ಕನ್ನಡದ ಕವಿ, ನಾಟಕಕಾರ, ಗೀತರಚನೆಕಾರ ಡಾ। ಎಚ್‌.ಎಸ್.ವೆಂಕಟೇಶಮೂರ್ತಿ (ಎಚ್‌ಎಸ್‌ವಿ) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶನಿವಾರ ನೆರವೇರಿತು.

ಬೆಂಗಳೂರು (ಜೂ.01): ಕನ್ನಡದ ಕವಿ, ನಾಟಕಕಾರ, ಗೀತರಚನೆಕಾರ ಡಾ। ಎಚ್‌.ಎಸ್.ವೆಂಕಟೇಶಮೂರ್ತಿ (ಎಚ್‌ಎಸ್‌ವಿ) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶನಿವಾರ ನೆರವೇರಿತು. ಪಾರ್ಥಿವ ಶರೀರಕ್ಕೆ ಎಚ್‌ಎಸ್‌ವಿ ಅವರ ನಾಲ್ವರು ಪುತ್ರರಾದ ಸುಹಾಸ್‌, ಸುಮಂತ್‌, ಸುಧೀರ್‌, ಸಂಜಯ್‌ ಅವರು ಅಗ್ನಿ ಸ್ಪರ್ಶ ಮಾಡುವುದರೊಂದಿಗೆ ಎಚ್‌ಎಸ್‌ವಿ ಪಂಚಭೂತಗಳಲ್ಲಿ ಲೀನವಾದರು.

ನಗರದ ಚಾಮರಾಜಪೇಟೆಯಲ್ಲಿರುವ ಟಿ.ಆರ್.ಮಿಲ್‌ ಚಿತಾಗಾರದಲ್ಲಿ ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ನಾಲ್ವರು ಪುತ್ರರು ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಸಕಲ ವಿಧಿವಿಧಾನಗಳನ್ನು ಪೂರೈಸಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಂತ್ಯಸಂಸ್ಕಾರ ಪೂರೈಸಿದರು. ಎಚ್‌ಎಸ್‌ವಿ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ರವೀಂದ್ರ ಕಲಾ ಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ಗೀತನಮನ ಸಲ್ಲಿಸಿ, ಸರ್ಕಾರದ ಆದೇಶದಂತೆ ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ವಂದನೆ ಸಲ್ಲಿಸಿದ್ದರು. ಹೀಗಾಗಿ ಶನಿವಾರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸರ್ಕಾರದ ಗೌರವ ವಂದನೆ ಕಾರ್ಯ ಇರಲಿಲ್ಲ. ಇದಕ್ಕೂ ಮುನ್ನ ಹೊಸಕೆರೆಹಳ್ಳಿ ನಿವಾಸದಲ್ಲಿ ಶನಿವಾರ ಬೆಳಗ್ಗೆ 11 ಗಂಟೆ ವರೆಗೂ ಎಚ್.ಎಸ್.ವೆಂಕಟೇಶಮೂರ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಟಿ.ಆರ್. ಮಿಲ್‌ನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಮಾಡಲಾಯಿತು.

ಈ ವೇಳೆ ಎಚ್‌ಎಸ್‌ವಿ ಅವರ ಸ್ನೇಹಿತರೂ, ಸಾಹಿತ್ಯ ವಲಯದ ಡಾ। ನರಹಳ್ಳಿ ಬಾಲಸುಬ್ರಹ್ಮಣ್ಯ, ಧಾರವಾಡದ ರಾಘವೇಂದ್ರ ಪಾಟೀಲ, ನಾ.ದಾಮೋದರ ಶೆಟ್ಟಿ, ಹಿರಿಯ ಕವಿ ಡಾ। ಬಿ.ಆರ್.ಲಕ್ಷ್ಮಣರಾವ್, ಸುಗಮ ಸಂಗೀತ ಗಾಯಕರಾದ ವೈ.ಕೆ.ಮುದ್ದುಕೃಷ್ಣ, ಉಪಾಸನಾ ಮೋಹನ್, ಕಿಕ್ಕೇರಿ ಕೃಷ್ಣಮೂರ್ತಿ, ಗಾಯಕ ವಿಜಯ ಪ್ರಕಾಶ್‌, ರಂಗಕರ್ಮಿ ಶ್ರೀನಿವಾಸ್‌ ಜಿ.ಕಪ್ಪಣ್ಣ, ದುಂಡಿರಾಜ್‌, ಶಶಿಧರ ಭಾರಿಗಾಟ್‌, ಕಸಾಪ ಗೌರವ ಕಾರ್ಯದರ್ಶಿ ನೇ.ಬ.ರಾಮಲಿಂಗಾಶೆಟ್ಟಿ ಸೇರಿ ಹಲವರು, ಕುಟುಂಬ ವರ್ಗದವರು, ಶಿಷ್ಯರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.