Asianet Suvarna News Asianet Suvarna News

ಕೋಳಿ ಸಾಕಣೆ ವಾಣಿಜ್ಯ ಚಟುವಟಿಕೆ ಅಲ್ಲ, ತೆರಿಗೆ ವಿಧಿಸಲು ಗ್ರಾಪಂಚಾಯ್ತಿಗೆ ಅಧಿಕಾರವಿಲ್ಲ: ಹೈಕೋರ್ಟ್

ಕೋಳಿ ಸಾಕಾಣಿಕೆಯು (ಪೌಲ್ಟ್ರಿ ಫಾರಂ) ಕೃಷಿ ಚಟುವಟಿಕೆಯಾಗಿದ್ದು, ಅದನ್ನು ವಾಣಿಜ್ಯ ಚಟುವಟಿಕೆಯಾಗಿ ಪರಿಗಣಿಸಿ ಕರ್ನಾಟಕ ಗ್ರಾಮ ಸ್ವರಾಜ್​ ಕಾಯ್ದೆಯಡಿ ಯಾವುದೇ ರೀತಿಯ ತೆರಿಗೆ ವಿಧಿಸಲು ಗ್ರಾಮ ಪಂಚಾಯತಿ​ಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

Poultry farming is not a commercial activity sayss Karnataka highcourt at bengaluru rav
Author
First Published Sep 23, 2023, 12:47 PM IST

ಬೆಂಗಳೂರು (ಸೆ.23) :  ಕೋಳಿ ಸಾಕಾಣಿಕೆಯು (ಪೌಲ್ಟ್ರಿ ಫಾರಂ) ಕೃಷಿ ಚಟುವಟಿಕೆಯಾಗಿದ್ದು, ಅದನ್ನು ವಾಣಿಜ್ಯ ಚಟುವಟಿಕೆಯಾಗಿ ಪರಿಗಣಿಸಿ ಕರ್ನಾಟಕ ಗ್ರಾಮ ಸ್ವರಾಜ್​ ಕಾಯ್ದೆಯಡಿ ಯಾವುದೇ ರೀತಿಯ ತೆರಿಗೆ ವಿಧಿಸಲು ಗ್ರಾಮ ಪಂಚಾಯತಿ​ಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಕೃಷಿ ಜಮೀನಿನಲ್ಲಿ ನಿರ್ಮಿಸಿದ ಕೋಳಿ ಸಾಗಾಣೆ ಕೇಂದ್ರಕ್ಕೆ ತೆರಿಗೆ ಪಾವತಿಸಲು ಸೂಚಿಸಿ ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪ ಗ್ರಾಮ ಪಂಚಾಯತಿ ಜಾರಿಗೊಳಿಸಿದ್ದ ನೋಟಿಸ್‌ ಪ್ರಶ್ನಿಸಿ ಕೆ.ನರಸಿಂಹ ಮೂರ್ತಿ ಎಂಬುವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಮನೆ ಕೆಲ್ಸದ ಜವಾಬ್ದಾರಿ ಕಂಪ್ಲೀಟ್ ಹೆಂಡ್ತೀದೆ ಅನ್ನೋ ಮನಸ್ಥಿತಿ ಬಿಟ್ಬಿಡಿ; ಕೋರ್ಟ್ ಹೇಳಿದ್ದೇನು ನೋಡಿ

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜು ಅವರ ಪೀಠ, ಕೋಳಿ ಸಾಗಾಣಿಕೆಯು ಕೃಷಿ ಚಟುವಟಿಕೆಯಾಗಿದೆ. ಕೋಳಿ ಸಾಗಾಣಿಕೆ ಕೇಂದ್ರದ ಕಟ್ಟಡವನ್ನು ಕರ್ನಾಟಕ ಗ್ರಾಮ ಸ್ವರಾಜ್​ ಕಾಯ್ದೆ ಶೆಡ್ಯೂಲ್ಡ್‌ 4 ರ (ಎ)(2) ಅಡಿಯಲ್ಲಿ ವಾಣಿಜ್ಯ ಕಟ್ಟಡವನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಅವಕಾಶವಿಲ್ಲ. ಇನ್ನೂ ಕೃಷಿ ಜಮೀನಿನಲ್ಲಿ ಕೋಳಿ ಸಾಕಣಿಕೆ ಕೇಂದ್ರ ಕಟ್ಟಡ ನಿರ್ಮಿಸಿದ ನಂತರವೂ ಅದು ಕೃಷಿ ಭೂಮಿಯಾಗಿಯೇ ಮುಂದುವರೆಯಲಿದೆ. ಅದನ್ನು ವಾಣಿಜ್ಯ ಭೂಮಿಯಾಗಿ ಪರಿಗಣಿಸಿ ತೆರಿಗೆ ವಿಧಿಸಲು ಸಾಧ್ಯವಿಲ್ಲ. ಕೃಷಿ ಭೂಮಿಯನ್ನು ವಾಣಿಜ್ಯ ಬಳಕೆಗೆ ಪರಿವರ್ತಿಸುವ ಅಗತ್ಯವೂ ಇಲ್ಲ ಎಂದು ಆದೇಶಿಸಿದೆ.

