ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್: ಸಚಿವ ಪ್ರಿಯಾಂಕ್ ವಿರುದ್ಧ ಪೋಸ್ಟರ್ ವಾರ್!
ಕೊಲೆಗಡುಕ ಸರ್ಕಾರಕ್ಕೆ ಧಿಕ್ಕಾರ, ನೀತಿಗೆಟ್ಟ ಸರ್ಕಾರಕ್ಕೆ ಧಿಕ್ಕಾರ ಮೊದಲಾದ ಘೋಷಣೆ ಕೂಗಿ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಲಾಯಿತು. ಈ ವೇಳೆ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಲಾಯಿತಾದರೂ ಪೊಲೀಸರು ತಡೆದು ವಶಕ್ಕೆ ಪಡೆದರು.
ಬೆಂಗಳೂರು(ಜ.01): ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣವನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಸರ್ಕಾರ ವಿರುದ್ಧ ಮುಗಿಬಿದ್ದಿರುವ ಬಿಜೆಪಿ, ಇದೀಗ ತನ್ನ ಹೋರಾಟ ತೀವ್ರಗೊಳಿಸುತ್ತಿದೆ. ಸಚಿನ್ ಅವರು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತನೇ ತನ್ನ ಸಾವಿಗೆ ಕಾರಣ ಎಂದು ಆರೋಪಿಸಿ ಸಾವನ್ನಪ್ಪಿದ ಕಾರಣ, ಸಚಿವರ ವಿರುದ್ಧ 'ಪೋಸ್ಟರ್ ಆಂದೋಲನ' ನಡೆಸಿದೆ.
ಮಂಗಳವಾರ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ, ಎನ್.ರವಿಕುಮಾರ್ ಸೇರಿ ಬಿಜೆಪಿ ನಾಯಕರು, ಕಾರ್ಯಕರ್ತರು ಪೋಸ್ಟರ್ ಅಂಟಿಸುವ ಆಂದೋಲನ ನಡೆಸಿದರು. ರೇಸ್‌ಕೋರ್ಸ್ ರಸ್ತೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಸರ್ಕಾರಿ ನಿವಾಸ ಬಳಿಯ ಗೋಡೆಗಳ ಮೇಲೆ ಸಚಿವರ ವಿರುದ್ದ ಪೋಸ್ಟರ್ ಅಂಟಿಸಲಾಯಿತು. ಕೊಲೆಗಡುಕ ಸರ್ಕಾರಕ್ಕೆ ಧಿಕ್ಕಾರ, ನೀತಿಗೆಟ್ಟ ಸರ್ಕಾರಕ್ಕೆ ಧಿಕ್ಕಾರ ಮೊದಲಾದ ಘೋಷಣೆ ಕೂಗಿ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಲಾಯಿತು. ಈ ವೇಳೆ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಲಾಯಿತಾದರೂ ಪೊಲೀಸರು ತಡೆದು ವಶಕ್ಕೆ ಪಡೆದರು.
ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಪೊಲೀಸರ ವಾಹನಗಳಿಗೂ ಪೋಸ್ಟರ್ ಅಂಟಿಸಿದರು. ಆಗ ಪೊಲೀಸರು ಕಿತ್ತು ಬಿಸಾಕಿದಾಗ ವಾಕ್ಸಮರ ನಡೆದು ಮುಖಂಡರನ್ನು ಬಂಧಿಸಿ, ಬಿಡುಗಡೆ ಮಾಡಲಾಯಿತು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಯಾವ ಕಾರಣಕ್ಕಾಗಿ ಆಗಿದೆ ಎಂಬುದನ್ನು ತನಿಖೆ ಮಾಡುವವರು ಹೇಳಬೇಕಿದೆ. ಸುಪಾರಿ ಕೊಟ್ಟ ವಿಷಯ, ಹನಿಟ್ರ್ಯಾಪ್ ವಿಷಯವೂ ಇದರ ಜೊತೆಗಿದ್ದು, ಇದು ಗಂಭೀರ ಸ್ವರೂಪದ್ದಾಗಿದೆ. ಸುಪಾರಿ ಯಲ್ಲಿ ಮಹಾರಾಷ್ಟ್ರದ ಸೊಲ್ಲಾಪುರದವರ ಹೆಸರುಗಳಿವೆ. ಇದು ಅಂತರ್ ರಾಜ್ಯ ವಿಚಾರವಾಗಿರುವ ಕಾರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸಿ.