Asianet Suvarna News Asianet Suvarna News

ಆಸ್ತಿ ವಿಚಾರ: ರಾಘವೇಂದ್ರ ಮಠದ ಧರ್ಮದರ್ಶಿಯಿಂದಲೇ ಸುಪಾರಿ!

ನಗರದ ರಾಘವೇಂದ್ರಸ್ವಾಮಿ ಮಠದ ಧರ್ಮದರ್ಶಿ ಎಂದು ಹೇಳಿಕೊಳ್ಳುತ್ತಿರುವವರೇ ಮಠದ ಆಸ್ತಿ ವಿಚಾರವಾಗಿ ವ್ಯಕ್ತಿಯೊಬ್ಬರ ಹತ್ಯೆಗೆ ಸಂಚು ರೂಪಿಸಿ ಸುಪಾರಿ ನೀಡಿದ್ದ ಪ್ರಕರಣವೊಂದರನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈ ಸಂಬಂಧ 8 ಆರೋಪಿಗಳನ್ನು ಬಂಧಿಸಿದ್ದಾರೆ.

Property issue give supari from raghavendra mutt Dharmadarshi at haveri rav
Author
First Published Sep 11, 2023, 8:17 AM IST

ಹಾವೇರಿ (ಸೆ.11) : ನಗರದ ರಾಘವೇಂದ್ರಸ್ವಾಮಿ ಮಠದ ಧರ್ಮದರ್ಶಿ ಎಂದು ಹೇಳಿಕೊಳ್ಳುತ್ತಿರುವವರೇ ಮಠದ ಆಸ್ತಿ ವಿಚಾರವಾಗಿ ವ್ಯಕ್ತಿಯೊಬ್ಬರ ಹತ್ಯೆಗೆ ಸಂಚು ರೂಪಿಸಿ ಸುಪಾರಿ ನೀಡಿದ್ದ ಪ್ರಕರಣವೊಂದರನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈ ಸಂಬಂಧ 8 ಆರೋಪಿಗಳನ್ನು ಬಂಧಿಸಿದ್ದಾರೆ.

ರಾಘವೇಂದ್ರಸ್ವಾಮಿ ಮಠ(Raghavendra swamy mutt)ದ ಧರ್ಮದರ್ಶಿ ಎಂದು ಹೇಳಿಕೊಳ್ಳುತ್ತಿರುವ ಉಡುಪಿ ಮೂಲದ, ಪ್ರಸ್ತುತ ಹಾವೇರಿ ನಿವಾಸಿ ಹರಿಕೃಷ್ಣ ಅನಂತ ರಾವ್‌ ಅವರೇ ಪ್ರಕರಣದ ಪ್ರಮುಖ ಆರೋಪಿ.

ಧಾರವಾಡ ಜಿಲ್ಲೆಯ ಮಾಂತು ಅಲಿಯಾಸ್‌ ಮಹಾಂತೇಶ ತಂದೆ ಲಕ್ಷ್ಮಣ ಜಮನಾಳ, ಸಾಗರ ತಂದೆ ತಿರುಕಪ್ಪ ಜಮನಾಳ, ಬೆಳಗಾವಿ ಜಿಲ್ಲೆಯ ಪ್ರಜ್ವಲ್ ತಂದೆ ಗಣಪತಿ ದೊತರೆ, ರಾಘವೇಂದ್ರ ತಂದೆ ಸೋಮಪ್ಪ ದೊಡ್ಡಮನಿ, ಅಜಯ್ ತಂದೆ ಹನುಮಂತಪ್ಪ ಸಾಲಹಳ್ಳಿ, ಶಿವಾನಂದ ತಂದೆ ಅರ್ಜುನ ತಗಡಿನಮನಿ, ಬೆಂಗಳೂರು ನಗರದ ವಾಸಿ ಸುನೀಲ್ ಕೆ.ಎನ್. ತಂದೆ ನಾಗರಾಜ, ಜಿ. ಚಂಗಲರಾಯಪ್ಪ ತಂದೆ ಗಜಲಪ್ಪ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ಹರಿಕೃಷ್ಣ ಅನಂತ ರಾವ್ ರಾಘವೇಂದ್ರ ಮಠದ ಮತ್ತು ಅದರ ಆಸ್ತಿ ವಿಚಾರವಾಗಿ ನಗರದ ನಿವಾಸಿ ಜಯರಾಮ ಕೊಲ್ಲಾಪೂರ ಎಂಬವರನ್ನು ಕೊಲೆ ಮಾಡುವ ಬಗ್ಗೆ ಒಳ ಸಂಚು ರೂಪಿಸಿ 8 ಜನ ಆರೋಪಿತರಿಗೆ ಹಣದ ಆಸೆ ತೋರಿಸಿ ಅವರಿಗೆ ಸುಪಾರಿ ಕೊಟ್ಟಿದ್ದ ಆರೋಪ ಎದುರಿಸುತ್ತಿದ್ದಾರೆ.

