ರಾಜ್ಯದಲ್ಲಿ ಜನಸಂಖ್ಯೆ ಇಳಿಸುವ ಬದಲು ಹೆಚ್ಚಿಸಿ!
ರಾಷ್ಟ್ರೀಯ ಜನಸಂಖ್ಯಾ ನೀತಿ 2000ರ ಉದ್ದೇಶಿತ ಸಮುದಾಯದ ಒಟ್ಟಾರೆ ಫಲವಂತಿಕೆ ದರ 2.1ರ (ಟೋಟಲ್ ಫರ್ಟಿಲಿಟಿ ರೇಟ್-ಟಿಎಫ್‌ಆರ್) ಗುರಿಯನ್ನು ಕರ್ನಾಟಕ ಈಗಾಗಲೇ ತಲುಪಿದೆ. ಅಷ್ಟೇ ಅಲ್ಲ, 2017ಕ್ಕೇ ನಮ್ಮ ರಾಜ್ಯದ ಟಿಎಫ್‌ಆರ್ ದರ 1.7ಕ್ಕೆ ಕುಸಿದಿದೆ. ರಾಜ್ಯದ ಜನಸಂಖ್ಯೆಯನ್ನು 2.1ರ ಟಿಎಫ್‌ಆರ್‌ಗೆ ಸರಿದೂಗಿಸುವ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕಿದೆ ಎನ್ನುತ್ತವೆ ಕನ್ನಡಪರ ಸಂಘಟನೆಗಳು, ನಾಡಿನ ಸಾಮಾಜಿಕ ಕಾರ್ಯಕರ್ತರು.
ಬೆಂಗಳೂರು(ನ.03): ಹಿಂದಿ ಭಾಷಿಕ ರಾಜ್ಯಗಳ ಜನಸಂಖ್ಯಾ ಸ್ಫೋಟ ಹಾಗೂ ಕನ್ನಡಿಗರ ಸಂತತಿ ಕಡಿಮೆಯಾಗುವ ಮೂಲಕ ಕರ್ನಾಟಕಕ್ಕೆ ವಲಸಿಗರ ಸಂಖ್ಯೆ ಹೆಚ್ಚಾಗಿ ರಾಜ್ಯದಲ್ಲಿ ಕನ್ನಡ ಕುಲಕೋಟಿಯೇ ಅಲ್ಪಸಂಖ್ಯಾತರಾಗುವ ಆತಂಕದಿಂದ ಪಾರಾಗಲು ದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಪ್ರಸ್ತುತ ಜಾರಿಯಲ್ಲಿರುವ ಎಲ್ಲ ಕಾರ್ಯಕ್ರಮಗಳಿಂದ ಕರ್ನಾಟಕಕ್ಕೆ ಸಂಪೂರ್ಣ ವಿನಾಯಿತಿ ಸಿಗಬೇಕು, ಮೂರನೇ ಮಗುವಿನ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು.
ರಾಷ್ಟ್ರೀಯ ಜನಸಂಖ್ಯಾ ನೀತಿ 2000ರ ಉದ್ದೇಶಿತ ಸಮುದಾಯದ ಒಟ್ಟಾರೆ ಫಲವಂತಿಕೆ ದರ 2.1ರ (ಟೋಟಲ್ ಫರ್ಟಿಲಿಟಿ ರೇಟ್-ಟಿಎಫ್‌ಆರ್) ಗುರಿಯನ್ನು ಕರ್ನಾಟಕ ಈಗಾಗಲೇ ತಲುಪಿದೆ. ಅಷ್ಟೇ ಅಲ್ಲ, 2017ಕ್ಕೇ ನಮ್ಮ ರಾಜ್ಯದ ಟಿಎಫ್‌ಆರ್ ದರ 1.7ಕ್ಕೆ ಕುಸಿದಿದೆ. ಅಂದರೆ ಒಂದು ಹೆಣ್ಣಿಗೆ ಸರಾಸರಿ ಇಬ್ಬರು ಮಕ್ಕಳೂ ಇಲ್ಲದಂತಾಗಿದ್ದು, ರಾಜ್ಯದ ಜನಸಂಖ್ಯೆಯನ್ನು 2.1ರ ಟಿಎಫ್‌ಆರ್‌ಗೆ ಸರಿದೂಗಿಸುವ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕಿದೆ.
