ಬೆಂಗಳೂರು, (ಫೆ.25): 2A ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಪ್ರತಿಭಟನಾ ಧರಣಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.

ಹೌದು...ಮೀಸಲಾತಿ ಕೊಡವ ಬಗ್ಗೆ ಸ್ವಲ್ಪ ಕಾಲಾವಕಾಶ ಬೇಕು. ಸದ್ಯಕ್ಕಿಲ್ಲ ಎಂದು ಸರ್ಕಾರ ಹೇಳಿದೆ. ಇದರಿಂದ ಮತ್ತಷ್ಟು ಕೋಪಗೊಂಡಿರುವ ಪಂಚಮಸಾಲಿ ನಾಯಕರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಇಂದು (ಗುರುವಾರ) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪಂಚಸಾಲಿ ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳು ಸಭೆ ನಡೆಸಿದರು.

2A ಮೀಸಲಾತಿಗೆ ಪಂಚಮಸಾಲಿ ಬಿಗಿಪಟ್ಟು, ರಾಜ್ಯ ಸರ್ಕಾರಕ್ಕೆ ಡೆಡ್‌ ಲೈನ್

ಬಳಿಕ ಮಾತನಾಡಿದ ವಿಜಯಾನಂದ ಕಾಶಪ್ಪನವರ್​, ಮೀಸಲಾತಿ ತೆಗೆದುಕೊಂಡೇ ನಾವು ಹೋಗಬೇಕು. ಇದು ಮಾಡು ಇಲ್ಲವೇ ಮಡಿ ಹೋರಾಟ. ಹಾಗಾಗಿ, 2A ಮೀಸಲಾತಿ ತೆಗೆದುಕೊಂಡೇ ಇಲ್ಲಿಂದ ಹೋಗುತ್ತೇವೆ. ಮಾ.5ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಗಾಂಧಿ ಹೋರಾಟದಿಂದ ಹಿಂದೆ ಸರಿದಿದ್ರೆ ಸ್ವಾತಂತ್ರ್ಯ ಸಿಗ್ತಿರಲಿಲ್ಲ. ಜಯಮೃತ್ಯುಂಜಯ ಶ್ರೀ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಎಲ್ಲರೂ ಮಾತಾಡುವುದು ಬೇಡ. ಶ್ರೀಗಳು ಮಾತ್ರ ಮಾತಾಡ್ಲಿ. ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಕ್ರಿಯವಾಗಿ ಹೋರಾಡಬೇಕು. ಪಂಚಸಾಲಿ ಸಮಾಜದ ಹೋರಾಟಕ್ಕೆ ಹಣ ಬಂದಿದೆ ಅಂತಾರೆ. ಕಾಂಗ್ರೆಸ್​ ಪಕ್ಷ 5 ಕೋಟಿ ಹಣ ನೀಡಿದ್ದಾರೆಂದು ಆರೋಪಿಸಿದ್ದಾರೆ. ನಮ್ಮ ಸಮುದಾಯದವರು ಬಿಟ್ರೆ ಯಾರೂ ದೇಣಿಗೆ ಕೊಟ್ಟಿಲ್ಲ ಎಂದು ಸಭೆಯಲ್ಲಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್​ ಸ್ಪಷ್ಟನೆ ನೀಡಿದರು.

ಸದನ ಆರಂಭವಾದಗ ಧ್ವನಿ ಎತ್ತುವಂತೆ ಸಮುದಾಯದ ಶಾಸಕರು ಮತ್ತು ಸಚಿವರಿಗೆ ಮನವಿ ಪತ್ರ ಕೊಡ್ತೀವಿ. ಆಯಾ ಕ್ಷೇತ್ರದ ಶಾಸಕರು, ಸಚಿವರ ಮನೆಗೆ ತೆರಳಿ ಮನವಿ ಕೊಡುತ್ತೇವೆ. ಸದನದಲ್ಲಿ ಒಕ್ಕೊರಲಿನಿಂದ ಧ್ವನಿ ಎತ್ತುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.

'ಮಾರ್ಚ್‌ 4ರವರೆಗೂ ಪ್ರತಿಭಟನೆ ಮುಂದುವರಿಕೆ'
ಮಾರ್ಚ್‌ 4ರವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಸಭೆ ಬಳಿಕ ಜಯಮೃತ್ಯುಂಜಯ ಸ್ವಾಮೀಜಿ​ ಮಾತನಾಡಿದರು. ಅಮರಣಾಂತ ಉಪವಾಸ ಸತ್ಯಾಗ್ರಹ ಬಗ್ಗೆ ಸಭೆ ನಡೆಸ್ತೇವೆ. ಮಾ.4ರಂದು ಸಂಜೆ 4 ಗಂಟೆಗೆ ಸಭೆ ಮಾಡಲಾಗುವುದು. ಉಪವಾಸ ಸತ್ಯಾಗ್ರಹ ಎಲ್ಲಿ ಮಾಡಬೇಕೆಂಬ ಬಗ್ಗೆ ಚರ್ಚೆ ಮಾಡುತ್ತೇವೆ. ಸರ್ಕಾರ ಸದನದಲ್ಲಿ ಸ್ಪಷ್ಟ ಭರವಸೆಯನ್ನು ಕೊಡಬೇಕು. ಇಲ್ಲದಿದ್ರೆ ಸಭೆ ನಡೆಸಿ ಮುಂದಿನ ಹೋರಾಟ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ವಾಮೀಜಿ​ ಹೇಳಿದರು.