ಅಲ್ಲದೆ, ಕೋಳಿ ಸಾಕಣಿಕೆಯು ವಾಣಿಜ್ಯ ಚಟುವಟಿಕೆಯಾಗಿದ್ದು, ಅದಕ್ಕಾಗಿ ನಿರ್ಮಿಸಿರುವ ಕಟ್ಟಡಕ್ಕೆ ವಿದ್ಯುತ್​ ಸಂಪರ್ಕ ಪಡೆಯುವುದಕ್ಕೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ವಿತರಿಸಲು 1.3 ಲಕ್ಷ ರು. ತೆರಿಗೆ ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿ ಗ್ರಾಮ ಪಂಚಾಯತಿ ಜಾರಿಗೊಳಿಸಿದ್ದ ನೋಟಿಸ್ ಅನ್ನು ಹೈಕೋರ್ಟ್‌ ಇದೇ ವೇಳೆ ರದ್ದುಪಡಿಸಿದೆ. ಹಾಗೆಯೇ, ಅರ್ಜಿದಾರರಿಂದ ಈಗಾಗಲೇ ತೆರಿಗೆ ರೂಪದಲ್ಲಿ ಸಂಗ್ರಹಿಸಿರುವ 59,551 ರು.ಗಳನ್ನು ಹಿಂದಿರುಗಿಸುವಂತೆ ಪಂಚಾಯತಿಗೆ ನಿರ್ದೇಶಿಸಿದೆ.

ಪ್ರಕರಣವೇನು?:

ಸೊಂಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಸಂದ್ರ ಗ್ರಾಮದ ನಿವಾಸಿ ಕೆ.ನರಸಿಂಹಮೂರ್ತಿ ನಾಲ್ಕು ಎಕರೆ ಜಮೀನು ಹೊಂದಿದ್ದಾರೆ. ಜಮೀನಿನ ಭಾಗದಲ್ಲಿ ಕೋಳಿ ಸಾಕಣೆ ಕೇಂದ್ರದ ಕಟ್ಟಡ ನಿರ್ಮಿಸಿದ್ದರು. ಅದಕ್ಕೆ ವಿದ್ಯುತ್​ ಸಂಪರ್ಕ ಪಡೆಯಲು ಎನ್‌ಒಸಿ ವಿತರಿಸುವಂತೆ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರು. ಪಂಚಾಯತ್​ ಅಧಿಕಾರಿಗಳು, ಕೋಳಿ ಸಾಗಾಣಿಕೆ ಕೇಂದ್ರವು ಕೈಗಾರಿಕೆ ವ್ಯಾಖ್ಯಾನದಡಿಗೆ ಬರಲಿದ್ದು, ಆ ಆಸ್ತಿಗೆ ತೆರಿಗೆ ಪಾವತಿಸಬೇಕಿದೆ. ಅದರಂತೆ ಎನ್‌ಒಸಿ ವಿತರಣೆ ವಿತರಿಸಬೇಕಾದರೆ 1,37,602 ರು. ತೆರಿಗೆ ಪಾವತಿಸುವಂತೆ ಸೂಚಿಸಿ ನೋಟಿಸ್​ ಜಾರಿಗೊಳಿಸಿತ್ತು. ಇದರಿಂದ ಅರ್ಜಿದಾರ 59,551 ರು. ಪಾವತಿಸಿದ್ದರು. 

ಹೈ ಸೆಕ್ಯೂರಿಟಿ ನಂಬರ್‌ಪ್ಲೇಟ್‌: ಸೆ.19ಕ್ಕೆ ಹೈಕೋರ್ಟ್‌ ವಿಚಾರಣೆ

ನಂತರ ಹೈನುಗಾರಿಕೆ ಮತ್ತು ಕೋಳಿ ಸಾಗಾಣಿಕೆಗೆ ಕೃಷಿ ಚಟುವಟಿಕೆಗಳಾಗಿದ್ದು, ಕೇಂದ್ರದ ಕಟ್ಟಡಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಮನಗಂಡು, ಗ್ರಾ.ಪಂ ಜಾರಿ ಮಾಡಿದ್ದ ನೋಟಿಸ್‌ ಅನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

Follow Us:
Download App:
  • android
  • ios