ಸಾವರ್ಕರ್ ಉತ್ಸವವಾಗಿ ಗಣೇಶ ಉತ್ಸವ ಆಚರಣೆ: ಪ್ರಮೋದ್ ಮುತಾಲಿಕ್
ಈ ಬಾರಿಯ ಗಣೇಶೋತ್ಸವವನ್ನು ಸಾವರ್ಕರ್ ಉತ್ಸವ ಎಂದು ಆಚರಿಸಲು ನಿರ್ಧರಿಸಿದ್ದು, ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋ ಇಟ್ಟು ಪೂಜಿಸಲಾಗುತ್ತದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಬೆಂಗಳೂರು (ಆ.20): ಈ ಬಾರಿಯ ಗಣೇಶೋತ್ಸವವನ್ನು ಸಾವರ್ಕರ್ ಉತ್ಸವ ಎಂದು ಆಚರಿಸಲು ನಿರ್ಧರಿಸಿದ್ದು, ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋ ಇಟ್ಟು ಪೂಜಿಸಲಾಗುತ್ತದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸಾವರ್ಕರ್ ಅಪ್ರತಿಮ ದೇಶಭಕ್ತ. ಅತಿ ಹೆಚ್ಚು ವರ್ಷಗಳ ಕಾಲ ಜೈಲು ಶಿಕ್ಷೆ, ಅದರಲ್ಲೂ 11 ವರ್ಷದ ಕರಿನೀರಿನ ಶಿಕ್ಷೆಯನ್ನು ಅನುಭವಿಸಿದ್ದಾರೆ. ಅವರ ಬಗೆಗಿನ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದವರು ನಿಂದನೆ, ಅಪಮಾನ ಮಾಡುತ್ತಿದ್ದಾರೆ.
ಅಂಥವರಿಗೆ ಸಾವರ್ಕರ್ ಬಗ್ಗೆ ತಿಳಿಸಲು ಈ ಬಾರಿಯ ಗಣೇಶೋತ್ಸವವನ್ನು ಸಾವರ್ಕರ್ ಉತ್ಸವವಾಗಿ ಆಚರಿಸಲು ಶ್ರೀರಾಮ ಸೇನೆಯಿಂದ ನಿರ್ಧರಿಸಲಾಗಿದೆ. ಹಬ್ಬದಂದು ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋ ಇಟ್ಟು ಪೂಜಿಸಲಾಗುತ್ತದೆ. ಜತೆಗೆ ಅವರ ಕುರಿತ ವಿಚಾರ ಸಂಕಿರಣ, ನಾಟಕ, ಚಿತ್ರಕಲಾ ಪ್ರದರ್ಶನ, ಭಾಷಣ ಸ್ಪರ್ಧೆ, ಸಿನಿಮಾ ಪ್ರದರ್ಶನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ಮೂಲಕ ಪ್ರತಿ ಮನೆ ಮನೆಗೂ ಸಾವರ್ಕರ್ ಮಾಹಿತಿ ತಲುಪಿಸುತ್ತೇವೆ’ ಎಂದರು.
ಪ್ರವೀಣ್ ಕೊಲೆ ನಂತರವೂ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರ: ಪ್ರಮೋದ್ ಮುತಾಲಿಕ್
ಶ್ರೀರಾಮಸೇನೆಯಿಂದ ಬೆಂಗಳೂರಿನಲ್ಲಿ ಗಣೇಶೋತ್ಸವ ಆಯೋಜಕರನ್ನು ಸಂಪರ್ಕಿಸಿ ಎಲ್ಲರೂ ಸಾವರ್ಕರ್ ಉತ್ಸವ ಆಚರಿಸುವಂತೆ ಮನವಿ ಮಾಡಲಾಗುತ್ತದೆ. ಜತೆಗೆ ರಾಜ್ಯಾದ್ಯಂತ ಗಣೇಶೋತ್ಸವದೊಂದಿಗೆ ಸಾವರ್ಕರ್ ಉತ್ಸವ ಎಂಬ ಅಭಿಯಾನವನ್ನು ನಡೆಸಲಾಗುತ್ತದೆ. ಹಿಂದು ಸಂಘಟನೆಗಳು, ದೇಶಭಕ್ತ ಯುವಕ ಮಂಡಳಿಗಳು ಬೆಂಬಲ ನೀಡುತ್ತವೆ ಎಂದು ವಿಶ್ವಾಸವಿದೆ. ಇನ್ನು ಸಾವರ್ಕರ್ ನಿಂದನೆಯು ಇಡೀ ದೇಶದ ಭಾರತೀಯರಿಗೆ ಅವಮಾನ ಮಾಡಿದಂತೆ. ಚಿಂತಕ ಚಕ್ರವರ್ತಿ ಸೂಲಿಬೆಲೆಯವರು