ಅತಿವೃಷ್ಟಿಯಿಂದ ಹಿಂಗಾರು ಕೃಷಿಗೆ ಭಾರೀ ಹೊಡೆತ
ಆ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿ, ಇದುವರೆಗೆ ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಪ್ರತಿ ವರ್ಷ ವೆಚ್ಚ ಮಾಡುತ್ತಿರುವ ಕೋಟ್ಯಂತರ ಹಣವನ್ನು ಟಿಫ್‌ಆರ್‌ಎಫ್ ದರವನ್ನು 2.1ಕ್ಕೆ ಹೆಚ್ಚಿಸಲು ಬಳಸಬೇಕಾಗಿದೆ. ಇದಕ್ಕಾಗಿ ಜಪಾನ್, ಸ್ವೀಡನ್, ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳಲ್ಲಿ ಅನುಸರಿಸುತ್ತಿರುವಂತೆ ಪ್ರತಿ ದಂಪತಿಯ ಮೂರನೇ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ಹೊರುವಂತಹ ಕಾರ್ಯಕ್ರಮ ಜರೂರಾಗಿ ಜಾರಿಯಾಗಬೇಕು. ರಾಜ್ಯ ಸರ್ಕಾರ ಇದೆಲ್ಲವನ್ನೂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಕನ್ನಡಿಗರ ಅಸ್ತಿತ್ವ ಉಳಿಸಲು ಕಾರ್ಯಪ್ರವೃತ್ತವಾಗಬೇಕು ಎನ್ನುತ್ತವೆ ಕನ್ನಡಪರ ಸಂಘಟನೆಗಳು, ನಾಡಿನ ಸಾಮಾಜಿಕ ಕಾರ್ಯಕರ್ತರು.
ಹೌದು, 90ರ ದಶಕದ ಜನಸಂಖ್ಯಾ ಸ್ಫೋಟದ ಹೆಸರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳನ್ನು ಈಗಾಗಲೇ ಹಲವು ವರ್ಷಗಳಿಂದ ಜನಸಂಖ್ಯೆ ನಿಯಂತ್ರಣದಲ್ಲಿಟ್ಟುಕೊಂಡು ಬರುತ್ತಿರುವ ಕರ್ನಾಟಕದಂತಹ ರಾಜ್ಯಗಳ ಮೇಲೆ ಮುಂದುವರೆಸಿಕೊಂಡು ಬರುತ್ತಿದೆ. ಇದು ಕನ್ನಡಿಗರು ಸೇರಿದಂತೆ ಜನಸಂಖ್ಯಾ ನಿಯಂತ್ರಣದಲ್ಲಿ ಉದ್ದೇಶಿತ ಗುರಿ ಸಾಧಿಸಿರುವ ಪ್ರಾದೇಶಿಕ ಸಮುದಾಯಗಳ ಅಸ್ತಿತ್ವವನ್ನೇ ಭವಿಷ್ಯದಲ್ಲಿ ನಾಶಮಾಡುವ ಆತಂಕ ಸೃಷ್ಟಿಸಿದೆ. ಹಾಗಾಗಿ ರಾಜ್ಯದಲ್ಲಿ ಇನ್ನು ಮುಂದೆ ಜನಸಂಖ್ಯಾ ನಿಯಂತ್ರಣಕ್ಕೆ ಇರುವ ಕಾರ್ಯಕ್ರಮಗಳನ್ನು ಕೈಬಿಟ್ಟು ರಾಜ್ಯದ ಟಿಎಫ್‌ಆರ್ ದರ 2.1ಗೆ ಏರುವಂತೆ ಹಾಗೂ ಅದೇ ಮಟ್ಟದಲ್ಲಿ ಸ್ಥಿರವಾಗಿರುವಂತೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರಗಳು ಗಮನ ಹರಿಸುವಂತೆ ಕನ್ನಡಪರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಜನಸಂಖ್ಯೆ ನಿಯಂತ್ರಣಕ್ಕೆ ನೂರಾರು ಕೋಟಿ ವ್ಯಯ:
ಕರ್ನಾಟಕ 2010ರಿಂದಲೇ ಜನಸಂಖ್ಯೆ ನಿಯಂತ್ರಣ ಸಾಧಿಸಿದೆ (ಟಿಆರ್‌ಎಫ್ 2.1). 2017ರ ಹೊತ್ತಿಗೆ ರಾಜ್ಯದ ಟಿಎಫ್‌ಆರ್ 1.7ಕ್ಕೆ ಕುಸಿದಿದೆ. ಅಂದರೆ, ಪ್ರತಿ ದಂಪತಿಗೆ ಕನಿಷ್ಠ ಸರಾಸರಿ ಎರಡು ಮಕ್ಕಳೂ ಇಲ್ಲ. ಹಾಗಾಗಿ ಕರ್ನಾಟಕದಲ್ಲಿ ಜನಸಂಖ್ಯಾ ನಿಯಂತ್ರಣದ ಅವಶ್ಯಕತೆಯೇ ಇಲ್ಲ. ಆದರೂ, ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಾಗೂ ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ಜನಸಂಖ್ಯಾ ನಿಯಂತ್ರಣ ಮಾಡುತ್ತಲೇ ಬಂದಿವೆ. ಇದಕ್ಕಾಗಿ ಕಳೆದ ಐದು ವರ್ಷಗಳಲ್ಲಿ ಸುಮಾರು 150 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಲಭ್ಯ ಅಂಕಿ ಅಂಶಗಳ ಪ್ರಕಾರ, 2013-14ರಲ್ಲಿ 29 ಕೋಟಿ ರು., 2014-15ರಲ್ಲಿ 27 ಕೋಟಿ ರು., 2015-16ರಲ್ಲಿ 26 ಕೋಟಿ ರು. ವ್ಯಯ ಮಾಡಲಾಗಿದೆ. ಇನ್ನು ಕಳೆದ ಎರಡು ವರ್ಷಗಳಲ್ಲಿ ಕೂಡ ಸಂತಾನಹರಣ ಶಸ್ತ್ರಚಿಕಿತ್ಸೆ, ಗರ್ಭ ನಿರೋಧಕ ಸಾಧನ ಅಳವಡಿಕೆ ಸೇರಿದಂತೆ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಾಗೂ ಈ ಕಾರ್ಯಕ್ರಮಗಳಿಗೆ ಒಳಗಾಗುವವರಿಗೆ ನೀಡುವ ಪ್ರೋತ್ಸಾಹ ಧನ ನೀಡಲು ತಲಾ ಸುಮಾರು 25 ಕೋಟಿ ರು.ಗೂ ಹೆಚ್ಚು ಅನುದಾನ ಖರ್ಚು ಮಾಡಲಾಗಿದೆ ಎನ್ನುತ್ತವೆ ಆರೋಗ್ಯ ಇಲಾಖೆ ಮೂಲಗಳು.
ಜನಸಂಖ್ಯೆ ನಿಯಂತ್ರಣಕ್ಕೆ ಇನ್ನಷ್ಟುಕಾರ್ಯಕ್ರಮ:
ಈ ಮಧ್ಯೆ, ಜನಸಂಖ್ಯೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಇನ್ನಷ್ಟುಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಹರ್ಯಾಣದಂತಹ ಕೆಲ ರಾಜ್ಯಗಳಲ್ಲಿ ಈಗಾಗಲೇ ಇರುವ ಮೂರು ಮಕ್ಕಳಿರುವವರಿಗೆ ಯಾವುದೇ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವ ನಿಯಮವನ್ನು ಇತರೆ ರಾಜ್ಯಗಳಿಗೂ ವಿಸ್ತರಿಸುವ ಆಲೋಚನೆಯಲ್ಲಿದೆ ಎನ್ನಲಾಗುತ್ತಿದೆ.
3 ಬಂಗುಡೆಗೆ ನೂರು ರೂ.; ಚಂಡಮಾರುತದ ಎಫೆಕ್ಟ್‌ಗೆ ಮೀನು ದುಬಾರಿ
ಹಾಗಾಗಿ, ಈಗಾಗಲೇ ರಾಷ್ಟ್ರೀಯ ಜನಸಂಖ್ಯಾ ನೀತಿ ಪ್ರಕಾರ, ಜನಸಂಖ್ಯೆ ನಿಯಂತ್ರಣದಲ್ಲಿ ಗುರಿ ಸಾಧಿಸಿ, ಟಿಎಫ್‌ಆರ್ ಕುಸಿತವಾಗುತ್ತಿರುವ ಕರ್ನಾಟಕ (1.7), ಕೇರಳ (1.7), ತೆಲಂಗಾಣ (1.7), ಪಶ್ಚಿಮ ಬಂಗಾಳ (1.6) ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ಇನ್ನುಮುಂದೆ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳನ್ನು ಕೈಬಿಟ್ಟು, ಅಲ್ಲಿನ ಪ್ರಾದೇಶಿಕ ಜನರ ಅಸ್ತಿತ್ವ ಕಾಪಾಡಲು ಜನಸಂಖ್ಯೆಯಲ್ಲಿ ಸ್ಥಿರತೆ ಕಾಪಾಡಲು ನಿಗದಿತ ಫಲವಂತಿಕೆ ದರ 2.1ರ ಮಟ್ಟಕ್ಕೆ ಹೆಚ್ಚಿಸಿ ಅದೇ ಹಂತದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದಕ್ಕೆ ಅಗತ್ಯ ಅನುದಾನ ಒದಗಿಸಬೇಕು. ಜತೆಗೆ ಇಂತಹ ರಾಜ್ಯಗಳಲ್ಲಿ ಮೂರನೇ ಮಕ್ಕಳ ಜವಾಬ್ದಾರಿಯನ್ನು ಸರ್ಕಾರವೇ ಪೂರ್ಣ ಹೊರುವುದು, ಮೂರನೇ ಮಕ್ಕಳಿಗೂ ವಿಮಾ ಸೌಲಭ್ಯ ದೊರೆಯುವಂತಹ ಕಾನೂನು ಜಾರಿಗೆ ತರಬೇಕು ಎನ್ನುತ್ತಾರೆ ತಜ್ಞರು.
