ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆಯಾದ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟ್ ತೀರ್ಪಿಗೆ ತಲೆಬಾಗಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಚಿತ್ರದುರ್ಗ (ಆ.3): ಕೋರ್ಟ್ ತೀರ್ಪಿಗೆ ತಲೆಬಾಗಬೇಕು. ಯಾರೇ ಇದ್ದರೂ ತಲೆಬಾಗಬೇಕು. ಈ ತೀರ್ಪಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಯ ಅಗತ್ಯವಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸೆಷನ್ಸ್ ಕೋರ್ಟ್ ನಿನ್ನೆ ಜೀವಾವಧಿ ಶಿಕ್ಷೆಯ ತೀರ್ಪು ಪ್ರಕಟಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ಮಾತನಾಡಿದ ನಿಖಿಲ್, ಪ್ರಜ್ವಲ್ ರೇವಣ್ಣ ಅವರ ಮೇಲೆ ಆರೋಪ ಬಂದಾಗಲೇ ಜೆಡಿಎಸ್ ಪಕ್ಷದಿಂದ ಅವರನ್ನು ಅಮಾನತುಗೊಳಿಸಲಾಗಿತ್ತು. ಆಗಿನ್ನೂ ಅವರು ಅಪರಾಧಿಯೋ ಅಥವಾ ಅಲ್ಲವೋ ಎಂಬ ತೀರ್ಪು ಬಂದಿರಲಿಲ್ಲ. ಪಕ್ಷದ ವರಿಷ್ಠರ ತೀರ್ಮಾನದ ಸ್ಪಷ್ಟತೆಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು.
ಮುಂದುವರಿದು, ಈ ವಿಷಯದ ಬಗ್ಗೆ ಇದಕ್ಕಿಂತ ಹೆಚ್ಚಾಗಿ ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ ಎಂದ ನಿಖಿಲ್ ಕುಮಾರಸ್ವಾಮಿ ಅವರು, ಪ್ರಜ್ವಲ್ ರೇವಣ್ಣ ಅವರ ಅಮಾನತಿನ ತೀರ್ಮಾನವನ್ನು ಜೆಡಿಎಸ್ ವರಿಷ್ಠರು ಆರೋಪಗಳು ಬಂದ ಕೂಡಲೇ ಕೈಗೊಂಡಿದ್ದರು, ಇದು ಪಕ್ಷದ ನಿಲುವನ್ನು ಸ್ಪಷ್ಟಗೊಳಿಸಿತ್ತು ಎಂದರು