ಸಾವರ್ಕರ್ ಬಗ್ಗೆ ಪುಸ್ತಕ ಬರೆಯುತ್ತಿದ್ದು, ಅದರಲ್ಲಿ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ಮೈಕ್ ಹಾವಳಿ ವಿರುದ್ಧ ಪ್ರತಿಭಟನೆ: ಮಸೀದಿಗಳ ಮೇಲೆ ಮೈಕ್‌ಗಳ ಹಾವಳಿ ಹೆಚ್ಚಿದೆ. ಅದರಿಂದ ಉಂಟಾಗುವ ಶಬ್ದ ಮಾಲಿನ್ಯವನ್ನು ತಡೆಗಟ್ಟಬೇಕು ಎಂದು ನ್ಯಾಯಾಲಯವೇ ಸರ್ಕಾರಕ್ಕೆ ಸೂಚಿಸಿದೆ. ಆದರೆ, ಸರ್ಕಾರ ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಎಲ್ಲಾ ಹಿಂದೂಗಳು ಒಟ್ಟಾಗಿ ಆ.23 ರಂದು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್‌ಪಿ) ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಇದೇ ವೇಳೆ ಮುತಾಲಿಕ್ ಎಚ್ಚರಿಕೆ ನೀಡಿದರು.
ಹಿಂದೂಗಳ ಪರ ಹೋರಾಟ ಮಾಡಿದ್ದಕ್ಕೆ ನನ್ನ ಸ್ವಾತಂತ್ರ್ಯಹರಣ: ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದವು. ಆದರೆ, ಇದೇ ಸಂದರ್ಭದಲ್ಲಿ ಹಿಂದೂಗಳ ಪರವಾಗಿ ಹೋರಾಟ ಮಾಡಿದ್ದಕ್ಕೆ ನನ್ನ ಸ್ವಾತಂತ್ರ್ಯ ಹರಣವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬೇಸರ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 75ನೇ ಸ್ವಾತಂತ್ರ್ಯ ಸಂಭ್ರಮವಾಗಿ ನಡೆದರೂ ನನಗೆ ಮಾತ್ರ ಆ ಸ್ವಾತಂತ್ರ್ಯ ಇಲ್ಲವಾಗಿದೆ. ಗೋವಾ ಬಿಜೆಪಿ ಸರ್ಕಾರ ನನಗೆ ಎಂಟು ವರ್ಷದಿಂದ ನಿಷೇಧ ಮಾಡಿದೆ. ಎರಡು ದಿನಗಳ ಹಿಂದಷ್ಟೇ ನಿಷೇಧ ಮಾಡಿರುವ ಬಗ್ಗೆ ನೋಟಿಸ್ ಕಳುಹಿಸಲಾಗಿದೆ.
ತಾಕತ್ತಿದ್ದರೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಿಲ್ಲಿಸಿ: ಮುತಾಲಿಕ್
ಬರೀ ಗೋವಾ ಮಾತ್ರವಲ್ಲದೇ ರಾಜ್ಯದಲ್ಲೂ ಸ್ವತಂತ್ರವಾಗಿ ಸಂಚಾರ ಮಾಡುವ ಹಾಗಿಲ್ಲ. ಮಂಗಳೂರಿನ ಪ್ರವೀಣ ಕೊಲೆಯಾದಾಗ ಅವರ ಮನೆಗೆ ಹೋದಾಗಲೂ ಪ್ರವೇಶಕ್ಕೆ ನಿಷೇಧ ಮಾಡಿದರು. ಗದಗದಲ್ಲೂ ನಿಷೇಧ ಮಾಡಲಾಗಿದೆ. ಹಾಗೆಯೇ, ಇಡೀ ರಾಜ್ಯದಲ್ಲಿ ಎಲ್ಲೇ ಹೋದರೂ ನನ್ನ ಸ್ವಾತಂತ್ರ್ಯವನ್ನು ಪೊಲೀಸ್ ಇಲಾಖೆ ಕಸಿದುಕೊಂಡಿದೆ. ಸಂವಿಧಾನ ನನಗೆ ಮುಕ್ತವಾಗಿ ಜೀವಿಸುವ, ಮಾತನಾಡುವ, ಸಂಚಾರ ಮಾಡುವ ಸ್ವಾತಂತ್ರ್ಯ ನೀಡಿದರೂ ಪೊಲೀಸರು, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಮಾತ್ರ ನನ್ನ ಸ್ವಾತಂತ್ರ್ಯವನ್ನು ತಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.