ಇಂದು ರಾತ್ರಿಯಿಂದ ಬೆಂಗ್ಳೂರಲ್ಲಿ ಖಾಸಗಿ ಸಾರಿಗೆ ಸೇವೆ ಬಂದ್!
ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮಕ್ಕಾಗಿರುವ ನಷ್ಟಕ್ಕೆ ಪರಿಹಾರ ನೀಡುವುದು ಸೇರಿ 30 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಬೆಂಗಳೂರಿನಲ್ಲಿ ಸಾರಿಗೆ ಬಂದ್ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾಜಧಾನಿಯಲ್ಲಿ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು (ಸೆ.10) : ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮಕ್ಕಾಗಿರುವ ನಷ್ಟಕ್ಕೆ ಪರಿಹಾರ ನೀಡುವುದು ಸೇರಿ 30 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಬೆಂಗಳೂರಿನಲ್ಲಿ ಸಾರಿಗೆ ಬಂದ್ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾಜಧಾನಿಯಲ್ಲಿ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರು ಸಾರಿಗೆ ಬಂದ್‌ನಲ್ಲಿ ಬಸ್, ಆಟೋ, ಕ್ಯಾಬ್‌ಗಳ 32ಕ್ಕೂ ಹೆಚ್ಚಿನ ಸಂಘಟನೆಗಳು ಪಾಲ್ಗೊಳ್ಳುತ್ತಿದ್ದು, 7 ಲಕ್ಷಕ್ಕೂ ಹೆಚ್ಚಿನ ವಾಹನಗಳು ಸೇವೆ ಸ್ಥಗಿತಗೊಳಿಸುತ್ತಿವೆ. ಅಲ್ಲದೆ, ಬಂದ್ ಕರೆ ಉಲ್ಲಂಘಿಸಿ ಸೇವೆ ನೀಡಲು ಮುಂದಾಗುವ ಯೆಲ್ಲೋ ಬೋರ್ಡ್ (ಖಾಸಗಿ ಸಾರ್ವಜನಿಕ ವಾಹನ) ವಾಹನಗಳನ್ನು ತಡೆಯಲಾಗುವುದು ಎಂದು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಎಚ್ಚರಿಕೆ ನೀಡಿದೆ. ಹೀಗಾಗಿ ಬಂದ್‌ಗೆ ಬೆಂಬಲ ನೀಡದಿರುವ ಆಟೋ, ಬಸ್ ಹಾಗೂ ಕ್ಯಾಬ್‌ಗಳು ಸಹ ಸೋಮವಾರ ರಸ್ತೆಗಿಳಿಯುವುದು ಅನುಮಾನ ಎನ್ನುವಂತಾಗಿದೆ.
ಸೋಮವಾರ ಕೆಲಸದ ದಿನ ಆಗಿರುವ ಕಾರಣ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಮಾಡಲು ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಒಂದು ವೇಳೆ ಬಿಎಂಟಿಸಿ ಬಸ್‌ಗಳು ಸಾಲದಿದ್ದರೆ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಬೆಂಗಳೂರಿನಲ್ಲಿ ಸಾರಿಗೆ ಸೇವೆಗೆ ನೀಡುವ ಬಗ್ಗೆಯೂ ಚರ್ಚಿಸಲಾಗಿದೆ.
ಹಲವು ಸೇವೆಗಳಲ್ಲಿ ವ್ಯತ್ಯಯ:
ಪ್ರಮುಖವಾಗಿ ಶಾಲೆ-ಕಾಲೇಜುಗಳಿಗೆ ಸೇವೆ ನೀಡುತ್ತಿರುವ ಹೊರಗುತ್ತಿಗೆಯ ಖಾಸಗಿ ಬಸ್‌ಗಳ ಸೇವೆ (ಅಧಿಕೃತ ಶಾಲಾ ವಾಹನಗಳಲ್ಲ) ಸ್ಥಗಿತಗೊಳ್ಳಲಿದ್ದು, ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಹೋಗಲು ಬಿಎಂಟಿಸಿ ಅಥವಾ ಮೆಟ್ರೋ ರೈಲನ್ನು ಅವಲಂಬಿಸಬೇಕಿದೆ. ಅದೇ ರೀತಿ ಹೊರ ಜಿಲ್ಲೆಗಳಿಂದ ನಗರಕ್ಕೆ ಬರುವವರು ಕೆಎಸ್ಸಾರ್ಟಿಸಿ ಅಥವಾ ರೈಲಿನಲ್ಲಿ ಪ್ರಯಾಣಿಸಬೇಕಿದೆ. ಅದರಲ್ಲೂ ವಿಮಾನನಿಲ್ದಾಣಕ್ಕೆ ಸೇವೆ ನೀಡುತ್ತಿರುವ ಬಹುತೇಕ ಟ್ಯಾಕ್ಸಿಗಳು ಬಂದ್‌ಗೆ ಬೆಂಬಲ ನೀಡಿ ಸ್ಥಗಿತಗೊಳ್ಳುತ್ತಿವೆ.
