ಕೆಜಿಎಫ್‌: ದೇವಾಲಯದ ಹಕ್ಕಿಗಾಗಿ ಧರ್ಮಾಧಿಕಾರಿ ಹಾಗೂ ಕಾರ್ಯದರ್ಶಿ ನಡುವಿನ ಹಗ್ಗಜಗ್ಗಾಟದಿಂದ ಪ್ರಸಿದ್ಧ ಯಾತ್ರಾಸ್ಥಳ ಕೋಟಿ ಲಿಂಗೇಶ್ವರ ದೇಗುಲದಲ್ಲಿ ಪೂಜೆ ನಿಲ್ಲಿಸಿದ ಘಟನೆ ನಡೆದಿದೆ. ದೇವಸ್ಥಾನದ ಸ್ಥಾಪಕರಾದ ಸಾಂಬಶಿವಸ್ವಾಮೀಜಿ ನಿಧನರಾದ ಬಳಿಕ ಅವರ ಪುತ್ರ ಡಾ. ಶಿವಪ್ರಸಾದ್‌ ಧರ್ಮಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದರು. 

ಈ ನಡುವೆ ದೇಗುಲದ ಕಾರ್ಯದರ್ಶಿ ಕೆ.ವಿ.ಕುಮಾರಿ ಎಂಬುವರು ಸಹ ದೇವಸ್ಥಾನದ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ್ದು, ಇಬ್ಬರ ನಡುವೆ ವಿವಾದ ತಾರಕ್ಕೇರಿತ್ತು ಎನ್ನಲಾಗಿದೆ. ಬುಧವಾರ ಬೆಳಗ್ಗೆ ದೇವಾಲಯಕ್ಕೆ ಆಗಮಿಸಿದ ಕಾರ್ಯದರ್ಶ ಕುಮಾರಿ, ಇಂದು ಸಾಂಬಶಿವ ಸ್ವಾಮೀಜಿಗಳು ವಿಧಿವಶರಾದ 48ನೇ ದಿನವಾಗಿದ್ದು, ಭಕ್ತರೆಲ್ಲರಿಗೂ ಉಚಿತ ಪ್ರವೇಶ ನೀಡಬೇಕೆಂದು ಟಿಕೆಟ್‌ ವಿತರಣೆ ಮಾಡುವುದನ್ನು ನಿಲ್ಲಿಸಿದರು. 

ಈ ಸುದ್ದಿ ತಿಳಿಯುತ್ತಿದ್ದಂತೆ ಧರ್ಮಾಧಿಕಾರಿ ಡಾ.ಶಿವಪ್ರಸಾದ್‌ ಸ್ಥಳಕ್ಕಾಗಮಿಸಿದ್ದು, ಅರ್ಚಕರೊಂದಿಗೆ ಚರ್ಚೆ ನಡೆಸಿದರು. ಬಳಿಕ ಅರ್ಚಕರು ಹಾಗೂ ಕಮ್ಮಸಂದ್ರ ಗ್ರಾಮದ ನೂರಾರು ಮಂದಿ ಶಿವಪ್ರಸಾದ್‌ ಅವರೊಡಗೂಡಿ ಬೇತಮಂಗಲದವರೆಗೂ ಕಾಲ್ನಡಿಗೆ ಜಾಥಾ ನಡೆಸಿದರು. ತದನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ದೂರು ಸಲ್ಲಿಸಿದರು. ನಾನು ಯಾವುದೇ ತಪ್ಪು ಎಸಗಿಲ್ಲ ಎಂದು ಇದೇ ವೇಳೆ ಕುಮಾರಿ ಸ್ಪಷ್ಟನೆ ನೀಡಿದ್ದಾರೆ.