ಆರೇಳು ರಾಜ್ಯಗಳಲ್ಲಿ ಶೇ.50ರಷ್ಟುಜನಸಂಖ್ಯೆ:
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಜನಸಂಖ್ಯೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ನಿಜ. ಆದರೆ, 2011ರ ಜನಗಣತಿ ಪ್ರಕಾರ ದೇಶದ 121 ಕೋಟಿ ಜನಸಂಖ್ಯೆಯಲ್ಲಿ ಹಿಂದಿ ಭಾಷಿಕ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಆರೇಳು ರಾಜ್ಯಗಳೇ ದೇಶದ ಶೇ.50ರಷ್ಟುಅಂದರೆ ಸುಮಾರು 60 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿವೆ. ಉಳಿದ ಜನಸಂಖ್ಯೆ ಇನ್ನುಳಿದ 23 ರಾಜ್ಯಗಳದ್ದು. ಅಲ್ಲದೆ, ಈ ರಾಜ್ಯಗಳು ದೇಶದ ಒಟ್ಟಾರೆ ಟಿಎಫ್‌ಆರ್ ದರ 2.2ಕ್ಕಿಂತ ಮೇಲಿವೆ. ಉತ್ತರ ಪ್ರದೇಶ 3.0, ಬಿಹಾರ 3.2, ಮಧ್ಯಪ್ರದೇಶ 2.7, ರಾಜಸ್ಥಾನ 2.6 ಟಿಎಫ್‌ಆರ್ ದರ ಹೊಂದಿವೆ.
ದೇಶದ ಒಟ್ಟು ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು 6.10 ಕೋಟಿ (ಶೇ.5.05) ಮಾತ್ರ. ಅಲ್ಲದೆ, 2001 ಮತ್ತು 2011ರ ಜನಸಂಖ್ಯೆ ಹೆಚ್ಚಳಕ್ಕೆ ಹೋಲಿಸಿದರೆ ಹಿಂದಿ ಭಾಷಿಕ ಆರೇಳು ರಾಜ್ಯಗಳಲ್ಲಿ ಶೇ.20ರಿಂದ 25ರಷ್ಟುಜನಸಂಖ್ಯೆ ಹೆಚ್ಚಾಗಿದೆ. ಇನ್ನುಳಿದ ರಾಜ್ಯಗಳ ಪೈಕಿ ಅತಿ ಕಡಿಮೆ ಏರಿಕೆಯಾಗಿದೆ. ಉದಾ: ಕೇರಳದಲ್ಲಿ ಶೇ.4ರಿಂದ ಶೇ.15, 16ಕ್ಕೆ ಹೆಚ್ಚಿದೆ. ದೇಶದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆದಿರುವ ಉತ್ತರ ಭಾರತೀಯರ ತುಷ್ಟೀಕರಣ ಹಾಗೂ ಹಿಂದಿ ಭಾಷಿಕ ರಾಜ್ಯಗಳಲ್ಲಿನ ಜನಸಂಖ್ಯಾ ಸ್ಫೋಟ ಈಗಾಗಲೇ ಕಾಡುತ್ತಿರುವ ವಲಸಿಗರ ಸಂಖ್ಯೆಯನ್ನು ಮತ್ತಷ್ಟುಹೆಚ್ಚಿಸಿ ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಅಪಾಯವನ್ನು ತಂದೊಡ್ಡಲಿದೆ.
ಏನಿದು ‘ಟಿಎಫ್‌ಆರ್’?