ಹೀಗಾಗಿ ಬಿಎಂಟಿಸಿಯ ವಾಯುವಜ್ರ ಬಸ್ ಬಳಸಿ ಅಥವಾ ದೇವನಹಳ್ಳಿ ರೈಲು ನಿಲ್ದಾಣದಿಂದ ಬೆಂಗಳೂರಿಗೆ ಬರಬೇಕಿದೆ. ಆದರೆ, ಈ ಎಲ್ಲ ಬಸ್‌ಗಳಲ್ಲೂ ಪ್ರಯಾಣಿಕರು ಹೆಚ್ಚಾಗುವ ಕಾರಣ ಜನರು ನೂಕುನುಗ್ಗಲಲ್ಲಿಯೇ ಪ್ರಯಾಣಿಸಬೇಕಿದೆ. ಅದರ ಜತೆಗೆ ಸರಕು ಸಾಗಣೆ ವಾಹನಗಳೂ ಬಂದ್ ಬೆಂಬಲಿಸುತ್ತಿದ್ದು, ಸರಕು ಸಾಗಣೆಯಲ್ಲೂ ವ್ಯತ್ಯಯವಾಗಲಿದೆ. ದಿನಸಿ ಸೇರಿದಂತೆ ಇನ್ನಿತರ ವಸ್ತುಗಳು ಸೋಮವಾರ ಸರಬರಾಜಾಗುವುದು ಅನುಮಾನ ಎನ್ನುವಂತಾಗಿದೆ.
ರಸ್ತೆ ತಡೆ, ಪ್ರತಿಭಟನಾ ಮೆರವಣಿಗೆ:
ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಸೋಮವಾರ ಯಾವುದೇ ಖಾಸಗಿ ಸಾರಿಗೆಗಳು ರಸ್ತೆಗಿಳಿದರೆ ತಡೆಯೊಡ್ಡುವುದಾಗಿ ತಿಳಿಸಿದೆ. ಅಲ್ಲದೆ, ಬೆಂಗಳೂರು ಸಂಪರ್ಕಿಸುವ ಮೈಸೂರು ರಸ್ತೆ, ನೆಲಮಂಗಲ, ಎಲೆಕ್ಟ್ರಾನಿಕ್ ಸಿಟಿ ರಸ್ತೆ ಹಾಗೂ ಕೆ.ಆರ್.ಪುರ ರಸ್ತೆಯನ್ನು ಬಂದ್ ಮಾಡುವುದಾಗಿ ಹೇಳಿದೆ. ಹೀಗಾಗಿ ಬೆಂಗಳೂರಿಗೆ ಬರುವ ಖಾಸಗಿ ವೈಯಕ್ತಿಕ ವಾಹನಗಳಿಗೂ ಸಮಸ್ಯೆಯಾಗಲಿವೆ.
ಸಾರಿಗೆ ಒಕ್ಕೂಟದ ಎಲ್ಲ 32 ಸಂಘಗಳು ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಸೋಮವಾರ ಬೆಳಗ್ಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ನಂತರ ಅಲ್ಲಿ ಪ್ರತಿಭಟನಾ ಸಮಾವೇಶ ನಡೆಸಿ, ತಮ್ಮ ಹಕ್ಕೊತ್ತಾಯ ಮಂಡಿಸಲಿದ್ದಾರೆ. ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಸಾರಿಗೆ ಬಂದ್ ರಾಜ್ಯಾದ್ಯಂತ ವಿಸ್ತರಿಸುವ ಬಗ್ಗೆಯೂ ಸಮಾವೇಶದಲ್ಲಿ ಘೋಷಿಸಲು ಒಕ್ಕೂಟ ನಿರ್ಧರಿಸಿದೆ.