ಟಿ.ರವಿ ಮಾತನಾಡಿ, ರಾಜ್ಯದಲ್ಲಿ ಪ್ರಯೋಜಿತ ಆತ್ಮಹತ್ಯೆಗಳು ನಡೆಯುತ್ತಿವೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕಣ್ಮುಚ್ಚಿ ಕುಳಿತಿದ್ದಾರೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆದುಕೊಳ್ಳಬೇಕು. ಘಟನೆಗೆ ನೇರವಾಗಿ ಕಾರಣವಾಗಿರುವ ರಾಜು ಕಪನೂರು ಅವರನ್ನು ಬಂಧಿಸಬೇಕು. ಸಾಯುವ ಮುನ್ನ ಸಚಿನ್ ಮರಣ ಪತ್ರ ಬರೆದಿದ್ದು, ಅದರಲ್ಲಿ ಹಲವು ವಿಷಯಗಳ ಬಗ್ಗೆ ಉಲ್ಲೇಖ ಇದೆ. ಹೀಗಾಗಿ ಸಚಿವರರಾಜೀನಾಮೆ ಕೇಳಲಾಗುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
ಪುರಾವೆ ಕೊಡಿ: ಪ್ರಿಯಾಂಕ್ ಕಿಡಿ
ಬೆಂಗಳೂರು: ಪ್ರತಿಪಕ್ಷ ಬಿಜೆಪಿ ನಾಯಕರು ನನ್ನ ವಿರುದ್ದ ಯಾವ ಚಳವಳಿ, ಆಂದೋಲನವನ್ನಾದರೂ ಮಾಡಿಕೊಳ್ಳಲಿ. ಆದರೆ ನಾನು ಕೇಳುವುದು ಒಂದೇ, ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿನನ್ನ ವಿರುದ್ಧಮಾಡುತ್ತಿರುವ ಆರೋಪಕ್ಕೆ ದಾಖಲೆ ಇಟ್ಟು ಮಾತನಾಡಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಮೂರ್ನಾಲ್ಕು ದಿನಗಳಿಂದ ಹೇಳಿದ್ದನ್ನೇ ಹೇಳುತ್ತಿದ್ದಾರೆ. ಏನಾ ದರೂ ಸಾಕ್ಷ್ಯ ಕೊಟ್ಟಿದ್ದಾರಾ? ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹಸ್ತಕ್ಷೇಪ ಏನಿದೆ ಅಂತ ಹೇಳಲಿ. ಸಾಕ್ಷ್ಯ ನೀಡಲಿ ಎಂದರು.
ಜನ ನಂಬಲ್ಲ:
ಸಚಿವರ ಆಪ್ತ ಭಾಗಿಯಾಗಿರಬಹುದು ಎಂದು ಹೇಳುತ್ತಿದ್ದಾರೆ. ಫೋಟೋ ರಿಲೀಸ್ ಮಾಡುತ್ತಾರೆ. ಯಾರ್ಯಾರ ಆಪ್ತರುಏನೇನುಮಾಡಿದ್ದಾರೆ? ಯಡಿಯೂರಪ್ಪ ಆಪ್ತರು, ವಿಜಯೇಂದ್ರ ಆಪ್ತರು ಏನು ಮಾಡಿ ದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಆರ್.ಅಶೋಕ್ ಯಾರ ಜೊತೆ ಇದ್ದ ಫೋಟೋ ಬಂದಿತ್ತು. ಸ್ಯಾಂಟ್ರೋ ರವಿ, ಸೈಲೆಂಟ್ ಸುನಿಲ್ ಎಲ್ಲರನ್ನೂ ಮರೆತಿದ್ದರೆ ಬಿಜೆಪಿಯವರು ಈಗ ನೆನಪು ಮಾಡಿಕೊಳ್ಳಲಿ. ಸಾಕ್ಷ್ಯ ನೀಡಿದರೆ, ಉತ್ತರ ಕೊಡ ಬಹುದು. ನಾವು ಸುಮ್ಮನಿರಲ್ಲ ಅಂತ ಹೇಳಿಕೊಂ ಡು ದಿನ ಬೆಳಗಾ ದರೆ ಪ್ರಿಯಾಂಕ್ ಖರ್ಗೆ ಜಪ ಮಾಡಿದರೆ ಜನ ನಂಬುತ್ತಾರೆ ಎಂದುಕೊಂಡಿದ್ದರೆ ಅದು ಅವರ ಭ್ರಮೆ ಎಂದರು. ಸಚಿನ್ ಪಾಂಚಾಳ ಅವರ ಮನೆಗೆ ಭೇಟಿ ನೀಡುವ ಕುರಿತ ಪ್ರಶ್ನೆಗೆ, ತಮಗಾಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕೆಂ ದು ಅವರ ಕುಟುಂಬದವರು ಕೇಳಿದ್ದಾರೆ. ಆ ಕುಟುಂಬಕ್ಕೆ ನ್ಯಾಯ ಕೊಡಿಸುವುದಕ್ಕೆ ನಾವು ಬದ್ಧ ಎಂದರು.