ಬೆಳಗಾವಿ ಕೋರ್ಟ್ ಆವರಣದಲ್ಲೇ ಕೈದಿಯಿಂದ ಪಾಕ್ ಪರ ಘೋಷಣೆ!
ಬೆಳಗಾವಿ ಜಿಲ್ಲಾ ನ್ಯಾಯಾಲಯ ಆವರಣದಲ್ಲೇ ಕೈದಿಯೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ಬುಧವಾರ ನಡೆದಿದೆ. ಪಾಕ್ ಪರ ಘೋಷಣೆ ಕೂಗುತ್ತಿದ್ದಂತೆಯೇ ಕೈದಿಗೆ ವಕೀಲರು ಮತ್ತು ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ಬೆಳಗಾವಿ (ಜೂ.13): ಬೆಳಗಾವಿ ಜಿಲ್ಲಾ ನ್ಯಾಯಾಲಯ ಆವರಣದಲ್ಲೇ ಕೈದಿಯೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ಬುಧವಾರ ನಡೆದಿದೆ. ಪಾಕ್ ಪರ ಘೋಷಣೆ ಕೂಗುತ್ತಿದ್ದಂತೆಯೇ ಕೈದಿಗೆ ವಕೀಲರು ಮತ್ತು ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ನಟೋರಿಯಸ್ ಪಾತಕಿ ಪುತ್ತೂರು ಮೂಲದ ಜಯೇಶ ಪೂಜಾರಿ ಪಾಕ್ ಪರ ಘೋಷಣೆ ಕೂಗಿ, ಹಲ್ಲೆಗೆ ಒಳಗಾದ ಕೈದಿ. ಈತ ಪಾಕ್ ಪರ ಘೋಷಣೆ ಕೂಗುತ್ತಿದ್ದಂತೆಯೇ ಸ್ಥಳದಲ್ಲೇ ಇದ್ದ ವಕೀಲರು ಮತ್ತು ಸಾರ್ವಜನಿಕರು ಆಕ್ರೋಶಗೊಂಡು ಆತನ ಮೇಲೆ ಹಲ್ಲೆ ನಡೆಸಿದರು. ಕೂಡಲೇ ಪೋಲೀಸರು ಆರೋಪಿಯನ್ನು ರಕ್ಷಣೆ ಮಾಡಿ ಹೊರಗೆ ಕರೆದುಕೊಂಡು ಬಂದು ಎಪಿಎಂಸಿ ಠಾಣೆಯತ್ತ ಹೋದರು.
ಹಿಂಡಲಗಾ ಕೇಂದ್ರ ಕಾರಾಗೃಹದಲ್ಲೇ ಇದ್ದುಕೊಂಡು ಐಪಿಎಸ್ ಅಧಿಕಾರಿ ಅಲೋಕಕುಮಾರ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಜಯೇಶ ಪೂಜಾರಿಯನ್ನು ನ್ಯಾಯಾಲಯಕ್ಕೆ ಬುಧವಾರ ವಿಚಾರಣೆಗೆಂದು ಕರೆ ತರಲಾಗಿತ್ತು. ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ₹100 ಕೋಟಿ ಬೇಡಿಕೆ ಇಟ್ಟು ಜೈಲಿನಲ್ಲಿದ್ದುಕೊಂಡು ಕರೆ ಮಾಡಿ ಜೀವ ಬೆದರಿಕೆಯನ್ನೂ ಈತ ಹಾಕಿದ್ದ.
ಘೋಷಣೆ ಕೂಗಿದ್ದು ನಿಜ: ಕೈದಿ ಜಯೇಶ ಪೂಜಾರಿ ನ್ಯಾಯಾಲಯದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ನಿಜ ಎಂದು ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ರೋಹನ ಜಗದೀಶ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಡಿಜಿಪಿ ಅಲೋಕಕುಮಾರ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಜಯೇಶ ಪೂಜಾರಿಯನ್ನು ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದ ವೇಳೆ ಆತ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದಾನೆ. ಈ ಸಂಬಂಧ ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಮಂಗಳ ಗ್ರಹದ 3 ಗುಂಡಿಗಳಿಗೆ ಭಾರತೀಯ ನಾಮಕರಣ: ಲಾಲ್, ಯುಪಿ, ಬಿಹಾರದ ಪಟ್ಟಣಗಳ ಹೆಸರು!
ಜಾಕೀರ್ ಅಲಿಯಾಸ ಜಯೇಶ ಪೂಜಾರಿ ಮೂಲತಃ ಮಂಗಳೂರು ಮೂಲದವ. ಆರೋಪಿ ತನ್ನ ಹೆಸರು ಬದಲಾಯಿಸಿಕೊಂಡಿರುವ ಕುರಿತು ತನಿಖೆ ನಡೆಯುತ್ತಿದೆ. ಎರಡು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದಾನೆ. ಈತ ಕೇರಳಕ್ಕೆ ಹೋಗಿ ಇಸ್ಲಾಂ ಧರ್ಮಕ್ಕೆ ಮಂತಾತರವಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.