ಮಂಡ್ಯ, ದಾವಣಗೆರೆ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಸಂಭವ, ಚುನಾವಣಾ ದಿನಾಂಕ ಘೋಷಣೆ ಮುನ್ನವೇ ಭರ್ಜರಿ ಕರ್ನಾಟಕ ಪ್ರವಾಸ
ಬೆಂಗಳೂರು(ಮಾ.02): ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮೊದಲೇ ಈ ತಿಂಗಳಲ್ಲಿ ಮೂರು ಬಾರಿ ರಾಜ್ಯಕ್ಕೆ ಆಗಮಿಸುವ ಸಾಧ್ಯತೆಯಿದೆ. ಈ ಪೈಕಿ ಎರಡು ಬಾರಿ ಆಗಮಿಸುವುದು ನಿಶ್ಚಿತವಾಗಿದೆ. ಮೂರನೇ ಬಾರಿ ಆಗಮಿಸುವ ಕಾರ್ಯಕ್ರಮದ ರೂಪುರೇಷೆ ಅಂತಿಮಗೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ.
ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯನ್ನು ಮಾ.12 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ನಿರೀಕ್ಷೆಯಿದೆ. ಈ ಮೊದಲು 11ರಂದು ಮಂಡ್ಯಕ್ಕೆ ಆಗಮಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಇದೀಗ ಒಂದು ದಿನ ಮುಂದೂಡಲ್ಪಟ್ಟಿದೆ. ಇದು 16ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಮೋದಿ, ಶಾ ಬಂದಾಗಲೆಲ್ಲಾ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆ ಉದ್ಘಾಟನೆ: ಸಿಎಂ ಬೊಮ್ಮಾಯಿ
ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ವಿಶೇಷ ಭದ್ರತಾ ಪಡೆ ಅನುಮತಿ ನೀಡಿದರೆ ಸುಮಾರು 2 ಕಿ.ಮೀ. ದೂರ ರೋಡ್ ಶೋ ಮಾಡಲು ಉದ್ದೇಶಿಸಲಾಗಿದೆ. ರೋಡ್ ಶೋ ನಂತರ ಸಾರ್ವಜನಿಕ ಸಭೆಯನ್ನು ಮದ್ದೂರ ಬಳಿಯ ಗೆಜ್ಜೆಲಗೆರೆಯಲ್ಲಿ ಆಯೋಜಿಸಲಾಗಿದೆ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಇನ್ನು ಈ ತಿಂಗಳ 25ರಂದು ದಾವಣಗೆರೆಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಚುನಾವಣೆಯ ನೀತಿ ಸಂಹಿತೆ ಘೋಷಣೆಯಾಗುವುದು ವಿಳಂಬವಾಗಬಹುದಾದರೆ ಈ ಸಮಾರೋಪ ಸಮಾರಂಭವನ್ನು 28ಕ್ಕೆ ನಡೆಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ.
ಈ ಮಧ್ಯೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಬಗ್ಗೆ ಸಮಾಲೋಚನೆ ನಡೆದಿದೆ. ಈ ಬಗ್ಗೆ ಕೊಪ್ಪಳ ಜಿಲ್ಲಾ ಉಸ್ತುವಾರಿಯೂ ಆಗಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಆಸಕ್ತಿ ತೋರಿದ್ದು, ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
