Asianet Suvarna News Asianet Suvarna News

ಬೆಂಗಳೂರು ಸ್ಟಾರ್ಟ್‌ಅಪ್‌ ಕ್ಯಾಪಿಟಲ್‌, ಕೆಂಪೇಗೌಡರ ಕೊಡುಗೆ ಅಪಾರ: ಪ್ರಧಾನಿ ನರೇಂದ್ರ ಮೋದಿ

Prime Minister Narendra Modi in Bengaluru: ಬೆಂಗಳೂರು ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬೆಂಗಳೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2 ಉದ್ಘಾಟನೆಯ ನಂತರ ವೇದಿಕೆಯಲ್ಲಿ ಮಾತನಾಡಿದರು.

prime minister narendra modi speech in bengaluru after inaugurating kempegowda statue
Author
First Published Nov 11, 2022, 1:10 PM IST

ಬೆಂಗಳೂರು: ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ ಮಾಡಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. "ಕರ್ನಾಟಕದ ಸಮಸ್ತೆ ಜನತೆಗೆ ನನ್ನ ಕೋಟಿ ಕೋಟಿ ನಮಸ್ಕಾರಾಗಳು" ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ ವೇದಿಕೆಯ ಮೇಲೆ ಆಸೀನರಾಗಿದ್ದ ನಿರ್ಮಲಾನಂದ ಶ್ರೀಗಳಿಗೆ, ಗವರ್ನರ್‌ ಥಾವರ್‌ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ್ ಹೊರಟ್ಟಿ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಸೇರಿದಂತೆ ಎಲ್ಲರಿಗೂ ವಂದಿಸಿದರು. "ಕರ್ನಾಟಕದ, ದೇಶದ ಎರಡು ದೊಡ್ಡ ಧೀಮಂತ ವ್ಯಕ್ತಿಗಳ ಜನ್ಮ ದಿನಾಚರಣೆ ಇಂದು. ಸಂತ ಕನಕದಾಸರು, ನಾಡಿಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ ಮತ್ತು ನಾಡಪ್ರಭು ಕೆಂಪೇಗೌಡರು ಪ್ರಗತಿಯ ಧ್ಯೋತಕವಾಗಿದ್ದಾರೆ. ಇವರಿಬ್ಬರಿಗೂ ನನ್ನ ಅನಂತ ಅನಂತ ಧನ್ಯವಾದಗಳು," ಎಂದರು.

"ಕರ್ನಾಟಕಕ್ಕೆ ಇಂದು ಎರಡು ಕೊಡುಗೆಗಳು ಸಿಕ್ಕಿದೆ. ಕರ್ನಾಟಕದಿಂದ ಅಯೋಧ್ಯೆ, ಕಾಶಿ ಮತ್ತು ಪ್ರಯಾಗರಾಜ್‌ ಯಾತ್ರೆಗಾಗಿ ವಿಶೇಷ ರೈಲು ನೀಡಲಾಗಿದೆ. ಜತೆಗೆ ಬೆಂಗಳೂರು ಮತ್ತು ಮೈಸೂರಿನ ನಡುವೆ ಸಂಚರಿಸಲು ಹೊಸ ರೈಲು ಸಿಕ್ಕಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ ಸಂಪರ್ಕವನ್ನು ಇನ್ನಷ್ಟು ಅನಾಯಾಸಗೊಳಿಸಲಿದೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ ಇಂದು ಲೋಕಾರ್ಪಣೆಯಾಗಿದೆ. ಕೆಂಪೇಗೌಡರ 108 ಅಡಿ ಎತ್ತರದ ವಿಶ್ವದಲ್ಲೇ ಅತಿದೊಡ್ಡ ಕಂಚಿನ ಪ್ರತಿಮೆ ನಿರ್ಮಾಣವಾಗಿದೆ. ಇಡೀ ಪ್ರಪಂಚ ಭಾರತವನ್ನು ಇಂದು ಸ್ಟಾರ್ಟಪ್‌ ಕ್ಯಾಪಿಟಲ್‌ ಆಗಿ ಗುರುತಿಸುತ್ತಿದೆ. ಇದಕ್ಕೆ ಮೂಲ ಕಾರಣ ಬೆಂಗಳೂರು. ಸ್ಟಾರ್ಟಪ್‌ ಕ್ಯಾಪಿಟಲ್‌ ಬೆಂಗಳೂರು. ಹೊಸದನ್ನು ಮಾಡಲು, ಬೌಂಡರಿ ಆಚೆ ನಿಂತು ಚಿಂತಿಸಲು, ಹೊಸ ಪ್ರಯೋಗಗಳು ಹುಟ್ಟುವುದೇ ಸ್ಟಾರ್ಟಪ್‌ನಲ್ಲಿ. ಮತ್ತು ಬೆಂಗಳೂರು ಭಾರತದ ಸ್ಟಾರ್ಟಪ್‌ನ ನಿಜವಾದ ರಾಜಧಾನಿ," ಎಂದು ನರೇಂದ್ರ ಮೋದಿ ಹೇಳಿದರು.

