ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 28 ರಂದು ಕಾರವಾರದ ಸೀಬರ್ಡ್ ನೌಕಾನೆಲೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಐಎನ್ಎಸ್ ವಿಕ್ರಾಂತ್ ಯುದ್ಧನೌಕೆ ಹಾಗೂ ಸಬ್‌ಮರೀನ್ ವೀಕ್ಷಿಸಲಿದ್ದು, ಭದ್ರತಾ ದೃಷ್ಟಿಯಿಂದ ಕಾರವಾರ-ಅಂಕೋಲಾ ವ್ಯಾಪ್ತಿಯಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಕಾರವಾರ (ಡಿ.26): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 28 ರಂದು ಕಾರವಾರದ ಏಷ್ಯಾ ಅತಿದೊಡ್ಡ ನೌಕಾನೆಲೆ 'ಸೀಬರ್ಡ್'ಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ನೌಕಾನೆಲೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ನೌಕಾಪಡೆ ಸಕಲ ಸಿದ್ಧತೆ ನಡೆಸಿದೆ.
ಐಎನ್ಎಸ್ ವಿಕ್ರಾಂತ್ ಹಾಗೂ ಸಬ್‌ಮರೀನ್ ವೀಕ್ಷಣೆ
ರಾಷ್ಟ್ರಪತಿಗಳು ನಾಳೆ ಗೋವಾದಲ್ಲಿ ತಂಗಲಿದ್ದು, ನಾಡಿದ್ದು (ಡಿ.28) ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಕಾರವಾರಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಅವರು ಐಎನ್ಎಸ್ ವಿಕ್ರಾಂತ್ (INS Vikrant) ಯುದ್ಧನೌಕೆಗೆ ಭೇಟಿ ನೀಡಲಿದ್ದಾರೆ. ಬಳಿಕ ಸಬ್‌ಮರೀನ್‌ಗೆ (ಜಲಂತರ್ಗಾಮಿ) ಭೇಟಿ ನೀಡಿ, ಸಮುದ್ರದ ಆಳದಲ್ಲಿ ಸ್ವಲ್ಪ ಕಾಲ ಪ್ರಯಾಣ ಬೆಳೆಸುವ ಮೂಲಕ ನೌಕಾಪಡೆಯ ಕಾರ್ಯಕ್ಷಮತೆಯನ್ನು ವೀಕ್ಷಿಸಲಿದ್ದಾರೆ.
ಮೀನುಗಾರಿಕೆಗೆ ತಾತ್ಕಾಲಿಕ ನಿಷೇಧ:
ರಾಷ್ಟ್ರಪತಿಗಳ ಭೇಟಿ ಮತ್ತು ಭದ್ರತೆಯ ದೃಷ್ಟಿಯಿಂದ ಡಿ.28 ರಂದು ಕಾರವಾರ-ಅಂಕೋಲಾ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ನಿರ್ಬಂಧ ಹೇರಲಾಗಿದೆ. ಅಂದು ಬೆಳಿಗ್ಗೆಯಿಂದ ಮಧ್ಯಾಹ್ನ 3.30 ರವರೆಗೆ ಮಾಜಾಳಿಯಿಂದ ಹಾರಾವಾಡದವರೆಗೆ ಯಾವುದೇ ಮೀನುಗಾರಿಕಾ ಬೋಟ್‌ಗಳು ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಕಾ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನೌಕಾನೆಲೆಯಲ್ಲಿ ಹೈ ಅಲರ್ಟ್
ವಿಶ್ವದ ಗಮನ ಸೆಳೆಯುತ್ತಿರುವ ಕಾರವಾರ ನೌಕಾನೆಲೆಯಲ್ಲಿ ರಾಷ್ಟ್ರಪತಿಗಳ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ. ಸಬ್ ಮರೀನ್‌ನಲ್ಲಿ ರಾಷ್ಟ್ರಪತಿಗಳು ಪ್ರಯಾಣಿಸಲಿರುವುದು ವಿಶೇಷವಾಗಿದ್ದು, ಈ ಹಿನ್ನೆಲೆಯಲ್ಲಿ ನೌಕಾದಳದ ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತಾ ವ್ಯವಸ್ಥೆಗಳ ಉಸ್ತುವಾರಿ ವಹಿಸಿದ್ದಾರೆ.


