ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಮ್ಯೂಸಿಕ್ ಮೈಲಾರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಬಾಗಲಕೋಟೆ ಪೋಕ್ಸೊ ನ್ಯಾಯಾಲಯವು ಆತನ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಸದ್ಯಕ್ಕೆ ಆತ ನ್ಯಾಯಾಂಗ ಬಂಧನದಲ್ಲಿಯೇ ಮುಂದುವರಿಯಲಿದ್ದಾನೆ.

ಬಾಗಲಕೋಟೆ (ಜ.8): ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮ್ಯೂಸಿಕ್ ಮೈಲಾರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಮೈಲಾರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಗಲಕೋಟೆ ಜಿಲ್ಲಾ ನ್ಯಾಯಾಲಯದ ಪೊಕ್ಸೊ (POCSO) ಫಾಸ್ಟ್ ಟ್ರ್ಯಾಕ್ ಕೋರ್ಟ್ ಇಂದು ವಜಾಗೊಳಿಸಿದೆ.

ಮ್ಯೂಸಿಕ್ ಮೈಲಾರಿ ಜಾಮೀನು ಅರ್ಜಿ ತಿರಸ್ಕೃತ

ಮ್ಯೂಸಿಕ್ ಮೈಲಾರಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯು ಜನೆವರಿ 5 ರಂದೇ ಪೂರ್ಣಗೊಂಡಿತ್ತು. ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದ ನ್ಯಾಯಾಧೀಶರು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಇಂದು ಆದೇಶ ಪ್ರಕಟಿಸಿದ್ದಾರೆ. ಆರೋಪಿಗೆ ಜಾಮೀನು ನೀಡಲು ನಿರಾಕರಿಸಿರುವ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ.

ಏನಿದು ಪ್ರಕರಣ?

15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಮ್ಯೂಸಿಕ್ ಮೈಲಾರಿ ಮೇಲಿದೆ. ಈ ಕುರಿತು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಜೈಲೇ ಗತಿ!

ಬಂಧನದ ನಂತರ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಮೈಲಾರಿ, ಜಾಮೀನು ಪಡೆದು ಹೊರಬರಲು ಪ್ರಯತ್ನ ನಡೆಸಿದ್ದರು. ಆದರೆ ಇದೀಗ ನ್ಯಾಯಾಲಯವು ಜಾಮೀನು ನೀಡದ ಕಾರಣ, ಆರೋಪಿಯು ಜೈಲೇ ಗತಿ. ಸಂತ್ರಸ್ತ ಬಾಲಕಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ನ್ಯಾಯಾಲಯದ ಈ ನಿರ್ಧಾರ ಮಹತ್ವದ್ದಾಗಿದೆ.