ಬೆಂಗಳೂರು ಪ್ರವಾಸದಲ್ಲಿರುವ ಪ್ರಧಾನಿ ಮೋದಿ ನಗರಾದ್ಯಂತ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2 ಉದ್ಘಾಟಿಸಿದ ನಂತರ ಕೆಂಪೇಗೌಡರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. 108 ಅಡಿ ಎತ್ತರದ ಪ್ರತಿಮೆ ಇದಾಗಿದ್ದು ಪ್ರಗತಿಯ ಪ್ರತೀಕವಾಗಿದೆ. 

ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಮೂಲ ಕಾರಣರಾದ ನಾಡಪ್ರಭು ಕೆಂಪೇಗೌಡ ಅವರು ಸದಾ ಎಲ್ಲರಿಗೂ ಸ್ಪೂರ್ತಿಯಾಗಲು ಹಾಗೂ ವಿಶ್ವಕ್ಕೆ ಪರಿಯಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ಕೆಂಪೇಗೌಡ ಅವರ 108 ಅಡಿ ಎತ್ತರದ ಭವ್ಯವಾದ ಕಂಚಿನ ಮೂರ್ತಿಯನ್ನು ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು 84 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. 98 ಟನ್‌ ಕಂಚು, 120 ಟನ್‌ ಉಕ್ಕು ಬಳಸಿ ಪ್ರತಿಮೆ ನಿರ್ಮಿಸಲಾಗಿದೆ. 

ಕೆಂಪೇಗೌಡ ಆವರ ಕೈಯಲ್ಲಿರುವ ಖಡ್ಗದ ತೂಕ ಬರೋಬ್ಬರಿ ನಾಲ್ಕು ಸಾವಿರ ಕೆ.ಜಿ. ಇದೆ. 24 ಅಡಿ ಎತ್ತರ, 7 ಅಡಿ ಸುತ್ತಳತೆಯ ನಾಲ್ಕು ಗೋಪುರಗಳಿವೆ. ಪ್ರತಿಮೆ ಸುತ್ತ ಆಕರ್ಷಕವಾದ ಥೀಮ್‌ ಪಾರ್ಕ್ ನಿರ್ಮಿಸಲಾಗಿದೆ. ಗುಜರಾತಿನ ‘ಏಕತಾ ಪ್ರತಿಮೆ’, ಅಮೇರಿಕದ ‘ಸ್ಟ್ಯಾಚು ಆಫ್‌ ಲಿಬರ್ಟಿ’ ಸೇರಿದಂತೆ ಜಗತ್ತಿನ ಗಮನಸೆಳೆದಿರುವ ಪ್ರತಿಮೆಗಳ ಸಾಲಿಗೆ ‘ಪ್ರಗತಿಯ ಪ್ರತಿಮೆ’ ಕೂಡ ಸೇರಲಿದೆ. ಪ್ರತಿಮೆಯನ್ನು ಖ್ಯಾತ ಶಿಲ್ಪಿ ನೋಯ್ಡಾದ ರಾಮ್‌ ಸುತರ್‌ ನಿರ್ಮಿಸಿದ್ದಾರೆ. ಗುಜರಾತ್‌ನಲ್ಲಿನ ಸರ್ದಾರ್‌ ವಲಭಬಾಯಿ ಪಟೇಲ್‌ ಪ್ರತಿಮೆಯೂ ಸೇರಿದಂತೆ ಹಲವು ಪ್ರತಿಮೆಗಳನ್ನು ಅರಳಿಸಿರುವ ಸಾಧಕರಾಗಿದ್ದಾರೆ.

ಅಭಿವೃದ್ಧಿಗೆ ಪ್ರೇರಣೆ ಆಗಲಿ ಎಂದು ಕೆಂಪೇಗೌಡ ಪ್ರತಿಮೆ ಸ್ಥಾಪನೆ: ಸಿಎಂ ಬೊಮ್ಮಾಯಿ

ಸಕಲ ಸಜ್ಜು: ಪ್ರತಿಮೆ ಉದ್ಘಾಟನೆಯಾಗಲಿರುವ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳ ಎರಡು ಬದಿಗಳಲ್ಲಿ ಮೋದಿ ಸೇರಿದಂತೆ ವಿವಿಧ ಮುಖಂಡರ ಪೋಸ್ಟರ್‌, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಪ್ರಮುಖ ವೃತ್ತಗಳಲ್ಲಿ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಪಾದಚಾರಿ ಮಾರ್ಗ, ಗೋಡೆಗಳಿಗೆ ಬಣ್ಣ ಬಳಿಯಲಾಗಿದೆ. ಜೊತೆಗೆ ನಗರದ ಸಂಗೋಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ ಸೇರಿದಂತೆ ಮೋದಿ ಅವರು ಸಂಚರಿಸುವ ಎಲ್ಲ ಮಾರ್ಗ, ವೃತ್ತಗಳಲ್ಲಿ ಬ್ಯಾನರ್‌ಗಳು, ಬಾವುಟಗಳು ಬಂಟಿಂಗ್‌ನಿಂದ ಅಲಂಕೃತಗೊಳಿಸಲಾಗಿದೆ.