 

ಹುನ್ನೂರು ವರ್ತಕನ ಹತ್ಯೆಗೆ ಸಂಚು, ಐವರು ಸುಪಾರಿ ಹಂತಕರ ಬಂಧ‌ನ

ಪ್ರಕರಣದ ಹಿನ್ನೆಲೆ:

ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯ ದೇವಗಿರಿ ಯಲ್ಲಾಪುರ ಪೆಟ್ರೋಲ್ ಬಂಕ್ ಹತ್ತಿರ ಕಳೆದ ಆ.10ರಂದು ಸಂಜೆ 4.30ರ ವೇಳೆಗೆ ಜಯರಾಮ ಕೊಲ್ಲಾಪುರ ಮತ್ತು ಅವರ ಮಗ ವಾದಿರಾಜ ಕೊಲ್ಲಾಪುರ ಅವರು ತಮ್ಮ ಬೈಕ್‌ನಲ್ಲಿ ಹಾವೇರಿ ಕಡೆಗೆ ಬರುತ್ತಿದ್ದಾಗ ಯಾರೋ ದುಷ್ಕರ್ಮಿಗಳು ಮೋಟಾರ್‌ ಸೈಕಲ್‌ ಮೇಲೆ ಬಂದು ಜಯರಾಮ ಅವರು ಹೋಗುತ್ತಿದ್ದ ಬೈಕನ್ನು ಬೆನ್ನು ಹತ್ತಿ ಹಿಂದಿನಿಂದ ಬಂದು ಜಯರಾಮನ ಬೆನ್ನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು 8 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹರಿಕೃಷ್ಣನಿಂದ ಸುಪಾರಿ ಪಡೆದು ತಾವು ಕೊಲೆಗೆ ಯತ್ನಿಸಿದ್ದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಪ್ರಮುಖ ಆರೋಪಿಯಾದ ಹರಿಕೃಷ್ಣ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ ಎಂದು ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್‌ ಸಂತೋಷ ಪವಾರ್‌ ಮಾಹಿತಿ ನೀಡಿದ್ದಾರೆ. 

ಅತ್ತಿಗೆಯ ಕೊಲೆಗೆ ಮೈದುನನಿಂದಲೇ ಸುಪಾರಿ! ಯೋಧನಿಗೆ ಅತ್ತಿಗೆ ಕೆಲಸದ ಮೇಲೆ ಕಣ್ಣು!

 

ಪ್ರಕರಣ ಭೇದಿಸಿ ಆರೋಪಿತರನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಡಿವೈಎಸ್ಪಿ ಎಂ.ಎಸ್‌. ಪಾಟೀಲ, ಸಿಪಿಐ ಎಸ್.ಕೆ. ಪವಾರ್, ಗ್ರಾಮೀಣ ಠಾಣೆಯ ಪಿಎಸ್ಐ ರವಿಕುಮಾರ, ಎಸ್.ಪಿ. ಹೊಸಮನಿ ಹಾಗೂ ಸಿಬ್ಬಂದಿಯಾದ ವೈ.ಎಫ್. ತಹಸೀಲ್ದಾರ, ಸುರೇಶ ನಾಯಕ, ಎಂ.ಕೆ. ನದಾಫ್‌, ಮಾರುತಿ ಹಾಲಬಾವಿ, ಸತೀಶ ಮಾರಕಟ್ಟೆ ಅವರಿಗೆ ಎಸ್ಪಿ ಡಾ.ಶಿವಕುಮಾರ ಗುಣಾರೆ ಬಹುಮಾನ ಘೋಷಿಸಿದ್ದಾರೆ.

Follow Us:
Download App:
  • android
  • ios