"

ಬೆಂಗಳೂರು [ನ.08]: ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಕರ್ನಾಟಕ ರಕ್ಷಣಾ ವೇದಿಕೆ ಕಾರ‌್ಯಕರ್ತರ ಬಂಧನಕ್ಕೆ ಆಗ್ರಹಿಸಿ ಬೆಂಗಳೂರು ವೈದ್ಯ ಕಾಲೇಜಿನ ವೈದ್ಯರ ಪ್ರತಿಭಟನೆ ತೀವ್ರ ಸ್ವರೂಪ ಪಡೆ ದುಕೊಂಡಿದೆ. ಹಲ್ಲೆ ನಡೆಸಿದವರ ಬಂಧನಕ್ಕೆ ಆಗ್ರಹಿಸಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಹೊರರೋಗಿ ಸೇವೆ (ಒಪಿಡಿ) ಸ್ಥಗಿತಗೊಳಿಸಲು ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದು, ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ನೀಡಿರುವ ಕರೆಗೆ ಸರ್ಕಾರಿ ವೈದ್ಯರ ಸಂಘ ಬಾಹ್ಯ ಬೆಂಬಲ ಘೋಷಿಸಿದೆ. ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಸೇವೆಗೂ ವ್ಯತ್ಯಯ ಉಂಟಾಗದಂತೆ ಎಚ್ಚರ ವಹಿಸಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕರವೆ ಶರಣಾಗತಿ :  ವೈದ್ಯರ ಮುಷ್ಕರದಿಂದ ರೋಗಿಗಳಿಗೆ ಆಗುವ ತೊಂದರೆ ತಪ್ಪಿಸಲು ಮಾನವೀಯತೆ ದೃಷ್ಟಿಯಿಂದ ಪೊಲೀಸ್ ಆಯು ಕ್ತರ ಮುಂದೆ ಶರಣಾಗಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಹಲ್ಲೆ ನಡೆಸಿದ ಕರವೇ ಕಾರ್ಯಕರ್ತರನ್ನು ಬಂಧಿಸಬೇಕು ಎಂಬುದು ಮುಷ್ಕರ ನಿರತ ವೈದ್ಯರ ಪ್ರಮುಖ ಬೇಡಿಕೆಯಾಗಿರುವುದರಿಂದ ಕರವೇ ಕಾರ್ಯಕರ್ತರೇ ಪೊಲೀಸರಿಗೆ ಶರಣಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹನ್ನೆರಡು ಮಂದಿ ದೃಷ್ಟಿ ಕಳೆದುಕೊಳ್ಳಲು ಕಾರಣರಾದ ಮಿಂಟೋ ಆಸ್ಪತ್ರೆ ವೈದ್ಯರ ವಿರುದಟಛಿ ವಾರದ ಹಿಂದೆ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿಗೌಡ ಸೇರಿದಂತೆ ಕೆಲವರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿತ್ತು.