ಬೊಮ್ಮಾಯಿ ಭೇಟಿ: ಶುಕ್ರವಾರ ನಡೆಯಲಿರುವ ಪ್ರತಿಮೆ ಅನಾವರಣ ಹಾಗೂ ಸಾರ್ವಜನಿಕ ಸಭೆ ನಡೆಯುವ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವಿವಿಧ ಸೂಚನೆ ನೀಡಿದರು.

ಪಾದ ಪೀಠದಲ್ಲಿ ಮೂಲ ಚಿತ್ರ ರಚನೆ: 108 ಅಡಿ ಎತ್ತರದ ಕಂಚಿನ ಕೆಂಪೇಗೌಡ ಅವರ ಪ್ರತಿಮೆಯ ಪಾದ ಪೀಠದಲ್ಲಿ ಕೆಂಪೇಗೌಡರ ಕಾಲದ ವೈಭವದ ಮೂಲ ಚಿತ್ರಗಳನ್ನು ಹಿರಿಯ ಕಲಾವಿದ ಚಂದ್ರನಾಥ ಆಚಾರ್ಯ ಅವರು ರಚಿಸಿದ್ದಾರೆ.

ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ 30 ಸಾವಿರ ಜನರು: ಬೆಂಗಳೂರಿನಲ್ಲಿ ನ.11ರಂದು ನಡೆಯಲಿರುವ ಪ್ರಗತಿಯ ಪ್ರತಿಮೆ ನಾಡಪ್ರಭು ಕೆಂಪೇಗೌಡ ಅವರ 108 ಅಡಿಗಳ ಕಂಚಿನ ಪ್ರತಿಮೆ ಅನಾವರಣಕ್ಕೆ ಜಿಲ್ಲೆಯಿಂದ ಸುಮಾರು 30 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್‌ ತಿಳಿಸಿದ್ದಾರೆ. ಪ್ರತಿಮೆ ಸಮೀಪ ನಿರ್ಮಾಣವಾಗುತ್ತಿರುವ ಥೀಮ್‌ ಪಾರ್ಕ್ಗೆ ಜಿಲ್ಲಾದ್ಯಂತ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹಿಸಲಾಗಿದೆ. ಇದಕ್ಕೆ ಜಿಲ್ಲೆಯ ಜನರು ಉತ್ತಮ ಸ್ಪಂದನೆ ನೀಡುವುದರ ಜತೆಗೆ ಕೆಂಪೇಗೌಡ ಅವರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಗೌರವದ ಬಗ್ಗೆ ಅಪಾರ ಅಭಿಮಾನ ತೋರಿಸಿದ್ದಾರೆ. 

ಪುಳಕ ಹುಟ್ಟಿಸಿದ ಪ್ರಗತಿ ಪ್ರತಿಮೆಯ ಯಾತ್ರೆ: ಸಚಿವ ಅಶ್ವತ್ಥ್‌ನಾರಾಯಣ

ಅದರಂತೆ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೂ ಬರಲಿದ್ದು, ಇದಕ್ಕಾಗಿ ವಾಹನ ವ್ಯವಸ್ಥೆ ಮಾಡಲಾಗಿದೆ. ನಮ್ಮ ಸರ್ಕಾರ ನಾಡಪ್ರಭುವಿಗೆ ಗೌರವ ಸಲ್ಲಿಸಲು ಯೋಜನೆ ರೂಪಿಸಿ ಅದರಂತೆ ಪೂರ್ಣಗೊಳಿಸಿದೆ ಎಂದಿದ್ದಾರೆ. ನ.11ರಂದು ಬೆಳಗ್ಗೆ 10ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿಮೆ ಅನಾವರಣಗೊಳಿಸಲಿದ್ದು, ಅದೊಂದು ವಿಶೇಷ ಕ್ಷಣವಾಗಲಿದೆ. ಆದ್ದರಿಂದ ಇಂತಹ ಸಮಯದಲ್ಲಿ ಜಿಲ್ಲೆಯ ಜನರು ಪಕ್ಷಾತೀತವಾಗಿ ಪಾಲ್ಗೊಳ್ಳಲಿದ್ದಾರೆ. ನಾಡಪ್ರಭುವಿಗೆ ವಿಶೇಷ ಗೌರವ ಸಲ್ಲಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

 

Follow Us:
Download App:
  • android
  • ios