ಬೆಂಗಳೂರು(ಜ.18): ರಜೆ ಸಿಗದ ಕಾರಣಕ್ಕೆ ಮನನೊಂದು ಸೈನಿಕರು, ಪೊಲೀಸರು ಅದೆಷ್ಟೋ ಬಾರಿ ತಮ್ಮ ಸಹೋದ್ಯೋಗಿಗಳ ಮೇಲೆ, ಹಿರಿಯ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ತಾವೂ ಆತ್ಮಹತ್ಯೆಗೆ ಶರಣಾದ ಹಲವಾರು ಘಟನೆಗಳು ನಮ್ಮ ಕಣ್ಣ ಮುಂದಿವೆ.

ಅಂತದ್ದರಲ್ಲಿ ಇಲ್ಲೋರ್ವ ಪೊಲೀಸ್ ಪೇದೆ ತಾನು ಮದುವೆಯಾದ ಕಾರಣ ಒಳ್ಳೆಯ ಮೂಡ್ ನಲ್ಲಿದ್ದು, ಕನಿಷ್ಟ 10 ದಿನವಾದರೂ ರಜೆ ಕರುಣಿಸಿ ಎಂದು ತನ್ನ ಹಿರಿಯ ಅಧಿಕಾರಿಗೆ ಮನವಿ ಪತ್ರ ಬರದು ಸುದ್ದಿಯಾಗಿದ್ದಾನೆ.

ಇಲ್ಲಿನ ಬೇಗೂರು ಪೊಲೀಸ್ ಠಾಣೆಯ ಪೇದೆ ಮಾರುತಿ ಹೆಚ್‌.ಬಿ ಎಂಬಾತ ತನ್ನ ಇನ್ಸಪೆಕ್ಟರ್ ಅವರಿಗೆ ಪತ್ರ ಬರೆದಿದ್ದು, ತಾನು ಈಗಷ್ಟೇ ಮದುವೆಯಾದ ಕಾರಣ ಹೊಸ ಹುರುಪಿನಲ್ಲಿದ್ದೇನೆ.

ಅಲ್ಲದೇ ಮನೆಯಲ್ಲಿ ಹಲವು ಪೂಜಾ ಕಾರ್ಯಕ್ರಮಗಳು ಇರುವುದರಿಂದ ತನಗೆ ಕನಿಷ್ಟ 10 ದಿನ ಪರಿವರ್ತಿತ ಅಥವಾ ಗಳಿಕೆ ರಜೆ ಕರುಣಿಸಬೇಕೆಂದು ಮಾರುತಿ ಮನವಿ ಮಾಡಿದ್ದಾನೆ.

ಇದೇ ವೇಳೆ ಪೇದೆ ಮಾರುತಿ ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರೂ ಹೊಸ ಗಂಡಿಗೆ ದಯವಿಟ್ಟು ರಜೆ ಮಂಜೂರು ಮಾಡಿ ಎಂದು ಇನ್ಸಪೆಕ್ಟರ್ ಅವರಿಗೆ ದಂಬಾಲು ಬಿದ್ದಿದ್ದಾರೆ.