ನವದೆಹಲಿ : ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಆಗಿಲ್ಲ. ಕೇವಲ 800 ಮಂದಿ ಸಾಲ ಮನ್ನಾ ಮಾಡಲಾಗಿದೆ. ಮನ್ನಾ ಬದಲು ರೈತರಿಗೆ ಬಂಧನ ವಾರಂಟ್ ಬರುತ್ತಿವೆ’ ಎಂದು ಇತ್ತೀಚಿನ ಪಂಚರಾಜ್ಯ ಚುನಾವಣೆ ವೇಳೆ ಪದೇ ಪದೇ ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲೂ ಗುರುವಾರ ಇದೇ ವಿಚಾರವಾಗಿ ಪ್ರಹಾರ ನಡೆಸಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಸಾಲ ಮನ್ನಾ ಘೋಷಣೆ ಮಾಡಿತು. ಸರ್ಕಾರಿ ದಾಖಲೆಗಳ ಪ್ರಕಾರ 43 ಲಕ್ಷ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದಿದೆ. ಆದರೆ ಈವರೆಗೆ ಕೇವಲ 60  ಸಾವಿರ ರೈತರ ಸಾಲ ಮನ್ನಾ ಮಾಡಲಾಗಿದೆ. ಸರ್ಕಾರಿ ದಾಖಲೆಗಳನ್ನೇ ಇಟ್ಟುಕೊಂಡು ನಾನು ಹೇಳುತ್ತಿದ್ದೇನೆ’ ಎಂದು
ಆರೋಪಿಸಿದರು.

‘ಕಾಂಗ್ರೆಸ್‌ಗೆ ರೈತರ ಸಾಲ ಮನ್ನಾ ಎಂಬುದು ದಶವಾರ್ಷಿಕ ಯೋಜನೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶಕ್ಕೆ ಹೋಗಿ ನೋಡಿ. ಅಲ್ಲಿ 10 ದಿನದಲ್ಲಿ ಸಾಲ ಮನ್ನಾ ಮಾಡುತ್ತೇವೆ ಎನ್ನುತ್ತಿದ್ದಿರಿ. ಆದರೆ ಅಲ್ಲಿ ಆದೇಶ ಇನ್ನೂ ಕಾಗದದ ಮೇಲಿದೆ ನೋಡಿ’ ಎಂದು ಕಿಡಿಕಾರಿದರು.

ದೇವೇಗೌಡರ ತಿರುಗೇಟು: ಸಾಲ ಮನ್ನಾ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮಾಡಿದ ಆರೋಪದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಟ್ವೀಟರ್‌ನಲ್ಲಿ ತಿರುಗೇಟು ನೀಡಿ ದ್ದಾರೆ. ‘ರೈತರ ಸಾಲ ಮನ್ನಾ ‘ಪ್ರಗತಿಯಲ್ಲಿದೆ’. ಆದರೆ ಪ್ರಧಾನಿ ಅವರು ರಾಮಮಂದಿರ, ಸ್ವಚ್ಛಗಂಗಾ, ನದಿಗಳ ಜೋಡಣೆ, ಬ್ಯಾಂಕ್ ಖಾತೆಗೆ 15 ಲಕ್ಷದ ಬಗ್ಗೆ ತುಟಿ ಪಿಟಕ್ಕೆನ್ನಲಿಲ್ಲ.  ಪ್ರಗತಿಯಲ್ಲಿದೆ ಎಂಬುದು ಮೌನಕ್ಕಿಂತ 
ದೊಡ್ಡದು. ಇದರ ಬದಲು ಕರ್ನಾಟಕದಲ್ಲಿ ಬಿಜೆಪಿಯ ‘ಆಪರೇಶನ್ ಕಮಲ’ ಮಾತ್ರ ‘ಪ್ರಗತಿಯಲ್ಲಿದೆ’ ಎಂದು ಕಿಚಾಯಿಸಿದ್ದಾರೆ.