ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಅಭಿನಂದಿಸಿದ್ದಾರೆ.

ಮೈಸೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್‌ ಜಯಂತಿಯಲ್ಲಿ ಭಾಗವಹಿಸದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರನ್ನು ಸಂಸದ ಪ್ರತಾಪ್‌ ಸಿಂಹ ಅಭಿನಂದಿಸಿದ್ದಾರೆ. 

ಮೈಸೂರಿನಲ್ಲಿ ಭಾನುವಾರ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ, ಹಾಡಿ ಹೊಗಳಿದ್ದರು ಎಂದು ಕಿಡಿಕಾರಿದರು. 

ಟಿಪ್ಪು ಜಯಂತಿ ವಿರೋಧ ಪ್ರತಿಭಟನೆಯಲ್ಲಿ ತಾವು ಪಾಲ್ಗೊಳ್ಳದ ಬಗ್ಗೆ ಎದ್ದಿರುವ ಊಹಾಪೋಹ ಪ್ರಸ್ತಾಪಿಸಿದ ಅವರು, ದಸರಾ ಬೆನ್ನಲ್ಲೇ ದೀಪಾವಳಿ ಬಂತು, ನವರಾತ್ರಿ ಉಪವಾಸವಾದ್ದರಿಂದ ನನ್ನ ಮಗಳು ಅಜ್ಜಿ ಮನೆಗೆ ಹೋಗಬೇಕೆಂದು ಒತ್ತಾಯಿಸಿದಳು. 

ಅಪ್ಪನಾಗಿ ನನ್ನ ಕರ್ತವ್ಯ ಪಾಲಿಸಲು ಕರೆದುಕೊಂಡು ಹೋದೆ. ಅಲ್ಲಿ ಮೊಬೈಲ್‌ ನೆಟ್‌ವರ್ಕ್ ಕೂಡಾ ಇರಲಿಲ್ಲ. ದೀಪಾವಳಿ ಮರುದಿನ ಪ್ರತಿಭಟನೆ ಇದ್ದರಿಂದ ಅಲ್ಲಿಗೂ ಪಾಲ್ಗೊಳ್ಳಲಾಗಲಿಲ್ಲ. ಬೇರೆ ಯಾವುದೇ ಕಾರಣ ಇಲ್ಲ ಎಂದು ಸ್ಪಷ್ಪಪಡಿಸಿದರು.