* ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾಗಿ ಕಾರ್ಮಿಕರ ಸಾವು ಪ್ರಕರಣ* ಗಂಭೀರ ಸ್ಥಿತಿಯಲ್ಲಿದ್ದ ಮತ್ತಿಬ್ಬರು ಕಾರ್ಮಿಕರು ‌ಆಸ್ಪತ್ರೆಯಲ್ಲಿ‌ ಸಾವು* ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಐದಕ್ಕೆ ಏರಿಕೆ

ಮಂಗಳೂರು(ಏ.18); ಮಂಗಳೂರು ಹೊರವಲಯದ ಎಸ್ ಇ ಝೆಡ್ ವ್ಯಾಪ್ತಿಯ ಮೀನಿನ ಫ್ಯಾಕ್ಟರಿಯೊಂದರಲ್ಲಿ ಭಾನುವಾರ ರಾತ್ರಿ ತ್ಯಾಜ್ಯ ಟ್ಯಾಂಕರ್ ಶುಚಿಗೊಳಿಸುವ ಸಂದರ್ಭದಲ್ಲಿ ವಿಷಾನಿಲ ದುರಂತವೊಂದು ನಡೆದಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ ಐದಕ್ಕೇರಿದೆ. ಇನ್ನೂ ಮೂವರಿಗೆ ಚಿಕಿತ್ಸೆ ಮುಂದುವರೆದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. 

ಘಟನೆ ಹಿನ್ನೆಲೆ 

ಮೂಲಗಳ ಪ್ರಕಾರ ಎಸ್ ಇ ಝಡ್ ವ್ಯಾಪ್ತಿಯಲ್ಲಿರುವಂತ ಮೀನಿನ ಫ್ಯಾಕ್ಟರಿಯಲ್ಲಿ ಭಾನುವಾರ ರಾತ್ರಿ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕನ್ನು ಶುಚಿಗೊಳಿಸಲು ಕೆಳಗಿಳಿದಿದ್ದಾನೆ. ಈ ಸಂದರ್ಭದಲ್ಲಿ, ಏಕಾಏಕಿ ಅಸ್ವಸ್ಥಗೊಂಡಿದ್ದಾನೆ. ಆತನನ್ನು ರಕ್ಷಿಸಲು ಹೋದ ಉಳಿದ ಎಂಟು ಮಂದಿಯೂ ಕೂಡ ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಐವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವಿಷಾನಿಲ ದುರಂತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದವರನ್ನು ಪಶ್ಚಿಮ ಬಂಗಾಳದ ಮೂಲಕ ಸಮೀರುಲ್ಲಾ ಇಸ್ಲಾಂ, ಉಮರ್ ಫಾರೂಕ್, ನಿಝಾಮುದ್ದೀನ್ ಸಾಬ್ ಎಂದು ಗುರುತಿಸಲಾಗಿದೆ.

"

ಮೀನಿನ ಫ್ಯಾಕ್ಟರಿಯಲ್ಲಿ ಈ ದುರಂತ ಸಂಭವಿಸಿದ್ದು, ಗಂಭೀರವಾಗಿ ಅಸ್ವಸ್ಥಗೊಂಡಂತ ಮಿರಾಜುಲ್ ಇಸ್ಲಾಂ, ಸರಾಫತ್ ಆಲಿ, ಅಝಾನ್ ಅಲಿ, ಕಲೀಮುಲ್ಲಾ ಮತ್ತು ಅಫ್ತರ್ ಮಲಿಕ್ ಎಂಬುವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.