ಶಾಲೆಗೆ ರಜೆ, ವರ್ಕ್ಫ್ರಂ ಹೋಮ್?
ಹೊರಗುತ್ತಿಗೆ ಆಧರಿತ ಶಾಲಾ ವಾಹನಗಳ ಸಂಚಾರವೂ ಸ್ಥಗಿತಗೊಳ್ಳುತ್ತಿರುವುದರಿಂದ ಕೆಲ ಶಾಲೆಗಳು ರಜೆ ಘೋಷಿಸುವ ಬಗ್ಗೆ ಚಿಂತನೆ ನಡೆಸಿವೆ. ಹೆಬ್ಬಾಳದ ವಿದ್ಯಾನಿಕೇತನ ಶಾಲೆಯು ಸೋಮವಾರ ರಜೆ ಘೋಷಿಸಿದೆ. ಅದೇ ರೀತಿ ಹಲವು ಐಟಿ-ಬಿಟಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸೋಮವಾರ ವರ್ಕ್ ಫ್ರಂ ಹೋಮ್ ಮಾಡುವಂತೆ ಸೂಚನೆ ನೀಡಿವೆ.
ಬೆಂಗಳೂರಲ್ಲಿ ಸರ್ಕಾರದಿಂದ ಹೆಚ್ಚುವರಿ ಬಸ್
ಬೆಂಗಳೂರು ಸಾರಿಗೆ ಬಂದ್‌ನಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರವೂ ಹಲವು ಕ್ರಮ ಕೈಗೊಂಡಿದೆ. ಪ್ರಮುಖವಾಗಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ಗಳ ಸಂಚಾರವನ್ನು ಮಾಡಿಸಲಾಗುತ್ತಿದ್ದು, ಈ ಹಿಂದೆ ರದ್ದುಗೊಂಡಿದ್ದ ಶೆಡ್ಯೂಲ್‌ಗಳನ್ನು ಸೊಮವಾರ ಮರು ಆರಂಭ ಮಾಡಲಾಗುತ್ತದೆ. ಅಲ್ಲದೆ, ರಾತ್ರಿ ವೇಳೆಯೂ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ರಜೆಯಲ್ಲಿ ತೆರಳಿದ್ದ ಸಿಬ್ಬಂದಿಯನ್ನು ಮರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು, ಸೋಮವಾರ ಯಾರೂ ರಜೆ ಹಾಕದಂತೆ ಸೂಚಿಸಲಾಗಿದೆ.
'ಬೇಡಿಕೆ ಈಡೇರಿಸಿಕೊಳ್ಳಬೇಕೆಂದರೆ ಬಂದು ಮಾತಾಡಲಿ' ಖಾಸಗಿ ಸಾರಿಗೆ ಬಂದ್‌ಗೆ ಡೋಂಟ್‌ಕೇರ್ ಎಂದ ಸಾರಿಗೆ ಸಚಿವ
ಬಂದ್ ಹೆಸರಿನಲ್ಲಿ ವಾಹನಗಳ ಮೇಲೆ ಹಲ್ಲೆ ಮಾಡುವುದು ಸೇರಿ ಇನ್ನಿತರ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಪ್ರಮುಖವಾಗಿ ಜನರು ಹೆಚ್ಚಾಗಿ ಓಡಾಡುವ ಮಾರ್ಗಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲು ತಿಳಿಸಲಾಗಿದೆ. ಹಾಗೆಯೇ, ಬೆಂಗಳೂರು ಸಂಪರ್ಕಿಸುವ ರಸ್ತೆಗಳಲ್ಲಿ ಯಾವುದೇ ವಾಹನಗಳ ಸಂಚಾರಕ್ಕೆ ತಡೆಯುಂಟಾಗದಂತೆ ಮಾಡಲು ಪೊಲೀಸರಿಗೆ ಹೇಳಲಾಗಿದೆ.
ಯಾವೆಲ್ಲ ವಾಹನ ಸಂಚಾರ ಇರಲಿದೆ?
ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್‌ಗಳು, ಆಂಬ್ಯುಲೆನ್ಸ್, ಹಾಲು ಸಾಗಣೆ ವಾಹನ, ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ವಾಹನ, ರಾರಯಪಿಡೋ ಬೈಕ್ ಟ್ಯಾಕ್ಸಿ
ಬಂದ್ ಚಿತ್ರಣ ಹೇಗಿರಲಿದೆ?
- ಭಾನುವಾರ ಮಧ್ಯರಾತ್ರಿ 12ರಿಂದ ಸೋಮವಾರ ರಾತ್ರಿ 11.59ರವರೆಗೆ ಸಾರಿಗೆ ಬಂದ್
- 3 ಲಕ್ಷ ಆಟೋ, 1.5 ಲಕ್ಷ ಟ್ಯಾಕ್ಸಿಗಳು, 20 ಸಾವಿರ ಸರಕು ವಾಹನ, 5 ಸಾವಿರ ಶಾಲಾ ವಾಹನ ಸೇರಿ 7 ಲಕ್ಷಕ್ಕೂ ಹೆಚ್ಚಿನ ವಾಹನಗಳು ಸ್ಥಗಿತ
- ವಿಮಾನನಿಲ್ದಾಣ ಸೇವೆ ನೀಡುವ ಟ್ಯಾಕ್ಸಿಗಳು ಸ್ಥಗಿತ
- ಖಾಸಗಿ ಸಂಸ್ಥೆಗಳಿಗೆ ಸೇವೆ ನೀಡುವ ಖಾಸಗಿ ಬಸ್, ಕ್ಯಾಬ್‌ಗಳು ಸ್ಥಗಿತ
- ಬೆಳಗ್ಗೆ 10 ಗಂಟೆಗೆ ಮೆಜೆಸ್ಟಿಕ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ
- ಹೊರ ಜಿಲ್ಲೆಗಳಿಂದ ನಗರ ಪ್ರವೇಶಿಸುವ ವಾಹನಗಳ ತಡೆ ಸಾಧ್ಯತೆ
ರಾಜ್ಯ ಸರ್ಕಾರಕ್ಕೆ ತಲೆನೋವಾದ ಖಾಸಗಿ ಸಾರಿಗೆ ಒಕ್ಕೂಟ; ಸೆಪ್ಟೆಂಬರ್ 11ಕ್ಕೆ ಬೆಂಗಳೂರು ಬಂದ್‌ಗೆ ಕರೆ!
- ಸರಕು ಸಾಗಣೆಯಲ್ಲಿ ವ್ಯತ್ಯಯ ಸಂಭವ
ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಸದಸ್ಯರು ಭಾನುವಾರ ಮಾತುಕತೆಗೆ ಬರುವ ಸಾಧ್ಯತೆಯಿದ್ದು, ಸಾರಿಗೆ ಬಂದ್ ನಡೆಯುವುದು ಅನುಮಾನ. ಆದರೂ, ಬೆಂಗಳೂರಿನಲ್ಲಿ ಬಂದ್‌ನಿಂದ ಜನರಿಗೆ ಸಮಸ್ಯೆಯಾಗದಂತೆ ಮಾಡಲು ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ಹೆಚ್ಚಿಸಲಾಗುತ್ತಿದೆ. ರಜೆಯಲ್ಲಿ ತೆರಳಿದ್ದ ಚಾಲಕರನ್ನು ವಾಪಸು ಕರೆಸಿಕೊಳ್ಳಲಾಗುತ್ತಿದೆ. ಜತೆಗೆ ಬಿಗಿ ಬಂದೋಬಸ್‌್ತ ಏರ್ಪಡಿಸಲು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ.
- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಸರ್ಕಾರ ಬೇಡಿಕೆ ಈಡೇರಿಸುವವರೆಗೆ ಹೋರಾಟ ನಡೆಸುತ್ತೇವೆ. ಸೋಮವಾರ 7 ಲಕ್ಷಕ್ಕೂ ಹೆಚ್ಚಿನ ವಾಹನಗಳು ಸ್ಥಗಿತಗೊಳ್ಳಲಿದ್ದು, ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಂದ್ ಯಶಸ್ವಿಯಾಗಲಿದೆ.
ನಟರಾಜ ಶರ್ಮ, ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