ಟೋಟಲ್ ಫರ್ಟಿಲಿಟಿ ರೇಟ್ ಅಥವಾ ಒಟ್ಟು ಫಲವಂತಿಕೆ ಪ್ರಮಾಣ (ಟಿಎಫ್‌ಆರ್) ಒಬ್ಬ ಹೆಣ್ಣಿಗೆ ಜೀವಿತಾವಧಿಯಲ್ಲಿ ಎಷ್ಟುಮಕ್ಕಳು ಜನಿಸುತ್ತಾರೆ ಎಂಬುದರ ಪ್ರಮಾಣ ದರ. ವಿಶ್ವದ ಜನಸಂಖ್ಯೆ ನಿಯಂತ್ರಣದಲ್ಲಿದ್ದು ಯಥಾಸ್ಥಿತಿಯಲ್ಲಿರಲು 2.1ರಷ್ಟುಟಿಎಫ್‌ಆರ್ ಕಡ್ಡಾಯಗೊಳಿಸಲು ವಿಶ್ವಸಂಸ್ಥೆಯ ಮೂಲಕ ಎಲ್ಲ ದೇಶಗಳು ಒಪ್ಪಿವೆ. ಒಂದು ಹೆಣ್ಣು ಇಬ್ಬರು ಮಕ್ಕಳಿಗೆ (2.0) ಜನ್ಮ ನೀಡಿದರೆ ತನ್ನ ಗಂಡ ಹಾಗೂ ಹೆಂಡತಿಯ ಸ್ಥಾನಗಳನ್ನು ಇಬ್ಬರು ಮಕ್ಕಳು ತುಂಬುತ್ತಾರೆ. ಆಗ ಜನಸಂಖ್ಯೆ ಯಥಾಸ್ಥಿತಿಯಲ್ಲಿರುತ್ತದೆ. ಆದರೆ, ತಡವಾಗಿ ಮದುವೆಯಾಗುವುದು, ನವಜಾತ ಶಿಶು ಮರಣ, ಮಕ್ಕಳ ಅಕಾಲಿಕ ಮರಣ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಟಿಎಫ್‌ಆರ್ ದರವನ್ನು 2.0 ರ ಬದಲಿಗೆ 2.1ಕ್ಕೆ ನಿಗದಿ ಮಾಡಲಾಗಿದೆ. ಹೀಗಾಗಿ ಕನ್ನಡಿಗರ ಜನಸಂಖ್ಯೆ ಈಗ ಇರುವಷ್ಟೇ ಪ್ರಮಾಣದಲ್ಲಿ ಮುಂದುವರೆಯಬೇಕು ಎಂದರೆ ನಮ್ಮ ಟಿಎಫ್‌ಆರ್ ದರವೂ ಸಹ 2.1 ಇರಬೇಕು. ಆದರೆ, ರಾಜ್ಯದ ಟಿಎಫ್‌ಆರ್ 2017ರ ವೇಳೆಗೆ 1.7ಕ್ಕೆ ಕುಸಿದಿದೆ.
ಕನ್ನಡಿಗರ ಭವಿಷ್ಯದ ದೃಷ್ಟಿಯಿಂದ ಕನ್ನಡ ಕುಲ ಕೋಟಿ ನಶಿಸದಂತೆ ಕಾಪಾಡಲು ಇನ್ನು ಮುಂದೆ ಕರ್ನಾಟಕದಲ್ಲಿ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಹೇರಬಾರದು. ಬದಲಿಗೆ ರಾಜ್ಯದ ಟಿಎಫ್‌ಆರನ್ನು 2.1ಕ್ಕೆ ಹೆಚ್ಚಿಸಿ ಅದೇ ಹಂತದಲ್ಲಿ ಮುಂದುವರೆಸಿಕೊಂಡು ಹೋಗಲು ಕಾರ್ಯಕ್ರಮಗಳನ್ನು ಸರ್ಕಾರಗಳು ಜಾರಿಗೆ ತರಬೇಕು ಎಂದು ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ತಿಳಿಸಿದ್ದಾರೆ.
ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯಾ ನಿಯಂತ್ರಣ ಅಗತ್ಯಕ್ಕಿಂತ ಹೆಚ್ಚು ಕುಸಿಯುತ್ತಿರುವುದು ಹಾಗೂ ಉತ್ತರದ ರಾಜ್ಯಗಳಲ್ಲಿ ನಿಯಂತ್ರಣವಾಗದೆ ಹೆಚ್ಚಾಗುತ್ತಿರುವುದು ಎರಡೂ ಆತಂಕದ ವಿಚಾರಗಳು. ಇದು ಭವಿಷ್ಯದಲ್ಲಿ ಉತ್ತರದಿಂದ ದಕ್ಷಿಣಕ್ಕೆ ವಲಸೆಯನ್ನು ಹೆಚ್ಚಿಸಲಿದ್ದು, ಅಶಾಂತಿ ಸೃಷ್ಟಿಗೆ ಕಾರಣವಾಗಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ - ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
-ಲಿಂಗರಾಜು ಕೋರಾ