ಯ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಬಿಪಿಎಲ್‌ ಕಾರ್ಡುದಾರರಿಗೆ ಬಂಪರ್: 5 ಕೆಜಿ ಅಕ್ಕಿ ಜತೆಗೆ ಹಣ ನೀಡಲು ಸರ್ಕಾರ ತೀರ್ಮಾನ

ರಾಜ್ಯದಲ್ಲಿ ಲಕ್ಷಾಂತರ ಟನ್‌ ರಾಗಿ ದಾಸ್ತಾನು ಇದೆ. ಅಕ್ಕಿ ಬದಲು ಪರ್ಯಾಯವಾಗಿ 3 ಕೆಜಿ ರಾಗಿ, 2 ಕೆಜಿ ಗೋಧಿ ವಿತರಿಸಿದರೆ ಪಡಿತರದಾರರಿಗೆ ಅನುಕೂಲವಾಗುತ್ತದೆ. 26 ರು.ಗೆ ಸಕ್ಕರೆ ಸಿಗುತ್ತಿದೆ. ಅದನ್ನು ಕೊಡಬಹುದು. ಇದರಿಂದ ನ್ಯಾಯಬೆಲೆ ಅಂಗಡಿ ವಿತರಕರಿಗೆ ಕಮಿಷನ್‌ ಹಣ ಸಿಗುತ್ತದೆ. ಹಮಾಲಿಗಳಿಗೆ ಕೆಲಸ ಸಿಗುವುದರ ಜೊತೆಗೆ ಲಾರಿ ಮಾಲೀಕರಿಗೆ ಸಾಗಣೆ ವೆಚ್ಚವೂ ದೊರೆಯುತ್ತದೆ. ಪ್ರತಿ ಕ್ವಿಂಟಾಲ್‌ ಪಡಿತರ ವಿತರಣೆಗೆ ಸದ್ಯ 124 ರೂ.ಸಿಗುತ್ತಿದೆ. 10 ಕೆಜಿ ಪಡಿತರ ವಿತರಿಸಿದರೆ ಹೆಚ್ಚು ಕಮಿಷನ್‌ ಹಣ ಸಿಗುತ್ತಿತ್ತು. ಇದಕ್ಕೆ ಸಂಚಕಾರ ಬರಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂದೊಮ್ಮೆ ಕೇಂದ್ರ ಸರ್ಕಾರವು ಪುದುಚೇರಿ ಮತ್ತು ಛತ್ತೀಸ್‌ಗಢದಲ್ಲಿ ಅಕ್ಕಿ ಬದಲು ಹಣ ನೀಡುವ ಯೋಜನೆ ಆರಂಭಿಸಿತ್ತು. ಯೋಜನೆ ಆರಂಭವಾಗಿ ಕೆಲ ತಿಂಗಳಲ್ಲೇ ಸ್ಥಗಿತಗೊಂಡಿತ್ತು. ಈಗ ರಾಜ್ಯ ಸರ್ಕಾರ ಅದೇ ಮಾದರಿ ಅನುಸರಿಸುತ್ತಿರುವುದು ಸರಿಯಲ್ಲ, 10 ಕೆಜಿ ಅಕ್ಕಿ ವಿತರಣೆಗೆ ನಾವೆಲ್ಲರೂ ಸಿದ್ಧವಾಗಿದ್ದೇವೆ. ಅಕ್ಕಿ ಬದಲು ಹಣ ಕೊಟ್ಟರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.